ಬೆಂಗಳೂರು: ಇತ್ತೀಚೆಗೆ ಶ್ರೀಲಂಕಾದಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆದ ಬೆನ್ನಲ್ಲೇ ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರಿನ ಎಲ್ಲಾ ಬಸ್ ನಿಲ್ದಾಣಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ಪ್ರತಿ ಒಂದು ಗಂಟೆಗೆ ತಪಾಸಣೆ ನಡೆಸಲು ಒಬ್ಬ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಇಂದು ಕೆಎಸ್ಆರ್ಟಿಸಿ ಸಿಬ್ಬಂದಿಯಿಂದ ಪ್ರಯಾಣಿಕರ ಬ್ಯಾಗ್ ತಪಾಸಣೆ ಮಾಡಲಾಯಿತು. ಶ್ವಾನ ಪಡೆಯಿಂದ ಬಸ್ ನಿಲ್ದಾಣಗಳಲ್ಲಿ ತಪಾಸಣೆ ನಡೆಯಿತು. ಕೆಎಸ್ಆರ್ಟಿಸಿಯಿಂದ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ನಿಗಮದ ಎಲ್ಲಾ ಬಸ್ ನಿಲ್ದಾಣಗಳಲ್ಲಿ ಹೆಚ್ಚಿನ ತಪಾಸಣೆ ಹಾಗೂ ಮುನ್ನೆಚ್ಚರಿಕೆ ಕ್ರಮ ವಹಿಸಲು ವಿಭಾಗೀಯ ನಿಯಂತ್ರಣಾಧಿಕಾರಿಗಳು ಹಾಗೂ ಭದ್ರತಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಬಸ್ ನಿಲ್ದಾಣಗಳಲ್ಲಿ ಕಂಡುಬರುವ ಅನುಮಾನಾಸ್ಪದ ವಸ್ತುಗಳು ಮತ್ತು ವಾರಸುದಾರರಿಲ್ಲದ ಲಗೇಜ್ ಬಗ್ಗೆ ಹೆಚ್ಚಿನ ಗಮನಹರಿಸುವಂತೆ ತಿಳಿಸಲಾಗಿದೆ. ಪ್ರತಿ ಗಂಟೆಗೊಮ್ಮೆ ಎಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿಗಳು ಕೇಂದ್ರ ಕಚೇರಿಯ ನಿಯಂತ್ರಣಾ ಕೊಠಡಿಗೆ ಮಾಹಿತಿ ರವಾನಿಸುತ್ತಿರಬೇಕು. 24x7 ಕೇಂದ್ರ ಕಚೇರಿಯ ನಿಯಂತ್ರಣಾ ಕೊಠಡಿಯು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿರಬೇಕೆಂದು ಸೂಚಿಸಲಾಗಿದೆ.

ನಿಗಮದ ಬಸ್ ನಿಲ್ದಾಣಗಳಲ್ಲಿ ಯಾವುದೇ ರೀತಿಯ ಅನುಮಾನಾಸ್ಪದ ವ್ಯಕ್ತಿ/ವಾರಸುದಾರರಿಲ್ಲದ ವಸ್ತುಗಳು ಹಾಗೂ ಇನ್ಯಾವುದೇ ಅಹಿತಕರ ಘಟನೆಗಳು ಗಮನಕ್ಕೆ ಬಂದಲ್ಲಿ ಕೂಡಲೇ ಸಾರ್ವಜನಿಕರು ಬಸ್ ಪ್ರಯಾಣಿಕರು ಸಂಬಂಧಪಟ್ಟ ವಿಭಾಗೀಯ ನಿಯಂತ್ರಣಾಧಿಕಾರಿ/ಘಟಕ ವ್ಯವಸ್ಥಾಪಕರು/ ಬಸ್ ನಿಲ್ದಾಣ ನಿಯಂತ್ರಕರು ಅಥವಾ ಹತ್ತಿರದ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ.
ಸಿಎಂ ಸೂಚನೆ:
ರಾಜ್ಯದಲ್ಲಿ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಿ ತೀವ್ರ ಕಟ್ಟೆಚ್ಚರ ವಹಿಸುವಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪೊಲೀಸ್ ನಿಯಂತ್ರಣ ಕೊಠಡಿಗೆ ವ್ಯಕ್ತಿಯೊಬ್ಬ ಕರೆ ಮಾಡಿ ಉಗ್ರಗಾಮಿಗಳು ದೇಶದೊಳಗೆ ನುಸುಳಿದ್ದಾರೆ ಎಂಬ ಮಾಹಿತಿ ನೀಡಿರುವುದರಲ್ಲಿ ಸತ್ಯಾಂಶವಿಲ್ಲ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ನೀಲಮಣಿ ಎನ್. ರಾಜು ಅವರು, ಮುಖ್ಯಮಂತ್ರಿ ಅವರಿಗೆ ಮಾಹಿತಿ ನೀಡಿದ್ದಾರೆ.

ನಿಯಂತ್ರಣ ಕೊಠಡಿಗೆ ಬಂದಂತಹ ಕರೆಯನ್ನು ಪರಿಶೀಲಿಸಲಾಗಿದ್ದು, ಅದು ಹುಸಿ ಕರೆ ಎಂಬುದು ದೃಢಪಟ್ಟಿದೆ. ಆ ವ್ಯಕ್ತಿ ಈ ಹಿಂದೆಯೂ ಇಂಥದ್ದೇ ಕರೆಯನ್ನು ಮಾಡಿದ್ದ ಎಂದು ಡಿಜಿಪಿ ಅವರು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾರೆ. ಕರೆ ಹುಸಿಯಾಗಿದ್ದರೂ ನಿರ್ಲಕ್ಷ್ಯ ಮಾಡದೆ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸುವಂತೆ ಮುಖ್ಯಮಂತ್ರಿಯವರು ಡಿಜಿಪಿಯವರಿಗೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.