ಬೆಂಗಳೂರು: ಇಂದು ನಡೆದ ವಿಧಾನಸಭೆ ಕಲಾಪದಲ್ಲಿ ಟಿಪ್ಪು ಜಯಂತಿಯನ್ನು ರದ್ದುಪಡಿಸಿದ ಸರ್ಕಾರದ ನಿರ್ಧಾರದ ವಿರುದ್ಧ ಕಾಂಗ್ರೆಸ್ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆ ಕಲಾಪವನ್ನು ಅನಿರ್ದಿಷ್ಟಾವಧಿಯವರೆಗೆ ಸ್ಪೀಕರ್ ಮುಂದೂಡಿದ್ದಾರೆ.
ಸದನದಲ್ಲಿ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ, ಸರ್ಕಾರದ ವತಿಯಿಂದ ಆಚರಣೆ ಮಾಡಲಾಗುತ್ತಿದ್ದ ಟಿಪ್ಪು ಜಯಂತಿಯನ್ನು ರದ್ದುಪಡಿಸಿದ ನೂತನ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಿದ್ಧರಾಮಯ್ಯ ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆಯೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸದನದಿಂದ ಹೊರ ನಡೆದರು. ಸಿದ್ಧರಾಮಯ್ಯ ಜೊತೆ ಕಾಂಗ್ರೆಸ್ ಸದಸ್ಯರೆಲ್ಲರೂ ಎದ್ದು ನಿಂತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರಾಜ್ಯಾದ್ಯಂತ ನಡೆಸಲಾಗುತ್ತಿದ್ದ ಟಿಪ್ಪು ಜಯಂತಿಯನ್ನು ರದ್ದುಪಡಿಸಿದ ನೂತನ ಸರ್ಕಾರದ ಕ್ರಮವನ್ನು ಖಂಡಿಸಿದ್ರು.
ಈ ಬಗ್ಗೆ ಮಧ್ಯಪ್ರವೇಶಿಸಿ ಮಾತಾನಾಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಈ ವಿಷಯ ಪ್ರಸ್ತಾಪವಾಗುತ್ತಿದೆ ಎಂದು ಯಾರಿಗೂ ಗೊತ್ತಿರಲಿಲ್ಲ. ಹಾಗೆಯೇ ಇದನ್ನು ಪ್ರಸ್ತಾಪ ಮಾಡುವ ಕುರಿತು ನನ್ನ ಗಮನಕ್ಕೂ ನೀವು ತಂದಿಲ್ಲ. ಸಭೆಯ ನಿಯಮಾವಳಿಗಳ ಪ್ರಕಾರ ನೀವು ಈ ವಿಷಯದ ಕುರಿತು ಮಾತನಾಡುವುದಿದ್ದರೆ ನನ್ನ ಗಮನಕ್ಕೆ ತರಬೇಕಿತ್ತು. ಆದರೆ ನೀವು ತಂದಿಲ್ಲ. ಅದೇ ರೀತಿ ವಿಷಯ ಗೊತ್ತಿಲ್ಲದೆ ಇರುವುದರಿಂದ ಸರ್ಕಾರದ ಪರಿವಾಗಿಯೂ ಯಾರು ಉತ್ತರಿಸಲು ಸಾಧ್ಯವಿಲ್ಲ ಎಂದರು.
ಆದರೆ ಸ್ಪೀಕರ್ ಹೇಳಿಕೆಯನ್ನ ಒಪ್ಪದ ಸಿದ್ಧರಾಮಯ್ಯ, ಈ ಸದನದಲ್ಲಿ ನಾನು 1983ರಿಂದ ಕೆಲಸ ಮಾಡುತ್ತಿದ್ದೇನೆ. ಇಲ್ಲಿ ಪ್ರಸ್ತಾಪವಾಗುವ ಪ್ರತಿಯೊಂದು ವಿಷಯವನ್ನು ಸ್ಪೀಕರ್ ಗಮನಕ್ಕೆ ತಂದೇ ಪ್ರಸ್ತಾಪ ಮಾಡಬೇಕು ಎಂದೇನಿಲ್ಲ. ವಿಷಯ ಗಂಭೀರವಾದುದು. ಹೀಗಾಗಿ ಇಂದೇ ಈ ವಿಷಯವನ್ನು ಪ್ರಸ್ತಾಪ ಮಾಡಬೇಕಿದೆ. ಇದನ್ನು ಪ್ರಸ್ತಾಪ ಮಾಡುವಾಗ ಮುಖ್ಯಮಂತ್ರಿಗಳು ಕಡ್ಡಾಯವಾಗಿ ಇರಬೇಕು ಎಂದು ನೀವು ಹೇಳಬೇಕು.
ಆದರೆ, ಈ ಸರ್ಕಾರದಲ್ಲಿ ಯಡಿಯೂರಪ್ಪ ಅವರು ಸಿಎಂ ಆಗಿದ್ದನ್ನು ಬಿಟ್ಟರೆ ಒಬ್ಬ ಸಚಿವರೂ ಇಲ್ಲ. ಹೀಗಾಗಿ ಈ ವಿಷಯವನ್ನು ನಾವು ಯಾರ ಬಳಿ ಹೇಳಬೇಕು ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸ್ಪೀಕರ್, ಯಡಿಯೂರಪ್ಪ ಅವರು ಎಲ್ಲಿಗೆ ಹೋಗುತ್ತಾರೆ ಎಂಬುದು ನಿಮಗೆ ತಿಳಿದಿದೆ. ಅಂತ್ಯ ಸಂಸ್ಕಾರವೊಂದರಲ್ಲಿ ಭಾಗವಹಿಸಲು ಅವರು ಚಿಕ್ಕಮಗಳೂರಿಗೆ ತೆರಳಬೇಕಿದೆ ಎಂದರು.
ಆದರೆ ಇದಕ್ಕೂ ಆಕ್ಷೇಪ ವ್ಯಕ್ತಪಡಿಸಿದ ಸಿದ್ದರಾಮಯ್ಯ, ನಾವು ಕೂಡಾ ಅಲ್ಲಿಗೆ ತೆರಳಬೇಕಿದೆ. ಹೀಗಾಗಿ ಇಲ್ಲೇ ಕುಳಿತು ಪ್ರತಿಪಕ್ಷಗಳ ಪ್ರಸ್ತಾಪವನ್ನು ಕೇಳಿ ಎಂದು ನೀವು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಹೇಳಬೇಕಿತ್ತು ಎಂದು ಒತ್ತಾಯಿಸಿದರು. ಆದರೆ ಸಿದ್ಧರಾಮಯ್ಯ ಅವರ ಮಾತನ್ನು ಒಪ್ಪದ ಸ್ಪೀಕರ್, ಕಲಾಪವನ್ನು ಅನಿರ್ದಿಷ್ಟಾವಧಿಯವರೆಗೆ ಮುಂದೂಡಿ ಹೊರನಡೆದರು.