ಬೆಂಗಳೂರು : ಯಡಿಯೂರಪ್ಪ ನಾಡಿನ ಮುಖ್ಯಮಂತ್ರಿಯಾಗಿದ್ದು, ಗೌರವಯುತ ಸ್ಥಾನದಲ್ಲಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಘನತೆ, ಗೌರವ ಅರಿಯದೇ ನಾಲಿಗೆ ಹರಿಬಿಡಲಾರಂಭಿಸಿ ತಮ್ಮ ಗೌರವಕ್ಕೆ ಚ್ಯುತಿ ತಂದುಕೊಂಡಿದ್ದಾರೆ ಎಂದು ಬಿಡಿಎ ಅಧ್ಯಕ್ಷ ಎಸ್ ಆರ್ ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೀಗೆ ಮಾತನಾಡುವುದು ನನಗೆ ರೂಢಿ ಎಂದು ಮಾತು ಮಾತಿಗೆ ಹೇಳುವ ಸಿದ್ದರಾಮಯ್ಯ, ಎಂತಹ ಉನ್ನತ ಹುದ್ದೆಯಲ್ಲಿರುವವರನ್ನೂ ಏಕವಚನದಲ್ಲಿ ಸಂಭೋದಿಸುವುದು ತಪ್ಪು. ಸಮಾಜಕ್ಕೆ ಕೆಟ್ಟ ಸಂದೇಶ ನೀಡುತ್ತದೆ ಎಂಬ ಸಾಮಾನ್ಯ ಜ್ಞಾನ ಮೊದಲು ಅರಿಯಲಿ.
ಚುನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯಗೆ ನಾಲಿಗೆ ಮೇಲೆ ಹಿಡಿತವೇ ಇಲ್ಲದಂತಾಗಿರುತ್ತದೆ. ಈಗ ರಾಜ್ಯದಲ್ಲಿ ಉಪಚುನಾವಣೆಗಳು ನಡೆಯುತ್ತಿರುವ ವೇಳೆ ಜನರನ್ನು ಸೆಳೆದುಕೊಳ್ಳಲೆಂದು ನಮ್ಮ ನಾಯಕರ ವಿರುದ್ಧ ಇಲ್ಲಸಲ್ಲದ ಟೀಕೆ ಮಾಡುತ್ತಿದ್ದಾರೆ. ಅನ್ನಭಾಗ್ಯದ ವಿಚಾರದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಯಡಿಯೂರಪ್ಪ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದಾರೆ.
ಬಡವರಿಗೆ 7 ಕೆಜಿ ಅಕ್ಕಿ ಕೊಡುತ್ತಿದ್ದೆ. ಆದರೆ, ಯಡಿಯೂರಪ್ಪ 5 ಕೆಜಿಗೆ ಇಳಿಸಿದ್ದಾನೆ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ತಮ್ಮ ಸಂಸ್ಕೃತಿಯನ್ನು ರಾಜ್ಯದ ಜನತೆ ಮುಂದಿಟ್ಟಿದ್ದಾರೆ. ಸಿದ್ದರಾಮಯ್ಯನವರಿಗಿಂತ ಎರಡು ಪಟ್ಟು ಮಾತನಾಡಲು ನಮ್ಮ ಬಿಜೆಪಿ ನಾಯಕರಿಗೂ ಬರುತ್ತದೆ.
ಆದರೆ, ನಾವು ಸಿದ್ದರಾಮಯ್ಯ ಮಟ್ಟಕ್ಕೆ ಇಳಿಯುವುದಿಲ್ಲ. ನಮಗೊಂದು ಸಂಸ್ಕೃತಿಯನ್ನು ಪಕ್ಷ ಕಲಿಸಿಕೊಟ್ಟಿದೆ ಎಂದಿದ್ದಾರೆ. ಯಡಿಯೂರಪ್ಪ ಏನು ಅವರಪ್ಪನ ಮನೆಯಿಂದ ದುಡ್ಡು ತರುತ್ತಾರಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಹಾಗಾದರೆ, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅವರಪ್ಪನ ಮನೆಯಿಂದ ಹಣ ತಂದು ಆಡಳಿತ ನಡೆಸಿದ್ದರಾ ಎಂದು ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.