ಬೆಂಗಳೂರು: ನಗರದಲ್ಲಿ ಸೈಬರ್ ಕಳ್ಳರ ಹಾವಳಿ ಹೆಚ್ಚಾಗುತ್ತಿದ್ದಂತೆ, ಸದ್ಯ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಸೈಬರ್ ಕ್ರೈಂ ಖದೀಮರ ಮೇಲೆ ಹದ್ದಿನ ಕಣ್ಣಿಡಲು ಸೂಚನೆ ನೀಡಿದ್ದರು.
ಸೈಬರ್ ಹ್ಯಾಕರ್ಸ್ಅನ್ನು ಮಟ್ಟ ಹಾಕಲು ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರ ನೇತೃತ್ವದಲ್ಲಿ ರಿಸರ್ಚ್ ವರ್ಕ್ ಟೀಂ ಸಜ್ಜಾಗಿದೆ. ಯಾವ ರೀತಿ ಸೈಬರ್ ಹ್ಯಾಕರ್ಸ್ ಸೈಬರ್ ಅಪರಾಧಗಳನ್ನು ಮಾಡುತ್ತಿದ್ದಾರೆ. ಎಂತಹ ಕೇಸ್ಗಳು ಅತಿಯಾಗಿ ದಾಖಲಾಗುತ್ತಿವೆ ಎನ್ನುವ ಪಟ್ಟಿ ಸಿದ್ಧಪಡಿಸಿ, ರಿಸರ್ಚ್ ವರ್ಕ್ ಟೀಂ ತನಿಖೆ ನಡೆಸಲಿದೆ. ಈ ವಿಶೇಷ ಟೀಂ ನಲ್ಲಿ ಸೈಬರ್ ಎಕ್ಸ್ಪರ್ಟ್, ಡಿಸಿಪಿ ಸೈಬರ್ ಇನ್ಸ್ ಪೆಕ್ಟರ್ ಗಳು ಹಾಗೆ ತಂತ್ರಜ್ಞಾನದ ಅರಿವು ಇರುವ ಸಿಬ್ಬಂದಿ ಇರಲಿದ್ದಾರೆ.
ಡಾರ್ಕ್ ವೆಬ್ ಮೂಲಕ ಕರಾಳ ದಂಧೆ:
ಸದ್ಯ ಜಗತ್ತು ಆನ್ಲೈನ್ ಮಯವಾಗಿದೆ. ಹೀಗಾಗಿ ಸೈಬರ್ ಖದೀಮರು ಡಾರ್ಕ್ ವೆಬ್ ಮೂಲಕ ದಂಧೆ ನಡೆಸಲು ಮುಂದಾಗಿದ್ದಾರೆ. ಡಾರ್ಕ್ ವೆಬ್ ಜಾಗತಿಕ ಅಪರಾಧ ಲೋಕದ ಹೆಡ್ ಆಫೀಸ್ ರೀತಿ ಕಾರ್ಯ ನಿರ್ವಹಿಸುತ್ತದೆ. ಹಾಗೆ ಐಸಿಸ್ ನಂತಹ ಭಯೋತ್ಪಾದಕ ಸಂಘಟನೆಗಳು ಅತ್ಯಂತ ಗುಪ್ತವಾಗಿ ಸಂಗ್ರಹ ಮಾಡಿದ ಮಾಹಿತಿಗಳನ್ನು, ಇ ವೆಬ್ ಮೂಲಕ ಕದಿಯುತ್ತಿದ್ದಾರೆ. ಇಲ್ಲಿ ಮಕ್ಕಳ ಅಶ್ಲೀಲ, ಫೋಟೋ ವಿಡಿಯೋ ಪ್ರಮುಖವಾಗಿ ಡ್ರಗ್ಸ್ ಮಾರಾಟ, ಅಕ್ರಮ ಮಾರಕಾಸ್ತ್ರಗಳ ಮಾರಾಟ, ಮ್ಯಾಚ್ ಫಿಕ್ಸಿಂಗ್, ಬಾಡಿಗೆ ಹಂತಕರ ನೇಮಕ, ಇನ್ನೂ ಅನೇಕ ವಿಚಾರಗಳು ಡಾರ್ಕ್ ವೆಬ್ ನಲ್ಲಿ ವಿನಿಯಮ ಆಗುತ್ತವೆ. ಬಹುತೇಕ ಮಂದಿ ಡಾರ್ಕ್ ವೆಬ್ನ್ನ ತಮ್ಮ ಮಾಫಿಯಾ ಬಳಕೆಗೆ ಬಳಸುತ್ತಿದ್ದಾರೆ. ಹೀಗಾಗಿ ಸಂದೀಪ್ ಪಾಟೀಲ್ ಅವರು ಡಾರ್ಕ್ ವೆಬ್ ಜಾಲ ಪತ್ತೆ ಹಚ್ಚಲು ಫೀಲ್ಡ್ಗೆ ಇಳಿದಿದ್ದಾರೆ.
