ಬೆಂಗಳೂರು; 'ಕಾವೇರಿ ಕರೆ' ಗಿಡವೊಂದನ್ನು ನೆಡುವ ಮೂಲಕ ಕಾವೇರಿ ನದಿ ಪಾತ್ರವನ್ನು ಉಳಿಸಿ ಎಂಬ ಘೋಷ ವಾಕ್ಯದೊಂದಿಗೆ ಆರಂಭವಾದ ಅಭಿಯಾನ ಇಂದು ನಗರದಲ್ಲಿ ನಡೆದಿದ್ದು, ಎಂ.ಜಿ.ರಸ್ತೆಯಲ್ಲಿ 48 ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಕಾವೇರಿ ಕಾಲಿಂಗ್ ಅಭಿಯಾನಕ್ಕೆ ಕೈ ಜೋಡಿಸಿದ್ದರು. ನದಿಯನ್ನು ಉಳಿಸುವ ಆಂದೋಲನಕ್ಕೆ ನಾಗರಿಕರು ಹೇಗೆ ಭಾಗಿಯಾಗಬಹುದು ಎಂಬುದನ್ನು ವಿವರಿಸುವ ಫಲಕಗಳೊಂದಿಗೆ ಸ್ವಯಂಸೇವಕರು ಮಾಹಿತಿ ನೀಡಿದರು.
ಬೆಳ್ಳಂಬೆಳಗ್ಗೆ ಬೆಂಗಳೂರಿನ ಪ್ರಮುಖ ರಸ್ತೆಗಳು ನೀಲಿ ಬಣ್ಣದ ಫಲಕಗಳೊಂದಿಗೆ ರಸ್ತೆಗೆ ಇಳಿದವರನ್ನು ಸ್ವಾಗತಿಸುತ್ತಿದ್ದವು.ಹಲವು ಮಂದಿ ವಾಹನ ಚಾಲಕರು ಸ್ವಯಂ ಪ್ರೇರಿತರಾಗಿ ವಾಹನ ನಿಲ್ಲಿಸಿ ಮಾಹಿತಿ ಪಡೆದುಕೊಂಡರು. ಇದಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿದರು ಮತ್ತು ಕರಪತ್ರಗಳನ್ನು ಪಡೆದುಕೊಂಡರು.
ಕಳೆದ ಜುಲೈ ತಿಂಗಳಲ್ಲಿ ಇಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಚಾಲನೆ ನೀಡಿರುವ ಈ ಅಭಿಯಾನ ಕಾವೇರಿ ನದಿ ಪಾತ್ರದ ಜಿಲ್ಲೆಗಳಿಗೆ ತಲುಪಿದೆ.ಕಾವೇರಿ ನದಿಯ ತೀವ್ರವಾಗಿ ಕ್ಷೀಣಿಸಿದ ಹರಿವಿನ ಮಟ್ಟವನ್ನು ಪುನಃಸ್ಥಾಪಿಸುವ ಚಳುವಳಿಯಾಗಿದೆ. ಇದು ಕಾವೇರಿ ಜಲಾನಯನ ಪ್ರದೇಶದ ರೈತರು ತಮ್ಮ ಸ್ವಂತ ಕೃಷಿಭೂಮಿಯಲ್ಲಿ 242 ಕೋಟಿ ಮರಗಳನ್ನು ಆರ್ಥಿಕವಾಗಿ ಲಾಭದಾಯಕ ಮಾದರಿಯಲ್ಲಿ ನೆಡಲು ಅನುವು ಮಾಡಿಕೊಡುತ್ತದೆ, ಇದು ಅಂತರ್ಜಲ ಮಟ್ಟವನ್ನು ಪುನರ್ಭರ್ತಿ ಮಾಡುವ ಮೂಲಕ ಮತ್ತು ನದಿಯಲ್ಲಿ ಮೂಲ ಹರಿವನ್ನು ಹೆಚ್ಚಿಸಿ,ಗಮನಾರ್ಹ ಪರಿಸರ ಪರಿಣಾಮವನ್ನು ಬೀರುತ್ತದೆ.
ಸೆಪ್ಟೆಂಬರ್ 8 ರಂದು ಬೆಂಗಳೂರಿನ ತ್ರಿಪುರ ವಾಸಿನಿ ಅರಮನೆ ಮೈದಾನದಲ್ಲಿ ಸಂಜೆ 5: 30 ಕ್ಕೆ ಕಾವೇರಿ ಕಾಲಿಂಗ್ ಕುರಿತು ಸಾರ್ವಜನಿಕ ಕಾರ್ಯಕ್ರಮದಲ್ಲಿ ಸದ್ಗುರು ಜಗ್ಗಿ ವಾಸುದೇವ್ ಭಾಷಣ ಮಾಡಲಿದ್ದಾರೆ.