ಬೆಂಗಳೂರು : ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿರುವ ರಾಜ್ಯದ ಬಹುದೊಡ್ಡ ಪಂಚಮಸಾಲಿ ಸಮಾಜವನ್ನು 2ಎ ಮೀಸಲಾತಿಗೆ ಸೇರಿಸುವಂತೆ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮಿಗಳು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮಾಜವನ್ನು 2ಎ ಮೀಸಲಾತಿ ಹಾಗೂ ಲಿಂಗಾಯತ ಎಲ್ಲ ಸಮಾಜಗಳಿಗೆ ಕೇಂದ್ರ ಸರ್ಕಾರದ ಓಬಿಸಿ ಮೀಸಲಾತಿಗೆ ಸೇರಿಸಬೇಕೆಂದು ಒತ್ತಾಯಿಸಿದರು.
ಈ ಹಿಂದೆ ಅಕ್ಟೋಬರ್ 28ರಂದು ಉಪವಾಸ ಸತ್ಯಾಗ್ರಹ ನಡೆಸಿದಾಗ ಮುಖ್ಯಮಂತ್ರಿಗಳು ಕರೆ ಮಾಡಿ ಉಪವಾಸ ಅಂತ್ಯ ಮಾಡುವಂತೆ ಮನವಿ ಮಾಡಿದರು. ಆಗ ನವೆಂಬರ್ 28ರವರೆಗ ಗಡುವು ನೀಡಲಾಗಿತ್ತು. ಆದರೆ, ಇದೀಗ ಆ ಗಡುವು ಎಲ್ಲ ಮುಗಿದಿದೆ. ನಮ್ಮ ಬೇಡಿಕೆ ಮಾತ್ರ ಈಡೇರಿಕೆ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ರೈತರು, ಕಾರ್ಮಿಕರ ವಿರೋಧಿ ಕಾಯ್ದೆಗಳ ರದ್ದು : ಸಿದ್ದರಾಮಯ್ಯ ಭರವಸೆ
ಸರ್ಕಾರದಿಂದ ಸೂಕ್ತ ಪ್ರತಿಕ್ರಿಯೆ ವ್ಯಕ್ತವಾಗದ ಕಾರಣ, ಡಿಸೆಂಬರ್ 23ರಿಂದ ಕೂಡಲಸಂಗಮದಿಂದ ಬೃಹತ್ ಪಾದಯಾತ್ರೆಗೆ ನಿರ್ಧರಿಸಲಾಗಿತ್ತು. ಇದೀಗ ಸಚಿವ ಸಿ ಸಿ ಪಾಟೀಲ್ ಮಧ್ಯಪ್ರವೇಶಿಸಿದ್ದು, ಮತ್ತೊಮ್ಮೆ ಸಿಎಂ ಬಳಿ ಮಾತನಾಡುವುದಾಗಿ ತಿಳಿಸಿದ್ದು, ಗಡುವು ಕೇಳಿದ್ದಾರೆ ಎಂದರು.
ಎರಡು ದಿನದಲ್ಲಿ ಹೋರಾಟದ ತೀವ್ರತೆಯನ್ನು ಸಿಎಂಗೆ ಮನವರಿಕೆ ಮಾಡುತ್ತೇವೆ. ನಮ್ಮ ಮನವಿಗೆ ಸ್ಪಂದಿಸದೆ ಇದ್ದರೆ ಜನವರಿ 14 ರಿಂದ ಫೆಬ್ರವರಿವರೆಗೂ ರಾಜ್ಯಾದ್ಯಂತ ಪಾದಯಾತ್ರೆ ಮಾಡುತ್ತೇವೆ. ಕೂಡಲಸಂಗಮದಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡಿ ವಿಧಾನಸೌಧ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.