ಬೆಂಗಳೂರು : ಮೋದಿ ನೇತೃತ್ವದ ಎನ್ಡಿಎ ಸರ್ಕಾರ ತಾನು ಮಾಡಿದ ತಪ್ಪನ್ನು ಯುಪಿಎ ಸರ್ಕಾರದ ಮೇಲೆ ಹೊರಿಸಲು ಪ್ರಯತ್ನ ಮಾಡುತ್ತಿದೆ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ ಆರೋಪಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಪ್ರತಿಯೊಂದು ಬೆಲೆ ಏರಿಕೆಗೆ ಹಿಂದಿನ ಯುಪಿಎ ಸರ್ಕಾರವೇ ಕಾರಣ ಎಂದು ಹೇಳಿಕೊಳ್ಳುವ ಮೂಲಕ ಮೋದಿ ಸರ್ಕಾರ ತನ್ನ ತಪ್ಪನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಪೆಟ್ರೋಲ್ ಬೆಲೆ 70-75 ರೂ, ಡೀಸೆಲ್ ಬೆಲೆ 50-60 ರೂ ಆಸುಪಾಸಿನಲ್ಲಿತ್ತು. ನರೇಂದ್ರ ಮೋದಿಯವರೇ ಅಚ್ಛೇ ದಿನ್ ಭರವಸೆ ನೀಡಿದ ನೀವು ಈಗ ಪೆಟ್ರೋಲ್ ಬೆಲೆಯನ್ನು 100 ರೂ. ವರೆಗೆ ಏರಿಸಿದ್ದೀರಿ. ಯಾವ ಮುಖ ಇಟ್ಟುಕೊಂಡು ಇದಕ್ಕೆ ಹಿಂದಿನ ಸರ್ಕಾರಗಳು ಕಾರಣ ಎಂದು ಹೇಳುತ್ತೀರಿ..? ಎಂದಿದ್ದಾರೆ.
ಯುಪಿಎ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್ ಮೇಲಿದ್ದದ್ದು 10.39ರೂ ತೆರಿಗೆ, ನೀವು ಅದನ್ನು 32.98 ಕ್ಕೆ ಏರಿಸಿದ್ದೀರಿ. ಡೀಸೆಲ್ ಮೇಲಿದ್ದ 4.50 ರೂ ತೆರಿಗೆಯನ್ನು 31.83ಕ್ಕೆ ಏರಿಸಿದ್ದೀರಿ. ನರೇಂದ್ರ ಮೋದಿಯವರೇ ಜನಸಾಮಾನ್ಯರ ಮೇಲೆ ತೆರಿಗೆ ಭಯೋತ್ಪಾದನೆ ಮಾಡುತ್ತಿರುವ ನೀವು ಬೆಲೆ ಏರಿಕೆಗೆ ಹಿಂದಿನ ಸರ್ಕಾರಗಳು ಕಾರಣ ಅಂತ ಸುಳ್ಳು ಹೇಳುತ್ತೀರಲ್ಲ ಎಂದರು.
ಪೆಟ್ರೋಲ್ ಮೇಲಿನ ತೆರಿಗೆಯನ್ನು ಶೇ 258 ರಷ್ಟು ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಶೇ 820 ರಷ್ಚು ಏರಿಕೆ ಮಾಡಿದ ಮಹತ್ ಸಾಧನೆ ಮಾಡಿದ್ದೀರಿ ನರೇಂದ್ರ ಮೋದಿಯವರೇ. ಈಗ ನೀವು ಮಾಡಿರೋ ತಪ್ಪನ್ನು ಹಿಂದಿನ ಸರ್ಕಾರಗಳ ತಲೆಗೆ ಕಟ್ಟಿದರೆ ಜನ ನಿಮ್ಮ ಸುಳ್ಳುಗಳನ್ನು ನಂಬುವುದಿಲ್ಲ ಎಂದಿದ್ದಾರೆ.