ಬೆಂಗಳೂರು : ವಿಧಾನಮಂಡಲ ಅಧಿವೇಶನದಲ್ಲಿ ಡಿ.14 ಮತ್ತು 15 ರಂದು ‘ಒಂದು ರಾಷ್ಟ್ರ ಒಂದು ಚುನಾವಣೆ’ ಕುರಿತು ಸದನದಲ್ಲಿ ಚರ್ಚೆ ನಡೆಯಲಿದೆ. ಇಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಎರಡು ದಿನ ವಿಶೇಷ ಚರ್ಚೆ ನಡೆಸಲಾಗುವುದು. ಈ ಕುರಿತಂತೆ ಮುಖ್ಯಮಂತ್ರಿಗಳು, ವಿಪಕ್ಷ ನಾಯಕರೊಂದಿಗೂ ಚರ್ಚೆ ನಡೆಸಲಾಗಿದೆ. ನಾಳೆ ನಡೆಯುವ ಕಾರ್ಯ ಕಲಾಪಗಳ ಸಲಹಾ ಸಮಿತಿ ಸಭೆಯಲ್ಲೂ ಚರ್ಚೆ ಮಾಡಬಹುದು ಎಂದರು.
ನವೆಂಬರ್ 25 ರಿಂದ ಎರಡು ದಿನ ಗುಜರಾತ್‍ನ ಕೆವಾಡಿಯಲ್ಲಿ ನಡೆದ ಅಖಿಲ ಭಾರತ ಪೀಠಾಸೀನ ಅಧಿಕಾರಿಗಳ ಸಮಾವೇಶ ನಡೆಯಿತು. ಸಮ್ಮೇಳನದ ಸಮಾರೋಪದಲ್ಲಿ ವರ್ಚ್ಯುವಲ್ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, ‘ಒಂದು ರಾಷ್ಟ್ರ ಒಂದು ಚುನಾವಣೆ’ ಬಗ್ಗೆ ಚರ್ಚೆಯಾಗಲಿ ಎಂದಿದ್ದರು. ಹಾಗಾಗಿ, ಎರಡು ದಿನ ಚರ್ಚೆ ನಡೆಸಲಾಗುತ್ತಿದೆ ಎಂದು ಕಾಗೇರಿ ಹೇಳಿದರು.
ಇದನ್ನೂ ಓದಿ: ರೈತ ಸಂಘದ ನೆರಳಿನಡಿ ಹೋಗಿ ಕಾಂಗ್ರೆಸ್ನವರು ಬಾವುಟ ಹಾರಿಸ್ತಾರೆ: ಬಿ.ಸಿ.ಪಾಟೀಲ್
ಸರ್ದಾರ್ ಪಟೇಲ್ ಅವರ ಪ್ರತಿಮೆ ಗುಜರಾತ್‍ನಲ್ಲಿ ನಿರ್ಮಾಣವಾಗಿದೆ. ಅದು ಜಗತ್ತಿನಲ್ಲೇ ಅತ್ಯಂತ ಎತ್ತರವಾದ ಭವ್ಯ ಮೂರ್ತಿ, ಪ್ರವಾಸ ಕೈಗೊಳ್ಳುವಾಗ ಅಲ್ಲಿಗೆ ಭೇಟಿ ನೀಡುವುದು ಸೂಕ್ತ. ಕೌಟುಂಬಿಕ ಪ್ರವಾಸವನ್ನು ಕೈಗೊಳ್ಳಬಹುದು ಎಂದರು.
ಇದನ್ನೂ ಓದಿ: ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಸಿಗದ ರಿಲೀಫ್: ಮತ್ತೆ 14 ದಿನ ನ್ಯಾಯಾಂಗ ಬಂಧನ
ಸ್ವಯಂ ಶಿಸ್ತು ಮುಖ್ಯ : ಕೊರೊನಾ ಹಿನ್ನೆಲೆಯಲ್ಲಿ ಶಾಸಕರು ಸ್ವಯಂ ಶಿಸ್ತು ಅಳವಡಿಸಿಕೊಳ್ಳಬೇಕು. ಕೊರೊನಾ ಎರಡನೇ ಅಲೆ ಪ್ರಾರಂಭವಾಗುತ್ತಿದೆ. ತಜ್ಞರು ಸಲಹೆ ನೀಡಿರುವುದು ನಮ್ಮೆಲ್ಲರಿಗೂ ತಿಳಿದಿದೆ. ಎಲ್ಲರೂ ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್ ಬಳಸಿ ಅಂತರ ಕಾಯ್ದುಕೊಳ್ಳಬೇಕು. ಅನಾರೋಗ್ಯದ ಲಕ್ಷಣ ಇದ್ದವರು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬಹುದು. ಅಗತ್ಯವಿದ್ದರೆ ಚಿಕಿತ್ಸೆ ಕೊಡಿಸಲಾಗುವುದು ಎಂದು ಹೇಳಿದರು.
ಸದನದಲ್ಲಿ ಕೂಡಾ ಶಿಸ್ತಿನಿಂದ ಕಾರ್ಯಕಲಾಪದಲ್ಲಿ ಪಾಲ್ಗೊಳ್ಳಿ. ಗುಂಪು ಗೂಡುವುದು ಬೇಡ, ಮಾತನಾಡುವುದಿದ್ದರೆ ಲಾಂಜ್ ಗೆ ಹೋಗಿ ಮಾತನಾಡಬಹುದು ಎಂದರು.