ಬೆಂಗಳೂರು: ಬ್ಯಾಂಕಾಕ್ ಪ್ರವಾಸಕ್ಕೆ ತೆರಳಿದ್ದ ವೇಳೆ ಇಹಲೋಕ ತ್ಯಜಿಸಿದ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಪಾರ್ಥಿವ ಶರೀರದ ಅಂತಿಮ ದರ್ಶನ ನಡೆಯುತ್ತಿದೆ. ಮಲ್ಲೇಶ್ವರಂನಲ್ಲಿನ ಸ್ಪಂದನಾ ತಂದೆ ಬಿ.ಕೆ ಶಿವರಾಮ್ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಗಣ್ಯರು, ಸಾರ್ವಜನಿಕರು ಆಗಮಿಸುತ್ತಿದ್ದಾರೆ.
ದಿ.ಪುನೀತ್ ರಾಜ್ಕುಮಾರ್ ಪತ್ನಿ ಅಶ್ವಿನಿ ರಾಜ್ಕುಮಾರ್ ಹಾಗೂ ಕುಂಬಸ್ಥರು ಅಂತಿಮ ದರ್ಶನ ಪಡೆದರು. ಸ್ಪಂದನಾ ಮೃತದೇಹ ಕಂಡ ಅಶ್ವಿನಿ ಬಿಕ್ಕಿ ಬಿಕ್ಕಿ ಅತ್ತರು. ಹಿರಿಯ ನಟ ದೊಡ್ಡಣ, ನಿರ್ದೇಶಕ ತರುಣ್ ಸುಧೀರ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಅಂತಿಮ ದರ್ಶನ ಪಡೆದರು.
ಮಧ್ಯಾಹ್ನ ಒಂದೂವರೆ ಗಂಟೆಯ ನಂತರ ಹರಿಶ್ಚಂದ್ರ ಘಾಟ್ನಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ. 11 ದಿನಗಳ ಒಳಗೆ ವಿಧಿ ವಿಧಾನ ಪೂರ್ಣವಾಗಬೇಕು. ಗುರುಗಳು ಹೇಳಿದ ಹಾಗೇ ಕೆಲಸಗಳು ನಡೆಯಲಿವೆ ಎಂದು ಈಡಿಗ ಸಮುದಾಯದ ಪ್ರಣವಾನಂದ ಸ್ವಾಮೀಜಿ ಹೇಳಿದರು.
'ಬಹಳ ವರ್ಷ ಬದುಕಿ ಬಾಳಬೇಕಿತ್ತು. ಅವರ ಪತಿ ಖ್ಯಾತ ಸಿನಿಮಾ ನಟರು. ಬಹಳ ಸುಂದರ ಜೀವನ ನಡೆಸುತ್ತಿದ್ದರು. ಬಾಳಿನಲ್ಲಿ ಬೇಕಾದಷ್ಟು ನೋಡಬೇಕಿತ್ತು. ಥೈಲ್ಯಾಂಡ್ನಲ್ಲಿ ಮೃತಪಟ್ಟಿರುವುದು ಬಹಳ ನೋವು ತಂದಿದೆ. ಶಿವರಾಂ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ಕೊಡಲಿ, ಸ್ಪಂದನಾ ಆತ್ಮಕ್ಕೆ ಶಾಂತಿ ಸಿಗಲಿ' - ಮುಖ್ಯಮಂತ್ರಿ ಸಿದ್ದರಾಮಯ್ಯ.
'ಒಂದು ವಾರದ ಹಿಂದೆ ದಂಪತಿ ಬಂದು ನನ್ನನ್ನು ಭೇಟಿ ಮಾಡಿದ್ರು. ಅವರು ಅಭಿನಂದನೆ ಸಲ್ಲಿಸಲು ಬಂದಿದ್ರು. ಬಹಳ ಆರೋಗ್ಯಕರವಾಗಿಯೇ ಇದ್ದರು. ಅವರ ಕುಟುಂಬಸ್ಥರು ನಮಗೆ ಬಹಳ ಆತ್ಮೀಯರು. ಅಂತಿಮ ದರ್ಶನಕ್ಕೆ ಬರುತ್ತಿರುವ ಜನಸಾಗರ ನೋಡಿದ್ರೆ ಅವರನ್ನು ಜನ ಎಷ್ಟು ಇಷ್ಟಪಟ್ಟಿದ್ರು ಅನ್ನೋದು ಗೊತ್ತಾಗುತ್ತದೆ. ಇಷ್ಟು ಚಿಕ್ಕ ವಯಸ್ಸಿಗೇನೆ ಹೀಗಾಗಬಾರದಿತ್ತು. ವಿಜಯ್ ರಾಘವೇಂದ್ರ, ಕುಟುಂಬಸ್ಥರಿಗೆ ದೇವರು ದುಃಖ ಭರಿಸೋ ಶಕ್ತಿ ಕೊಡಲಿ. ಎಲ್ಲರೂ ಆರೋಗ್ಯದ ಬಗ್ಗೆ ಗಮನ ಕೊಡಿ' - ಡಿಸಿಎಂ ಡಿಕೆಶಿ.
