ಬೆಂಗಳೂರು: ಜಗತ್ತಿನ ಸರಿಯಾದ ವಿಚಾರಗಳ ಅರಿವು ಅನ್ನೋದೆ ಇಲ್ಲದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು, ಕೊರೊನಾ ಸೋಂಕು ತಡೆಗಟ್ಟಲು ಹೇರಿದ ಲಾಕ್ಡೌನ್ ಸಂದರ್ಭದಲ್ಲಿ ಹೆಚ್ಚಾಗಿವೆ ಅನ್ನೋ ಆತಂಕಕಾರಿ ವಿಚಾರ ಬಯಲಾಗಿದೆ.
ಲಾಕ್ಡೌನ್ ಅನ್ನೋದು ಮಕ್ಕಳ ಪಾಲಿಗೆ ಕಪ್ಪು ಚುಕ್ಕೆ ಎಂದೇ ಹೇಳಬಹುದು. ಲಾಕ್ಡೌನ್ ಸಂದರ್ಭದಲ್ಲಿ ಜನರು ಹೆಚ್ಚಾಗಿ ನಾಲ್ಕು ಗೋಡೆಗಳ ಮಧ್ಯೆ ಮನೆಗಳಲ್ಲಿಯೇ ಇರುತ್ತಿದ್ದರು. ಹಾಗೆ ಇದೇ ಸಂದರ್ಭದಲ್ಲಿ ಬಹುತೇಕ ಮಂದಿ ಮಕ್ಕಳ ಮೇಲೆ ತಮ್ಮ ಪೌರುಷ ತೋರಿಸಿದ್ದು, ಇದು ಬಹಳಷ್ಟು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಮಕ್ಕಳ ಮೇಲಿನ ದೈಹಿಕ ಹಾಗೂ ಲೈಂಗಿಕ ದೌರ್ಜನ್ಯದ ಬಗ್ಗೆ ಹೋರಾಟಗಾರರು ಮತ್ತೆ ಧ್ವನಿ ಎತ್ತಿ ಲಾಕ್ಡೌನ್ ವೇಳೆ ಆದ ಕಹಿ ಘಟನೆಗಳಿಗೆ ನ್ಯಾಯ ಕೊಡಿಸಿ ಎಂದು ಆಗ್ರಹಿಸುತ್ತಿದ್ದಾರೆ.
ಕರ್ನಾಟಕ ರಾಜ್ಯ ಅಪರಾಧ ದಾಖಲೆಗಳ ಬ್ಯೂರೊ ಹೇಳುವ ಪ್ರಕಾರ, 2016 ರಲ್ಲಿ 1701 ಪ್ರಕರಣ, 2017ರಲ್ಲಿ 1965 ಪ್ರಕರಣ, 2018ರಲ್ಲಿ 2055 ಪ್ರಕರಣ, 2019ರಲ್ಲಿ 2152 ಪ್ರಕರಣ, 2020ರಲ್ಲಿ ಕೇವಲ 7 ತಿಂಗಳಿನಲ್ಲಿ 811 ಪ್ರಕರಣಗಳು ರಾಜ್ಯದಲ್ಲಿ ವರದಿಯಾಗಿವೆ. ಇನ್ನೂ ಕೆಲವು ವರದಿಯಾಗದೇ ಹಾಗೆಯೇ ಮರೆಯಾಗಿವೆ ಎನ್ನಲಾಗುತ್ತಿದೆ.
ಸಿಲಿಕಾನ್ ಸಿಟಿ ವಿಚಾರಕ್ಕೆ ಬಂದರೆ ಈ ಸಿಟಿ ನಾನಾ ಹೆಸರು ಪಡೆದಿದ್ದು, ಹಲವಾರು ತಂತ್ರಜ್ಞಾನದ ಮಾಹಿತಿ ಇರುವ ಈ ಸಿಟಿಯಲ್ಲಿ ಕೂಡ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣ ಹೆಚ್ಚಾಗಿದೆ. ನಗರದಲ್ಲಿ ವನಿತಾ ಸಹಾಯ ವಾಣಿಯಲ್ಲಿ 2019 ಮಾರ್ಚ್‌ನಿಂದ 2020ರ ಮಾರ್ಚ್ವರೆಗೆ 188 ಕೇಸ್ ದಾಖಲಾಗಿದೆ. ಆದರೆ, ಏಪ್ರಿಲ್ನಲ್ಲಿ ಕೊರೊನಾ ಸೋಂಕಿನ ಸಂಖ್ಯೆ ಹೆಚ್ಚಾಗ್ತಾ ಹೋದ ಕಾರಣ ಲಾಕ್ಡೌನ್ ಹೇರಲಾಗಿತ್ತು. ಈ ವೇಳೆ, ಏಪ್ರಿಲ್ನಲ್ಲಿ 20 ಪ್ರಕರಣ, ಮೇನಲ್ಲಿ 38 ಪ್ರಕರಣ, ಜೂನ್ನಲ್ಲಿ 64 ಪ್ರಕರಣಗಳು ದಾಖಲಾಗಿವೆ. ವರ್ಷಕ್ಕೆ 188 ಕೇಸ್ ದಾಖಲಾಗುವ ಪೈಕಿ ಲಾಕ್ಡೌನ್ ಟೈಂನಲ್ಲಿ ಹೆಚ್ಚಾಗಿ ಕೇಸ್ ದಾಖಲಾಗಿವೆ. ಲಾಕ್ಡೌನ್ ಟೈಂನಲ್ಲಿ ಬಹುತೇಕ ಮಂದಿ ಮನೆಯಲ್ಲೇ ಇದ್ದ ಕಾರಣ ಹಲವು ಕಹಿ ಘಟನೆಗಳು ನಡೆದಿವೆ.
