ಬೆಂಗಳೂರು: ಕುಡಿಯುವ ನೀರು ಯೋಜನೆಯನ್ನು ವಿಳಂಬ ಮಾಡುತ್ತಿರುವ ಅಧಿಕಾರಿಗಳು ಇನ್ನೂ ಬ್ರಿಟಿಷ್ ಆಡಳಿತ ವ್ಯವಸ್ಥೆಯ ಮನಸ್ಥಿತಿಯಲ್ಲೇ ಇದ್ದಾರೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸರ್ಕಾರಕ್ಕೆ ಚಾಟಿ ಬೀಸಿದ ಪ್ರಸಂಗ ವಿಧಾನಸಭೆಯಲ್ಲಿ ಇಂದು ನಡೆಯಿತು. ಪ್ರಶ್ನೋತ್ತರ ವೇಳೆ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು, ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಗಾಮನಹಳ್ಳಿ ಹಾಗೂ ಇತರ 16 ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆ ಮಂಜೂರಾಗಿದ್ದರೂ ಯೋಜನೆ ವಿಳಂಬವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ, ಮಧ್ಯೆ ಪ್ರವೇಶಿಸಿದ ಸ್ಪೀಕರ್, ನಮ್ಮ ಅಧಿಕಾರಿಗಳು ಈಗಲೂ ಬ್ರಿಟಿಷ್ ಮನಸ್ಥಿತಿಯಲ್ಲೇ ಇದ್ದಾರೆ. ನಾನು ಎಲ್ಲರನ್ನೂ ಕೆಟ್ಟವರು ಎಂದು ಹೇಳುವುದಿಲ್ಲ. ಕೆಲವು ಅಧಿಕಾರಿಗಳು ಒಳ್ಳೆಯವರು ಇದ್ದಾರೆ. ಪ್ರತಿಯೊಂದು ಯೋಜನೆಗೂ ಕಾನೂನು ನೆಪ ಮಾಡಿ ವಿಳಂಬ ಮಾಡುವುದು ಅವರಿಗೆ ಕಾಯಕವಾಗಿದೆ. ಕಿವಿ ಹಿಂಡದೇ ಯಾವುದೇ ಕೆಲಸವಾಗುವುದಿಲ್ಲ. ಮೊದಲು ಮನಸ್ಥತಿ ಬದಲಾಯಿಸಿಕೊಳ್ಳಬೇಕು ಎಂದು ಬೇಸರದಿಂದಲೇ ನುಡಿದರು.
ವಿಳಂಬ ಮಾಡದಂತೆ ಆದೇಶ: ನ್ಯಾಯಾಲಯದ ಆದೇಶವಿದೆ. ಕಾನೂನು ಹೀಗೆ ಹೇಳುತ್ತದೆ. ನಾಳೆ ನಮ್ಮ ಸೇವಾ ಅವಧಿಗೆ ಏನಾದರೂ ಅಡ್ಡಿಯಾಗಬಹುದು ಎಂಬ ಕಾರಣದಿಂದ ವಿಳಂಬ ಮಾಡುತ್ತಾರೆ. ಇದು ಕುಡಿಯುವ ನೀರಿನ ಯೋಜನೆ. ಟ್ಯಾಂಕ್ ನಿರ್ಮಿಸಿ ಪೈಪ್ಲೈನ್ ಮಾಡಿಕೊಡಲು ಇರುವ ಸಮಸ್ಯೆಯಾದರೂ ಏನು? ನೀವು ಅಧಿಕಾರಿಗಳ ಕಿವಿ ಹಿಂಡದಿದ್ದರೆ, ಎಲ್ಲಾ ಯೋಜನೆಗಳು ಇದೇ ರೀತಿ ಆಗುತ್ತವೆ ಎಂದು ಸಚಿವರಿಗೆ ಸ್ಪೀಕರ್ ಹೇಳಿದರು. ಈ ನಡುವೆ ಕಾಂಗ್ರೆಸ್ ನ ಹಿರಿಯ ಸದಸ್ಯ ಆರ್.ವಿ.ದೇಶಪಾಂಡೆ ಅವರು, ಕುಡಿಯುವ ನೀರಿನ ಯೋಜನೆಗೆ ಅರಣ್ಯ, ಕಂದಾಯ ಸೇರಿದಂತೆ ಯಾವುದೇ ಇಲಾಖೆಗಳು ವಿಳಂಬ ಮಾಡದಂತೆ ಆದೇಶ ನೀಡಲಾಗಿದೆ. ನ್ಯಾಯಾಲಯದ ಆದೇಶವಿದ್ದರೂ ಅಧಿಕಾರಿಗಳು ಮಾತ್ರ ಬದಲಾಗುವುದಿಲ್ಲ. ಮಾನವೀಯತೆ ದೃಷ್ಟಿಯಿಂದ ಇಂತಹ ಯೋಜನೆಗಳನ್ನು ಮಾಡಬೇಕು ಎಂದು ಸಲಹೆ ಮಾಡಿದರು.
ಆಗ ಕಾನೂನು ಸಚಿವ ಮಾಧುಸ್ವಾಮಿ ಅವರು, ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರವ್ಯಾಪ್ತಿ ಗಾಮನಹಳ್ಳಿ ಹಾಗೂ ಇತರ 16 ಗ್ರಾಮಗಳಿಗೆ ಅರಣ್ಯ ಇಲಾಖೆ ಅನುಮೋದನೆ ನೀಡಿದ್ದು, ಆದಷ್ಟು ಶೀಘ್ರ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು. ಈಗ ಅರಣ್ಯ ಇಲಾಖೆಯೇ ಅನುಮೋದಿಸಿರುವುದರಿಂದ ವಿಳಂಬವಾಗುವುದಿಲ್ಲ ಎಂದು ಭರವಸೆ ನೀಡಿದರು.
ಇದಕ್ಕೂ ಮುನ್ನ ಮಾತನಾಡಿದ ರವೀಂದ್ರ ಶ್ರೀಕಂಠಯ್ಯ, ನನ್ನ ಕ್ಷೇತ್ರ 52 ಗ್ರಾಮಗಳ ಕುಡಿಯುವ ನೀರಿನ ಯೋಜನೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮಂಜೂರು ಮಾಡಿದ್ದರು. ಈಗಾಗಲೇ ಪೈಪ್ಲೈನ್ ಮಾಡಿದ್ದರೂ ಒಂದು ಟ್ಯಾಂಕ್ ನಿರ್ಮಿಸಲು ಅವಕಾಶವಿಲ್ಲ. ಹೀಗಾದರೆ ಜನರಿಗೆ ನಾವು ಏನು ಉತ್ತರ ಕೊಡಬೇಕು ಎಂದು ಪ್ರಶ್ನಿಸಿದರು.
ಹೊಸ ಪಡಿತರ ಚೀಟಿ ವಿತರಣೆ : ಹೊಸ ಪಡಿತರ ಚೀಟಿಯನ್ನು ವಿತರಿಸುವ ಕಾರ್ಯ ಜಾರಿಯಲ್ಲಿದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ಅವರು, ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ಶಾಸಕ ಎಂ.ವಿ.ವೀರಭದ್ರಯ್ಯಅವರ ಪ್ರಶ್ನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರವಾಗಿ ಉತ್ತರಿಸಿದರು.
ಆದ್ಯತಾ ಪಡಿತರ ಚೀಟಿಯನ್ನು ಕೋರಿ ಈಗಾಗಲೇ ಅರ್ಜಿ ಸಲ್ಲಿಸಿರುವ ಅರ್ಹ ಕುಟುಂಬಗಳ ವಾಸಸ್ಥಳ ಪರಿಶೀಲನೆ ಕೈಗೊಂಡು ಹೊಸ ಆದ್ಯತಾ ಪಡಿತರ ಚೀಟಿ ನೀಡಲಾಗುತ್ತಿದೆ. ಮಧುಗಿರಿ ತಾಲ್ಲೂಕು ವ್ಯಾಪ್ತಿಯಲ್ಲಿ ಆದ್ಯತಾ ಪಡಿತರ ಚೀಟಿಗಾಗಿ2524 ಅರ್ಜಿಗಳು ಸಲ್ಲಿಕೆಯಾಗಿದ್ದು, 1845 ಅರ್ಜಿಗಳು ವಿಲೇವಾರಿಯಾಗಿದ್ದು, 679 ಅರ್ಜಿಗಳು ಬಾಕಿ ಉಳಿದಿವೆ. ಆದ್ಯತೇತರ ಪಡಿತರ ಚೀಟಿಗೆ 348 ಅರ್ಜಿಗಳು ಸಲ್ಲಿಕೆಯಾಗಿದ್ದು, 285 ಅರ್ಜಿ ವಿಲೇವಾರಿ ಆಗಿವೆ. 63 ಅರ್ಜಿಗಳು ಬಾಕಿ ಉಳಿದಿವೆ ಎಂದರು.
