ಬೆಂಗಳೂರು: ವಿಧಾನಸಭೆಯ ಅಧ್ಯಕ್ಷ ಯು ಟಿ ಖಾದರ್ ಅವರ ಕನ್ನಡ ಭಾಷಾ ಪದ ಪ್ರಯೋಗದ ಬಗ್ಗೆ ಬಿಜೆಪಿ ಹಿರಿಯ ಶಾಸಕ ಬಸನಗೌಡ ಯತ್ನಾಳ್ ಹಾಸ್ಯ ಮಾಡಿದ್ದು, ಅದನ್ನು ಸಭಾಧ್ಯಕ್ಷರು ಸ್ಪರ್ಧಾತ್ಮಕವಾಗಿ ಪರಿಗಣಿಸಿದ ಪ್ರಸಂಗ ಇಂದು ನಡೆಯಿತು.
ವಿಧಾನಸಭೆಯ ಉಪಾಧ್ಯಕ್ಷರಾಗಿ ರುದ್ರಪ್ಪ ಲಮಾಣಿ ಅವಿರೋಧವಾಗಿ ಆಯ್ಕೆಯಾದ ಮೇಲೆ ಅವರನ್ನು ಅಭಿನಂದಿಸುವ ಸಂದರ್ಭದಲ್ಲಿ ಸಭಾಧ್ಯಕ್ಷರು ಹಳ್ಳಿ ಎಂಬ ಪದವನ್ನು ಹಲ್ಲಿ ಎಂದು ಉಚ್ಛಾರಣೆ ಮಾಡಿದರು. ಅದನ್ನು ಬಸನಗೌಡ ಯತ್ನಾಳ್ ಉಲ್ಲೇಖಿಸಿ ಹಳ್ಳಿ, ಹಳ್ಳಿ ಎಂದು ತಿದ್ದುವ ಯತ್ನ ಮಾಡಿದರು. ಅದನ್ನು ಸಭಾಧ್ಯಕ್ಷರು ನಗುಮೊಗದಿಂದಲೇ ಸ್ವೀಕರಿಸಿದರು.
ಅಭಿನಂದನೆ ಮಾತು ಮುಗಿದ ಬಳಿಕ ಎದ್ದು ನಿಂತ ಯತ್ನಾಳ್ ರಾಜ್ಯದಲ್ಲಿ ಕರಾವಳಿ ಭಾಗದ ಮಂಗಳೂರು ಕನ್ನಡ ಶುದ್ಧವಾಗಿದೆ ಮತ್ತು ಸುಂದರ ಭಾಷೆಯಾಗಿದೆ. ರಾಜ್ಯದಲ್ಲಿ ಕರಾವಳಿ, ಹಳೇ ಮೈಸೂರು ಭಾಗ, ಬೆಂಗಳೂರು, ಉತ್ತರ ಕರ್ನಾಟಕ ಸೇರಿದಂತೆ 4 ರೀತಿಯ ಭಾಷೆಗಳನ್ನು ಕಾಣಬಹುದು. ನಮಗೆ ಎಲ್ಲದರ ಪರಿಚಯವೂ ಇದೆ. ಹಾಗೆಯೇ ಸಭಾಧ್ಯಕ್ಷರ ಭಾಷೆಯ ಬಗ್ಗೆಯೂ ನಕ್ಷೆ ಹಾಕಿಕೊಟ್ಟುಬಿಡಿ. ನೀವು ಮಾತನಾಡುವುದನ್ನು ನಾವು ಅರ್ಥೈಸಿಕೊಳ್ಳಲು ಸುಲಭವಾಗುತ್ತದೆ. ಇಂಡಿಯನ್ ಇಂಗ್ಲಿಷ್, ಅಮೆರಿಕ ಇಂಗ್ಲಿಷ್ ಎಂಬ ಡಿಕ್ಷನರಿಗಳಿದ್ದಂತೆ, ಸ್ಪೀಕರ್ ಕನ್ನಡ ಎಂಬ ಡಿಕ್ಷನರಿಯೊಂದನ್ನು ಕೊಟ್ಟರೆ ಅನುಕೂಲವಾಗುತ್ತದೆ ಎಂದು ನಗೆಚಟಾಕಿ ಹಾರಿಸಿದರು.