ಲಾಕ್ಡೌನ್ ಸಮಯದಲ್ಲಿ ಸರ್ಕಾರ, ಪೊಲೀಸರು, ಸಂಘಟನೆಗಳು ಹೀಗೆ ಎಲ್ಲರ ಚಿತ್ತ ಕೊರೊನಾ ಸೋಂಕನ್ನ ಕಡಿಮೆ ಮಾಡೋದರತ್ತ ಮಾತ್ರ ಇತ್ತು. ಈ ಅವಧಿಯಲ್ಲಿ ದೌರ್ಜನ್ಯ ಮಾಡುವವರು ಕ್ರಿಯಾಶೀಲರಾಗಿದ್ದು, ಮಕ್ಕಳಿಗೆ ಸುರಕ್ಷತೆ ಇಲ್ಲದ ಹಾಗೆ ಮಾಡಿದ್ದಾರೆ. ನಿಜವಾಗಿ ನೋಡುವುದಾದರೆ ಎಲ್ಲ ಸ್ತಬ್ಧವಾದ ಸಂದರ್ಭದಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಕಡಿಮೆಯಾಗಬೇಕಿತ್ತು. ಆದರೆ, ಈ ಲಾಕ್ಡೌನ್ ವೇಳೆ ಮಕ್ಕಳ ಮೇಲೆ ದೌರ್ಜನ್ಯ ನಡೆದಿರುವುದು ನಿಜಕ್ಕೂ ವಿಪರ್ಯಾಸ.
ಈ ಬಗ್ಗೆ ಜನವಾದಿ ಸಂಘಟನೆ ಹೋರಾಟಗಾರ್ತಿ ವಿಮಲ ಮಾತನಾಡಿ, ಕೊರೊನಾದಿಂದ ಬಹಳಷ್ಟು ಸಮಸ್ಯೆ ಆಗಿದೆ. ಆದರೆ, ಬೇಸರದ ಸಂಗತಿ ಎಂದರೆ ಪುಟ್ಟ ಮಕ್ಕಳನ್ನ ಕೂಡ ಕೊರೊನಾ ಬೇರೆ ರೀತಿಯಾಗಿ ಕಾಡಿದೆ. ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣ ಈ ಸಂದರ್ಭದಲ್ಲಿ ಹೆಚ್ಚಿದೆ. ಲಾಕ್ಡೌನ್ ಸಂದರ್ಭದಲ್ಲಿ ಸರಿಯಾದ ಆಡಳಿತಾತ್ಮಕ ನಿರ್ಧಾರ ತೆಗೆದುಕೊಳ್ಳದೇ ಇರುವುದೇ ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಕಾರಣ ಎಂದಿದ್ದಾರೆ. ಸರ್ಕಾರದ ವ್ಯಾಪ್ತಿಯಲ್ಲಿ ಬರುವ ಮಕ್ಕಳ ದೌರ್ಜನ್ಯ ತಡೆಗೆ ಇರುವ ಏಜೆನ್ಸಿ ಇದಕ್ಕೆ ಕಡಿವಾಣ ಹಾಕಬೇಕು. ಆದರೆ, ಜನವಾದಿ ಮಹಿಳಾ ಸಂಘಟನೆಗೆ ಬಂದಿರುವ ಮಾಹಿತಿ ಪ್ರಕಾರ ಕೊರೊನಾ ಇರುವ ವೇಳೆ, ಸುರಕ್ಷ ದೃಷ್ಟಿಯಿಂದ ಮದುವೆ ಮಾಡಬೇಕಾದಾಗ 50 ಜನರನ್ನು ಮಾತ್ರ ಸೇರಿಸಬೇಕೆಂಬ ನಿಯಮ ಇದೆ. ಇದರಿಂದ ಕಡಿಮೆ ಖರ್ಚು ಕೂಡ, ಈ ಸಮಯದಲ್ಲಿ ಮದುವೆ ಮಾಡಿದರೆ ಖರ್ಚಿಲ್ಲ ಅನ್ನೋದನ್ನ ತಲೆಯಲ್ಲಿಟ್ಟುಕೊಂಡು ಚಿಕ್ಕಮಕ್ಕಳನ್ನೇ ಮದುವೆ ಮಾಡಿಸಿದ್ದಾರೆ.