ಮಧುಗಿರಿ ತಾಲ್ಲೂಕಿನಲ್ಲಿ 125 ನ್ಯಾಯಬೆಲೆ ಅಂಗಡಿಗಳು ಕಾರ್ಯನಿರ್ವಹಿಸುತ್ತಿವೆ. ಅಗತ್ಯಕ್ಕೆ ಅನುಗುಣವಾಗಿ ಹೊಸ ನ್ಯಾಯಬೆಲೆ ಅಂಗಡಿಗಳನ್ನು ತೆರೆಯುವ ಬಗ್ಗೆ ಕ್ರಮ ಕೈಗೊಳ್ಳಲು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರಿಗೆ ಅವಕಾಶ ನೀಡಲಾಗಿದೆ ಎಂದು ಹೇಳಿದರು.
ಏತ ನೀರಾವರಿ : ದಂಡಾವತಿ ನದಿಗೆ ಯಡಗೊಪ್ಪ ಗ್ರಾಮದ ಬಳಿ ಏತ ನೀರಾವರಿ ಯೋಜನೆ ಮಾಡಲು ಉದ್ದೇಶಿಸಲಾಗಿದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ಅವರು ಪ್ರಶ್ನೋತ್ತರ ವೇಳೆ ಶಾಸಕ ಕುಮಾರ ಬಂಗಾರಪ್ಪ ಅವರ ಪ್ರಶ್ನೆಗೆ ಉತ್ತರಿಸಿದರು. ವರದಾ ನದಿಗೆ ಗುಡವಿ ಮತ್ತು ಕೆರೆಹಳ್ಳಿ ಬಳಿ ಏತ ನೀರಾವರಿ ಯೋಜನೆ ರೂಪಿಸಲಾಗುತ್ತದೆ. ಜಂಗಿನಕೊಪ್ಪ ಬಳಿ ಬ್ಯಾರೇಜ್ ನಿರ್ಮಿಸಿ 9700 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲಾಗುವುದು.
ಸೊರಬ ತಾಲ್ಲೂಕಿನಲ್ಲಿ ದಂಡಾವತಿ ನದಿಗೆ ಅಡ್ಡಲಾಗಿ ಆಣೆಕಟ್ಟು ನಿರ್ಮಿಸಿ ಸೊರಬ ಮತ್ತು ಶಿಕಾರಿಪುರ ತಾಲ್ಲೂಕುಗಳ ಒಟ್ಟಾರೆ 6933 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಯೋಜಿಸಲಾಗಿತ್ತು. ಜೊತೆಗೆ 272 ಕೋಟಿ ರೂಪಾಯಿ ಆಡಳಿತಾತ್ಮಕ ಅನುಮೋದನೆಯನ್ನೂ ನೀಡಲಾಗಿತ್ತು. ಆದರೆ ಭೂಸ್ವಾಧೀನ, ಪರಿಸರ ಹಾಗೂ ಸ್ಥಳೀಯರ ವಿರೋಧದ ಕಾರಣಗಳಿಂದಾಗಿ ಈ ಯೋಜನೆಯನ್ನು ಅನುಷ್ಠಾನಗೊಳಿಸುವುದಕ್ಕೆ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಸದರಿ ಯೋಜನೆಯ ಬದಲಾಗಿ ಯಡಗೊಪ್ಪ ಗ್ರಾಮದ ಬಳಿ ಏತ ನೀರಾವರಿ ಯೋಜನೆ ಮಾಡಲಾಗುವುದು ಎಂದು ತಿಳಿಸಿದರು.
