ಬೆಂಗಳೂರು: ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ನಲ್ಲಿ ನಡೆದ ಅವ್ಯವಹಾರ ಸಂಬಂಧ ತಲೆಮರೆಸಿಕೊಂಡಿರುವ ಮೂವರು ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ದು, ಇವರ ಪತ್ತೆಗೆ ಲುಕ್ ಔಟ್ ನೋಟಿಸ್ ಹೊರಡಿಸಿದ್ದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಆರೋಪಿಗಳ ಬಗ್ಗೆ ಸುಳಿವು ನೀಡಿದವರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಸಿಐಡಿ ಘೋಷಿಸಿದೆ.
ಪ್ರಕರಣದಲ್ಲಿ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿರುವ ಹಿಂದಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದ ರಾಮಕೃಷ್ಣಯ್ಯ, ವೇಣುಗೋಪಾಲ್ ಹಾಗೂ ರಾಘವೇಂದ್ರ ನಾಪತ್ತೆಯಾಗಿದ್ದಾರೆ. ಹಲವು ಆಯಾಮಾಗಳಲ್ಲಿ ಸಿಐಡಿ ಪೊಲೀಸರು ಶೋಧ ನಡೆಸಿದರೂ ಎಲ್ಲಿ ಅಡಗಿದ್ದಾರೆ ಎಂಬ ಸುಳಿವು ಲಭ್ಯವಾಗಿಲ್ಲ. ಹೀಗಾಗಿ, ಮೂವರ ಆರೋಪಿಗಳ ಬಗ್ಗೆ ಇರುವಿಕೆ ಮಾಹಿತಿ ನೀಡಿದರೆ ಅಥವಾ ಹುಡುಕಿಕೊಟ್ಟರೆ ಸೂಕ್ತ ಬಹುಮಾನ ನೀಡಲಾಗುವುದು. ಮಾಹಿತಿ ನೀಡಿದವರ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು ಎಂದು ಸಿಐಡಿ ಪೊಲೀಸರು ಘೋಷಿಸಿದ್ದಾರೆ.
ನಿಗದಿಗಿಂತ ಯಾವುದೇ ದಾಖಲೆ ಇಲ್ಲದೆ ಕೋಟ್ಯಂತರ ರೂಪಾಯಿ ಸಾಲ ನೀಡುವ ಮೂಲಕ ಬ್ಯಾಂಕ್ ದಿವಾಳಿಗೆ ಆರೋಪಿಗಳು ಕಾರಣಕರ್ತರಾಗಿದ್ದರು. ಈ ಸಂಬಂಧ ಆರೋಪಿಗಳ ಹಾಗೂ ಸಾಲ ಪಡೆದವರ ಮನೆ ಹಾಗೂ ಕಚೇರಿಗಳ ಮೇಲೆ ಎಸಿಬಿ ದಾಳಿ ನಡೆಸಿತ್ತು. ದಾಳಿಯಲ್ಲಿ ಗ್ರಾಹಕರ ಹಣವನ್ನು ಬ್ಯಾಂಕಿನ ಅಧಿಕಾರಿ ಹಾಗೂ ಸಿಬ್ಬಂದಿ ಸೇರಿ 1,400 ಕೋಟಿ ರೂ. ಅವ್ಯವಹಾರ ನಡೆಸಿರುವುದು ಕಂಡುಬಂದಿತ್ತು.
ಅಲ್ಲದೆ 150 ಕೋಟಿ ರೂ. 60 ಮಂದಿ ಕಾಲ್ಪನಿಕ ಗ್ರಾಹಕರಿಗೆ ಮಂಜೂರು ಮಾಡಿರುವುದನ್ನು ಕಂಡು ಬಂದಿತ್ತು. ಈ ಸಂಬಂಧ ಬ್ಯಾಂಕ್ ಗ್ರಾಹಕರಾಗಿ ಹೆಚ್ಚು ಸಾಲ ಪಡೆದಿರುವ ರಘುನಾಥ್, ಜಸ್ವಂತ್ ಸಿಂಗ್ ಹಾಗೂ ರಾಮಕೃಷ್ಣ ಎಂಬುವರ ಮನೆಗಳ ಮೇಲೆ ಎಸಿಬಿ ದಾಳಿ ನಡೆಸಿ ಮಹತ್ವದ ದಾಖಲಾತಿ ಪತ್ರ ಜಪ್ತಿ ಮಾಡಿ ಪರಿಶೀಲನೆ ನಡೆಸಿತ್ತು.
ಯಶವಂತಪುರದಲ್ಲಿ ಮನೆ ಮಾಡಿಕೊಂಡಿರುವ ರಘುನಾಥ್ ಅವರು ಬ್ಯಾಂಕ್ ನಿಂದ 140 ಕೋಟಿ ಸಾಲ ಪಡೆದಿದ್ದರು. ಅದೇ ರೀತಿ ಹೆಚ್ ಬಿ ಆರ್ ಲೇಔಟ್ ನ ಜಸ್ವಂತ್ ಸಿಂಗ್ ಎಂಬಾತ 150 ಕೋಟಿ ರೂ. ಹಾಗೂ ಚಿಕ್ಕಲ್ಲಸಂದ್ರದಲ್ಲಿರುವ ರಾಮಕೃಷ್ಣ ಎಂಬುವರು 40 ಕೋಟಿ ರೂ. ಸಾಲ ಪಡೆದಿದ್ದ ಆರೋಪದಡಿ ಎಸಿಪಿ ಎಸ್ಪಿ ಅಬ್ದುಲ್ ಅಹ್ಮದ್ ನೇತೃತ್ವದಲ್ಲಿ ದಾಳಿ ನಡೆಸಿ ತನಿಖೆ ನಡೆಸುತ್ತಿದ್ದಾರೆ.
ಬ್ಯಾಂಕ್ ಆಡಳಿತ ಮಂಡಳಿ ಆರ್ಥಿಕ ಅಪರಾಧ ನಡೆಸಿದ ಆರೋಪದಡಿ ಆರ್ ಬಿಐ ನೋಟಿಸ್ ನೀಡಿದ ಪರಿಣಾಮ ಬ್ಯಾಂಕ್ ವಹಿವಾಟು ಸ್ಥಗಿತಗೊಳಿಸಿತ್ತು. ಇದರಿಂದ ಸಾವಿರಾರು ಠೇವಣಿದಾರರು ಬ್ಯಾಂಕಿನಿಂದ ಹಣ ವಿತ್ ಡ್ರಾ ಮಾಡಲು ಸಾಧ್ಯವಾಗಿರಲಿಲ್ಲ. ಇತ್ತೀಚೆಗೆ ಆರ್ಬಿಐ ಪರಿಷ್ಕೃತ ಆದೇಶದಲ್ಲಿ ಹಿರಿಯ ನಾಗರಿಕರಿಗೆ 1 ಲಕ್ಷ ರೂ. ಹಾಗೂ ಉಳಿದ ಗ್ರಾಹಕರಿಗೆ 35 ಸಾವಿರ ರೂ. ಒಂದು ಬಾರಿ ವಿತ್ ಡ್ರಾ ಮಾಡಿಕೊಳ್ಳಲು ಅವಕಾಶ ಕಲ್ಪಿಸಿತ್ತು. ಪ್ರಕರಣದ ಪ್ರಮುಖ ಆರೋಪಿ ವಾಸುದೇವಮಯ್ಯ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದರು.