ಬೆಂಗಳೂರು: ಬಸನವನಗುಡಿ ನೆಟ್ಟಕಲ್ಲಪ್ಪ ವೃತ್ತದಲ್ಲಿರುವ ಶ್ರೀ ಗುರುರಾಘವೇಂದ್ರ ಬ್ಯಾಂಕ್ ಆಡಳಿತ ಮಂಡಳಿಯ ಮಾಜಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ವಾಸುದೇವಮಯ್ಯ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪೂರ್ಣಪ್ರಜ್ಞಾ ಲೇಔಟ್ನಲ್ಲಿರುವ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಮನೆ ಬಳಿ ಪರಿಶೀಲನೆ ನಡೆಸುತ್ತಿದ್ದಾರೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ ಮೆಲ್ನೋಟಕ್ಕೆ ತನಿಖೆಗೆ ಹೆದರಿ ಸೂಸೈಡ್ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಬ್ಯಾಂಕ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ಕಂಡು ಬಂದ ಹಿನ್ನೆಲೆ ಆರ್ಬಿಐ ಇವರ ಬ್ಯಾಂಕ್ಗೆ ನೋಟಿಸ್ ನೀಡಿ ಸೀಲ್ ಡೌನ್ ಮಾಡಿತ್ತು.
ಇದರಿಂದ ಸಾವಿರಾರು ಗ್ರಾಹಕರು ಬ್ಯಾಂಕ್ ಮುಂದೆ ಧರಣಿ ನಡೆಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಸಿಇಒ ಆಗಿದ್ದ ವಾಸುದೇವಯ್ಯ ಸೇರಿದಂತೆ ಆಡಳಿತ ಮಂಡಳಿ ಸದಸ್ಯರ ಮನೆಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಪತ್ತೆ ಹಚ್ಚಿದ್ದರು. ಸಾವಿರಾರು ಕೋಟಿ ಅಕ್ರಮವಾಗಿದೆ ಎಂದು ಎಸಿಬಿ ವರದಿ ನೀಡುತ್ತಿದ್ದಂತೆ ಪೊಲೀಸ್ ಇಲಾಖೆಯ ಡಿಜಿ ಪ್ರವೀಣ್ ಸೂದ್ 3 ದಿನಗಳ ಹಿಂದಷ್ಟೇ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿದ್ದರು.
ಬ್ಯಾಂಕಿನಲ್ಲಿ ಅಗತ್ಯ ಭದ್ರತೆ ಕೈಗೊಳ್ಳದೇ 27 ಮಂದಿಗೆ 921 ಕೋಟಿ ರೂ. ಸಾಲ ನೀಡಿರುವ ಮಾಹಿತಿ ಆರ್ಬಿಐ ಮತ್ತು ಎಸಿಬಿ ತನಿಖೆಯಿಂದ ಬಯಲಾಗಿತ್ತು. ಬ್ಯಾಂಕ್ಗೆ ಸಂಬಂಧಪಟ್ಟ ಅಧಿಕಾರಿಗಳ ಮನೆಯಲ್ಲಿ ಅಕ್ರಮ ಆಸ್ತಿ ಕೂಡ ಪತ್ತೆಯಾಗಿತ್ತು ಎನ್ನಲಾಗಿದೆ.