ವಿಧಾನಸಭೆ ಸಚಿವಾಲಯ ಡಿಜಿಟಲೀಕರಣ: ಆಗ ಶೀಘ್ರವೇ ವಿಧಾನಸಭೆಯ ಸಚಿವಾಲಯವನ್ನು ಡಿಜಿಟಲೀಕರಣ ಮಾಡುತ್ತಿದ್ದೇವೆ. ಆಗ ನಿಮಗೆ ಪ್ರಯೋಜನವಾಗುವಂತೆ ಡಿಕ್ಷನರಿ ಕೊಡುತ್ತೇವೆ ಎಂದು ಯು. ಟಿ. ಖಾದರ್ ಸ್ಪರ್ಧಾತ್ಮಕವಾಗಿಯೇ ಪ್ರತಿಕ್ರಿಯಿಸಿದರು. ಸದನದಲ್ಲಿ ಹಾಜರಿರಲು ಸಚಿವರಿಗೆ ಸೂಚಿಸಿದ ಸ್ಪೀಕರ್: ಸದನ ಆರಂಭವಾಗುವ ಸಮಯಕ್ಕೆ ಸರಿಯಾಗಿ ಸಂಬಂಧಪಟ್ಟ ಸಚಿವರು ಹಾಜರಿರಬೇಕು ಎಂದು ಸೂಚನೆ ನೀಡಿದರು.
ಇಂದು ಸದನ ಸಮಾವೇಶಗೊಂಡಾಗ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಡಳಿತ ಪಕ್ಷದ ಮೊದಲ ಸಾಲು ಖಾಲಿ ಇದೆ. ಸಚಿವರೇ ಇಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಬೆಳಗ್ಗೆ 10.30ಕ್ಕೆ ಸದನವನ್ನು ಕರೆದಿದ್ದೀರಿ. ಆದರೆ ಸಚಿವರೇ ಇಲ್ಲ ಎಂದರು. ಇದಕ್ಕೆ ದನಿಗೂಡಿಸಿದ ಬಿಜೆಪಿಯ ಸದಸ್ಯ ಸುರೇಶ ಕುಮಾರ್, ಸಚಿವರಿಲ್ಲ. ಸಚಿವರ ಸ್ಥಾನಗಳು ಖಾಲಿಯಿವೆ. ಹೀಗಾದರೆ ಸದನ ನಡೆಯುವುದು ಹೇಗೆ ಎಂದು, ಸದನದಲ್ಲಿ ಹಾಜರಿರಬೇಕಾದ ಸಚಿವರ ಹೆಸರುಗಳನ್ನು ಉಲ್ಲೇಖಿಸಿದರು.
ಆಗ ಮಧ್ಯಪ್ರವೇಶಿಸಿದ ಸಭಾಧ್ಯಕ್ಷರು, ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಸದನದಲ್ಲಿ ಯಾವ ಸಚಿವರು ಹಾಜರರಿಬೇಕೋ ಅವರು ಸಕಾಲಕ್ಕೆ ಸದನದಲ್ಲಿ ಹಾಜರಿರಬೇಕು ಎಂದರು. ನಿನ್ನೆ ಸಮಯಕ್ಕೆ ಸರಿಯಾಗಿ ಬಂದ ಸದಸ್ಯರ ಹೆಸರುಗಳನ್ನು ವಾಚಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿಯ ಹಿರಿಯ ಸದಸ್ಯ ಸಿ. ಸಿ. ಪಾಟೀಲ್ ಸದನಕ್ಕೆ ಸರಿಯಾಗಿ ಬಂದವರ ಹೆಸರನ್ನು ಪ್ರಕಟಿಸುವುದು ಒಳ್ಳೆಯ ಸಂಪ್ರದಾಯ. ಅದೇ ರೀತಿ ಸರಿಯಾದ ಸಮಯಕ್ಕೆ ಯಾವ ಸಚಿವರು ಬಂದಿಲ್ಲವೋ ಅವರ ಹೆಸರನ್ನೂ ಪ್ರಕಟಿಸುವುದು ಸೂಕ್ತ ಎಂದು ಸಲಹೆ ನೀಡಿದರು.
ನಂತರ ಸಭಾಧ್ಯಕ್ಷರು ಪ್ರಶ್ನೋತ್ತರ ಕಲಾಪಕ್ಕೆ ಅನುವು ಮಾಡಿಕೊಟ್ಟರು. ಆರಂಭದಲ್ಲಿ ಪ್ರಶ್ನೆ ಕೇಳಬೇಕಾದ ಕೆಲ ಸದಸ್ಯರು ಹಾಗೂ ಉತ್ತರಿಸಬೇಕಾದ ಸಚಿವರು ಹಾಜರಿರಲಿಲ್ಲ.
ಇದನ್ನೂಓದಿ:ವಿಧಾನಸಭೆಯಲ್ಲಿ ಕೋಲಾಹಲ ಸೃಷ್ಟಿಸಿದ ಚಾಲಕನ ಆತ್ಮಹತ್ಯೆ ಯತ್ನ ಪ್ರಕರಣ: ವಾಗ್ವಾದ, ಧರಣಿ