ಕ್ಯೂ ಆರ್ ಕೋಡ್ ಮೇಲೆ ನಿಗಾ:
ಬಹುತೇಕವಾಗಿ ಸದ್ಯ ಮನೆಯಲ್ಲಿ ಇದ್ದುಕೊಂಡು ಜನ ಪರ್ಚೇಸಿಂಗ್, ಪೇಮೆಂಟ್ ಹೀಗೆ ಎಲ್ಲವನ್ನೂ ಕೂಡ ಆನ್ ಲೈನ್ನಲ್ಲೇ ನಡೆಸುತ್ತಿದ್ದಾರೆ. ಇದನ್ನ ದುರ್ಬಳಕೆ ಮಾಡಿರುವ ಖದೀಮರು ವಸ್ತು ತೆಗೆದುಕೋಳ್ಳುವ ಸಾರ್ವಜನಿಕರಿಗೆ ಕ್ಯೂ ಆರ್ ಕೊಡ್ ಕಳುಹಿಸಿತ್ತಾರೆ. ಒಮ್ಮೆ ಸ್ಕ್ಯಾನ್ ಮಾಡಿದ ತಕ್ಷಣ ಅಕೌಂಟ್ ನಿಂದ ಹಣ ಡೆಬಿಟ್ ಆಗಿ ತಾವೇ ಇದ್ದ ಜಾಗದಿಂದ ಸೈಬರ್ ಖದೀಮರು ಹಣವನ್ನು ಲೂಟಿ ಮಾಡುತ್ತಿದ್ದಾರೆ. ಸದ್ಯ ಇಂತಹ ಬಹುತೇಕ ಪ್ರಕರಣಗಳು ನಗರದಲ್ಲಿ ನಡೆದಿವೆ.
ಸದ್ಯ ಕೊರೊನಾ ಇರುವ ಕಾರಣ ಅಪರಾಧ ಪ್ರಕರಣಗಳು ಕಡಿಮೆಯಾಗುತ್ತಿದ್ದರು ಕೂಡ, ಸೈಬರ್ ಅಪರಾಧದಂತಹ ಪ್ರಕರಣಗಳು ಅತಿ ಹೆಚ್ಚಾಗಿ ನಡೆಯುತ್ತಿದ್ದು, ಹೀಗಾಗಿ ಸೈಬರ್ ಖದೀಮರನ್ನ ಮಟ್ಟ ಹಾಕೋದಕ್ಕೆ ಈಗಾಗಲೇ ಸಿಸಿಬಿ ತಂಡ ರೆಡಿಯಾಗಿದೆ. ಮತ್ತೊಂದೆಡೆ ಸೈಬರ್ ಖದೀಮರು ದೇಶದ ಬೇರೆ ಬೇರೆ ಕಡೆ ಇದ್ದುಕೊಂಡು ಈ ರೀತಿ ಕೃತ್ಯ ಮಾಡುವ ಕಾರಣ ಪೊಲೀಸರ ತನಿಖೆಗೆ ಕೊಂಚ ಅಡೆತಡೆಯಾಗುವ ಸಾಧ್ಯತೆ ಹೆಚ್ಚಿದೆ.