ಬೆಂಗಳೂರು : ನೆರೆ ಹಾವಳಿ ವಿಷಯದ ಮೇಲೆ ಚರ್ಚೆಗೆ ಅವಕಾಶ ಕಲ್ಪಿಸಬೇಕು ಎಂದು ಪ್ರತಿಪಕ್ಷ ಸಲ್ಲಿಸಿದ್ದ ನಿಲುವಳಿ ಸೂಚನೆ ಪರಿಷತ್ನಲ್ಲಿ ಗದ್ದಲದ ವಾತಾವರಣ ಸೃಷ್ಠಿಸಿತು. ಬಳಿಕ ಅರ್ಧ ಗಂಟೆ ಚರ್ಚೆಗೆ ಅವಕಾಶ ನೀಡಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ರೂಲಿಂಗ್ ನೀಡಿ ಗದ್ದಲಕ್ಕೆ ತೆರೆ ಎಳೆದರು.
ಕಲಾಪ ಆರಂಭಗೊಳ್ಳುತ್ತಿದ್ದಂತೆ ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್, ನಿಯಮ 59ರ ಅಡಿ ನಿಲುವಳಿ ಸೂಚನೆ ಮಂಡನೆ ಮಾಡಿದ್ದೇವೆ. ಚರ್ಚೆಗೆ ಅವಕಾಶ ಕಲ್ಪಿಸಿ ಎಂದು ಮನವಿ ಮಾಡಿದರು. ನೆರೆ ಹಾವಳಿ ಪ್ರಸ್ತಾಪ ಮಾಡಿ ಎಲ್ಲಾ ಕಲಾಪ ಬಿಟ್ಟು ಇದನ್ನು ಕೈಗೆತ್ತಿಕೊಳ್ಳಲು ಮನವಿ ಮಾಡಿ ಚರ್ಚೆಗೆ ಅವಕಾಶ ಕೋರಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ, ಪ್ರಶ್ನೋತ್ತರ ಕಲಾಪ, ಶೂನ್ಯವೇಳೆ ನಂತರ ಪ್ರಸ್ತಾಪಿಸಿ, ಚರ್ಚೆಗೆ ಸರ್ಕಾರ ಸಿದ್ಧವಿದೆ. ಪ್ರಶ್ನೋತ್ತರ, ಶೂನ್ಯವೇಳೆ ನಂತರ ನಿಲುವಳಿಗೆ ಚರ್ಚೆಗೆ ಅವಕಾಶ ಎಂದು ನಾವೇ ನಿಯಮ ಮಾಡಿಕೊಂಡಿದ್ದೇವೆ. ಹಾಗಾಗಿ, ಮೊದಲ ಪ್ರಶ್ನೋತ್ತರ ಆಗಲಿ ನಂತರ ನಿಲುವಳಿ ಕೈಗೆತ್ತುಕೊಳ್ಳಬೇಕು ಎಂದು ಮನವಿ ಮಾಡಿದರು.
ಬಳಿಕ ಪ್ರಶ್ನೋತ್ತರ, ಶೂನ್ಯವೇಳೆ ನಂತರ ನಿಯಮ 58ರ ಅಡಿ ಚರ್ಚೆಗೆ ಅವಕಾಶ ಕೊಡುವುದಾಗಿ ಸಭಾಪತಿ ರೂಲಿಂಗ್ ನೀಡಿದರು.