ಕಾಡು ಪ್ರಾಣಿಗಳ ದಾಳಿಯಿಂದ ಪ್ರಾಣಹಾನಿ ಪರಿಹಾರ ದ್ವಿಗುಣ : ಕಾಡು ಪ್ರಾಣಿಗಳ ದಾಳಿಯಿಂದ ಉಂಟಾಗುವ ಮಾನವ ಪ್ರಾಣ ಹಾನಿ, ಶಾಶ್ವತ ಅಂಗವಿಕಲತೆ, ಗಾಯಗೊಂಡವರು ಮತ್ತು ಆಸ್ತಿ-ಪಾಸ್ತಿ ಹಾನಿಗೆ ನೀಡುವ ಪರಿಹಾರ ಮೊತ್ತವನ್ನು ಪರಿಷ್ಕರಿಸಿ ದ್ವಿಗುಣಗೊಳಿಸಲಾಗಿದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ಅವರು ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಸಿ.ಎಸ್.ನಿರಂಜನಕುಮಾರ ಅವರ ಪ್ರಶ್ನೆಗೆ ಮುಖ್ಯಮಂತ್ರಿ ಪರವಾಗಿ ಉತ್ತರಿಸಿದರು.
ಕಾಡು ಪ್ರಾಣಿಗಳಿಂದ ದಾಳಿಯಿಂದ ಉಂಟಾಗುವ ಮಾನವ ಪ್ರಾಣ ಹಾನಿ ಪ್ರಕರಣಕ್ಕೆ ಮೊದಲು 7.5 ಲಕ್ಷ ರೂ. ಪರಿಹಾರ ನೀಡಲಾಗುತ್ತಿತ್ತು. ಇದನ್ನು 15 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. ಕಾಡು ಪ್ರಾಣಿಯಿಂದ ಉಂಟಾಗುವ ಶಾಶ್ವತ ಅಂಗವಿಲತೆಗೆ 5 ಲಕ್ಷ ರೂ.ನಿಂದ 10 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.ಕಾಡು ಪ್ರಾಣಿಯಿಂದ ಭಾಗಶಃ ಹಾಗೂ ಶಾಶ್ವತ ಅಂಗವಿಕಲತೆಗೆ ನೀಡುತ್ತಿದ್ದ 2.5 ಲಕ್ಷ ರೂನಿಂದ 5 ಲಕ್ಷ ರೂ.ಗಳಿಗೆ, ಕಾಡು ಪ್ರಾಣಿಗಳಿಂದ ಗಾಯಗೊಂಡವರಿಗೆ ನೀಡಲಾಗುತ್ತಿದ 30 ಸಾವಿರ ರೂ.ವನ್ನು 60 ಸಾವಿರಕ್ಕೆ ಹೆಚ್ಚಿಸಲಾಗಿದೆ. ಕಾಡು ಪ್ರಾಣಿಗಳ ಧಾಳಿಯಿಂದ ಪ್ರಾಣ ಕಳೆದುಕೊಂಡ ಕುಟುಂಬದವರಿಗೆ ನೀಡುತ್ತಿದ್ದ ಮಾಶಾಸನವನ್ನು 2000ದಿಂದ 4000 ರೂ.ಗೆ ಹೆಚ್ಚಿಸಲಾಗಿದೆ ಎಂದು ವಿವರಿಸಿದರು.
ಅರಣ್ಯ ಪ್ರದೇಶಗಳ ವ್ಯಾಪ್ತಿಯಲ್ಲಿರುವ ಕೃಷಿಕರಿಗೆ ಕಾಡುಪ್ರಾಣಿಗಳ ಹಾವಳಿಯಿಂದ ಬೆಳೆನಷ್ಟವಾಗಿ ಅಪಾರ ತೊಂದರೆಯಾಗುತ್ತಿದೆ. ಗುಂಡ್ಲುಪೇಟೆ ಮತ್ತು ಇತರ ಕಡೆ ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟಲು ರೈಲ್ವೆ ಬ್ಯಾರಿಕೇಡ್, ಆನೆತಡೆ ಕಂದಕ, ಸೋಲಾರ್ ತಂತಿಬೇಲಿ ನಿರ್ಮಾಣ ಮೊದಲಾದ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಕಾಡು ಪ್ರಾಣಿಗಳನ್ನು ಹಿಮ್ಮೆಟ್ಟಿಸಲು ವಿಶೇಷ ಕಾರ್ಯಪಡೆಯನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದರು.
ಇದನ್ನೂ ಓದಿ: ರಾಜ್ಯಪಾಲರ ಭಾಷಣದಲ್ಲಿ ಸರ್ಕಾರದಿಂದ ತೌಡು ಕುಟ್ಟುವ ಕೆಲಸವಾಗಿದೆ: ಸಿದ್ದರಾಮಯ್ಯ ವಾಗ್ದಾಳಿ