ಬೆಂಗಳೂರು: ವಿಧಾನಸಭೆಯ ಅಧಿವೇಶನಕ್ಕೆ ಸಿದ್ಧತೆ ಆರಂಭಿಸುವಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಮ್ಮ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ನಿರ್ದೇಶನ ನೀಡಿದ್ದಾರೆ. ವಿಧಾನಸೌಧದಲ್ಲಿ ಇಂದು ಸಂಜೆ ಸಭೆ ನಡೆಸಿದ ಅವರು, ಅಧಿವೇಶನವನ್ನು ಯಾವಾಗ ಮತ್ತು ಎಲ್ಲಿ ನಡೆಸಬೇಕು ಎಂದು ನಿರ್ಧರಿಸುವುದು ಸರ್ಕಾರದ ಪರಮಾಧಿಕಾರ. ನಾವು ಸಿದ್ಧತೆ ಮಾಡಿಕೊಳ್ಳಬೇಕು ಎಂದಿದ್ದಾರೆ.
ಅಧಿವೇಶನ ಸುಗಮವಾಗಿ ನಡೆಯಲು ಸಜ್ಜಾಗಿದ್ದೇವೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಕೋವಿಡ್ನ ಪ್ರತ್ಯೇಕೀಕರಣ ಮತ್ತು ಲಾಕ್ಡೌನ್ ಮನಸ್ಥಿತಿಯಿಂದ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಹೊರಬರಬೇಕಾದ ಅಗತ್ಯವಿದೆ. ವ್ಯಾಪಕವಾಗಿ ಕರ್ತವ್ಯ ನಿರ್ವಹಣೆ ಮಾಡುವುದರೊಂದಿಗೆ ಇದುವರೆಗೆ ಆಗಿರುವ ನಷ್ಟವನ್ನು ಸರಿದೂಗಿಸುವಂತೆ ಸಲಹೆ ನೀಡಿದರು.
ಹಲವು ತಿಂಗಳುಗಳಿಂದ ಬಾಕಿ ಉಳಿದಿರುವ ಕೆಲಸವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕಾಗಿದೆ ಎಂದ ಸ್ಪೀಕರ್, ತಂತ್ರಜ್ಞಾನದ ಬಳಕೆಯೊಂದಿಗೆ ಕರ್ನಾಟಕ ವಿಧಾನಸಭೆ ಮತ್ತು ಸಚಿವಾಲಯವನ್ನು ಮಾದರಿಯಾಗಿ ಮಾಡಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಇದನ್ನೂ ಓದಿ: SSLC ಪರೀಕ್ಷೆ ರದ್ದು ಕೋರಿ ಕೋರ್ಟ್ ಮೊರೆ ಹೋಗಲು ಸಿದ್ಧತೆ