ಇದೊಂದು ಕಾರಣವಾದರೆ ಮತ್ತೊಂದೆಡೆ ಲಾಕ್ಡೌನ್ ಸಮಯದಲ್ಲಿ ಎಲ್ಲ ಕುಟುಂಬಸ್ಥರು ಅವರ ಅವರ ಮನೆಯಲ್ಲಿ ಇದ್ದರು. ಮಕ್ಕಳು ಕೂಡ ಮನೆಯ ಒಳಗಡೆ ಇದ್ದು, ಈ ವೇಳೆ ವಯಸ್ಕರು, ಮಕ್ಕಳ ಮೇಲೆ ದೌರ್ಜನ್ಯ ಎಸಗಿರುವಂತಹ ಘಟನೆಗಳು ನಡೆದಿವೆ. ಇನ್ನೂ ಎಚ್ಚೆತ್ತಿಲ್ಲ ಎಂದರೆ ಗಂಡು ಮಕ್ಕಳು, ಹೆಣ್ಣು ಮಕ್ಕಳ ಮೇಲೆ ಲೈಂಗಿಕ ಕಿರುಕುಳ, ಬಾಲ್ಯವಿವಾಹ ಹೀಗೆ ಪ್ರತಿಯೊಂದು ವಿಚಾರದಲ್ಲೂ ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತಾರೆ. ಲಾಕ್ಡೌನ್ ಜನರಿಗೆ ಕೊರೊನಾ ಸೊಂಕು ಹಬ್ಬಬಾರದೆಂದು ಮಾಡಿರುವುದು. ಅದು ಒಳ್ಳೆಯದೇ, ಆದರೆ ಮನೆಯ ಒಳಗಡೆ ನಡೆಯುವ ದೌರ್ಜನ್ಯದ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇದರ ಬಗ್ಗೆ ಹೈಕೋರ್ಟ್ ಹಿರಿಯ ವಕೀಲ ಸುನೀಲ್ ಕುಮಾರ್ ಮಾತನಾಡಿ, ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ತಡೆಗಟ್ಟಲು ಕೇಂದ್ರ ಸರ್ಕಾರ ಕಾನೂನುನೊಂದನ್ನ ಜಾರಿಗೆ ತಂದಿದೆ. 2012 ಪೋಕ್ಸೋ ಆ್ಯಕ್ಟ್ ಬರುವ ಮುಂಚೆ ಮಕ್ಕಳು ನ್ಯಾಯಾಲಯಕ್ಕೆ ಬರಬೇಕಿತ್ತು. ಈ ವೇಳೆ ಅಪರಾಧಿಗಳನ್ನ ನೋಡಿ ಮಕ್ಕಳು ಸರಿಯಾದ ಸಾಕ್ಷಿ ಕೊಡ್ತಿರಲಿಲ್ಲ. ಆದರೆ 2012ರಲ್ಲಿ ಬಂದ ಪೋಕ್ಸೋ ಕಾಯ್ದೆ ಪ್ರಕಾರ, ಮಕ್ಕಳಿಗೆ ಹೆದರಿಸೋದು, ಅಶ್ಲೀಲ ಪದ, ಅಶ್ಲೀಲ ವಿಡಿಯೋ ತೋರಿಸಿದರೆ 3 ವರ್ಷ ಅಥವಾ 5 ವರ್ಷ ಶಿಕ್ಷೆ ಆಗಲಿದೆ. ಹಾಗೇ ಮಕ್ಕಳ ಮೇಲೆ ಅತ್ಯಾಚಾರ ಅಥವಾ ಬಲತ್ಕಾರ ಮಾಡಿದರೆ ಕನಿಷ್ಠ 20 ವರ್ಷ ಜೈಲು ಶಿಕ್ಷೆ ಅಥವಾ ಜೀವಾವಧಿ ಶಿಕ್ಷೆಯಾಗುವ ಸಾಧ್ಯತೆ ಇದೆ.
2019 ರಲ್ಲಿ ಪೋಕ್ಸೋ ಕಾಯ್ದೆಯಲ್ಲಿ ಕೇಂದ್ರ ಸರ್ಕಾರ ಬದಲಾವಣೆ ಕೂಡ ತಂದಿದೆ. ಮಕ್ಕಳ ಮೇಲೆ ದೌರ್ಜನ್ಯ ನಡೆಯದಂತೆ ಯಾವ ಕ್ರಮ ಕೈಗೊಳ್ಳಬೇಕು ಹಾಗೂ ತ್ವರಿತ ಗತಿಯಲ್ಲಿ ನ್ಯಾಯ ಕೊಡಿಸುವ ಕಾಯ್ದೆಯನ್ನಾಗಿ ಮಾರ್ಪಾಡು ಮಾಡಿದೆ. ಹೀಗಾಗಿ ಮಕ್ಕಳ ಮೇಲಿನ ದೌರ್ಜನ್ಯ ಕಾನೂನುನಲ್ಲಿ ಕಠಿಣ ಶಿಕ್ಷೆ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ.