ಬೆಂಗಳೂರು: 'ವೀಲಿಂಗ್ ಮಾಡುವ ಮೂಲಕ ರಸ್ತೆ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವ ಸವಾರರ ವಿರುದ್ಧದ ಕಾರ್ಯಾಚರಣೆಗೆ ವಿಶೇಷ ಟಾಸ್ಕ್ ಫೋರ್ಸ್ ರಚಿಸಲಾಗಿದೆ. ಬೇಜವಾಬ್ದಾರಿಯಿಂದ ವರ್ತಿಸುವ ವಾಹನ ಸವಾರರ ಮೇಲೆ ಇನ್ಮುಂದೆ ಕಠಿಣ ಕ್ರಮವಾಗಲಿದೆ' ಎಂದು ಸಂಚಾರ ವಿಭಾಗದ ಜಂಟಿ ಆಯುಕ್ತ ಎಂ.ಎನ್.ಅನುಚೇತ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. 'ಅಪಾಯಕಾರಿ ವೀಲಿಂಗ್ ಮಾಡುವುದು, ಅವುಗಳ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದನ್ನು ಮತ್ತಷ್ಟು ಗಂಭೀರವಾಗಿ ಪರಿಗಣಿಸಲಾಗಿದ್ದು, ಸಂಚಾರ ಪೊಲೀಸರು ನಿಗಾ ಇಡುತ್ತಿದ್ದಾರೆ' ಎಂದರು.
'ಈಗಾಗಲೇ ನಗರದ ಕಾಮಾಕ್ಷಿಪಾಳ್ಯ ಸಂಚಾರ ಠಾಣಾ ಪೊಲೀಸ್ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ಸ್ಪೆಷಲ್ ಟಾಸ್ಕ್ ಫೋರ್ಸ್ ರಚಿಸಲಾಗಿದೆ. ಕಳೆದ ಹತ್ತು ದಿನಗಳಿಂದ ವಿಶೇಷ ಕಾರ್ಯಾಚರಣೆ ಕೈಗೊಳ್ಳುತ್ತಿದ್ದೇವೆ. ನಿನ್ನೆಯಷ್ಟೇ ನಾಲ್ವರು ಅಪ್ರಾಪ್ತ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ' ಎಂದು ಅವರು ಮಾಹಿತಿ ನೀಡಿದರು.
'ವೀಲಿಂಗ್ ಮಾಡುವುದು ಸ್ವತಃ ಅವರಿಗೇ ಅಪಾಯಕಾರಿ ಮಾತ್ರವಲ್ಲ, ಬೇರೆ ಪ್ರಯಾಣಿಕರ ಜೀವಕ್ಕೂ ಕುತ್ತು ತರಬಲ್ಲದು. ಮುಂದಿನ ದಿನಗಳಲ್ಲಿ ಅಂಥ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‌ಗಳಡಿ ಮಾತ್ರವಲ್ಲ, ಸಿಆರ್‌ಪಿಸಿ 107 ರಡಿ ಮುಚ್ಚಳಿಕೆ ಸಹ ಮಾಡಿಸಲಾಗುವುದು' ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಈ ಮೂಲಕ ವೀಲಿಂಗ್‌ಗೆ ಕಡಿವಾಣ ಹಾಕಲು ನಗರ ಪೊಲೀಸರು ನಿರ್ಧರಿಸಿದ್ದಾರೆ.
ಇದನ್ನೂಓದಿ: ಕೆಲಸದ ಆಮಿಷಯೊಡ್ಡಿ ಯುವತಿ ಮೇಲೆ ಅತ್ಯಾಚಾರ.. ಆರೋಪಿಗೆ ಬಿಜೆಪಿ ಸಚಿವರ ಸಂಪರ್ಕ ಇದೆ ಎಂದ ಹೆಚ್ಡಿಕೆ