'ಸ್ಪಂದನಾ ಕುಟುಂಬ ಎಲ್ಲರಿಗೂ ಪರಿಚಿತರಾಗಿದ್ದಾರೆ. ಆತ್ಮಿಯ ಸ್ನೇಹಿತರ ಸಹೋದರಿ ನಿಧನದಿಂದ ತುಂಬಾ ನೋವಾಗುತ್ತಿದೆ. ಅತ್ಯಂತ ಸಣ್ಣ ವಯಸ್ಸಿನಲ್ಲಿ ಅಕಾಲಿಕ ಮರಣ ಹೊಂದಿದ್ದಾರೆ. ಇದು ಅಕಾಲಿಕ ಸಾವು. ಚಿಕ್ಕ ವಯಸ್ಸಿನಲ್ಲಿ ಸಾವಾಗಿರುವುದು ತುಂಬಾ ಬೇಸರದ ಸಂಗತಿ. ಅವರ ಸಹೋದರ ಹಾಗೂ ತಂದೆ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡವರು. ಸ್ಪಂದನಾ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಬಂಧು ಬಳಗಕ್ಕು ದೇವರು ದುಖಃ ಭರಿಸುವ ಶಕ್ತಿ ನೀಡಲಿ"- ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್.
''ಬಿ.ಕೆ ಶಿವರಾಮ್ ಪೊಲೀಸ್ ಅಧಿಕಾರಿಯಾಗಿ ನಮ್ಮ ಜಯನಗರ ಕ್ಷೇತ್ರದಲ್ಲಿಯೂ ಸಹ ಕೆಲಸ ಮಾಡಿದ್ದಾರೆ. ಆಗಿನಿಂದಲು ಸಹ ನಮಗೆ ಆಪ್ತರು. ಶಿವರಾಮ್ ಅವರ ಮಗಳು ಚಿಕ್ಕ ವಯಸ್ಸಿನಲ್ಲಿಯೇ ಅಗಲಿದ್ದಾರೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ''- ಸಚಿವ ರಾಮಲಿಂಗಾರೆಡ್ಡಿ
ನಟ ಶರಣ್ ಸಂತಾಪ: ಸ್ಪಂದನಾ ಅಕಾಲಿಕ ಮರಣ ನೋವು ತಂದಿದೆ. ಹಲವು ವರ್ಷ ಬಾಳಿ ಬದುಕಬೇಕಿತ್ತು. ಇದು ನಮಗೆ ದೊಡ್ಡ ಶಾಕ್. ಮನೆಯವರಿಗೆ ಭಗವಂತ ಶಕ್ತಿ ನೀಡಲಿ. ರೆಸ್ಟ್ ಇನ್ ಪೀಸ್ ಅಂತ ಹೇಳೋದಕ್ಕೂ ಸಾಧ್ಯವಿಲ್ಲ ಎಂದು ನಟ ಶರಣ್ ಭಾವುಕರಾದರು.
"ವಿಜಯ ರಾಘವೇಂದ್ರ ನನಗೆ ಅಣ್ಣನ ಹಾಗೆ. ನಮಗೆ ಶಾಕಿಂಗ್ ಸುದ್ದಿ ಇದು. ರಾಘು ಹಾಗೂ ಶೌರ್ಯ ಸ್ಪಂದನ ಮೇಲೆ ತುಂಬಾ ಡಿಪೆಂಡ್ ಆಗಿದ್ರು. ರಾಘು ಕೂಡ ಮಗು ಥರ , ಜೀವನದಲ್ಲಿ ರಾಘು ಹೇಗೆ ಇರ್ತಾರೆ ಎಂಬುದೇ ಭಯ. ಸ್ಪಂದನಾ ಎಲ್ಲರನ್ನೂ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ರಾಘುಗೆ ಅವನ ಮಗನನ್ನ ನೋಡಿಕೊಳ್ಳುವ ಶಕ್ತಿ ನೀಡಲಿ"- ನಿರ್ದೇಶಕ ತರುಣ್ ಸುಧೀರ್.
"ರಾಘು ಸ್ಪಂದನಾ ಆತ್ಮೀಯ ಗೆಳೆಯರು. ನಮ್ಮನ್ನ ಕುಟುಂಬ ಸದಸ್ಯರ ರೀತಿ ನೋಡ್ತಿದ್ರು. ಒಳ್ಳೆ ಕುಟುಂಬಕ್ಕೆ ಈ ರೀತಿ ಆಗ ಬಾರದಿತ್ತು. ರಾಘು ಹಾಗೂ ಶೌರ್ಯನಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ"- ನಟ ಜೆ.ಕಾರ್ತಿಕ್.
"ಸ್ಪಂದನಾ ಅಕಾಲಿಕವಾಗಿ ಮರಣ ಹೊಂದಿದ್ದಾರೆ. ಭಗವಂತನಿಗೆ ಬೇಕಾದಾಗ ಇಂತಹವರನ್ನು ಕರೆಸಿಕೊಳ್ಳುತ್ತಾನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ"- ಕೋಡಿ ಮಠದ ಶ್ರೀ
''ಇವತ್ತು ತುಂಬಾ ನೋವಿನ ದಿನ. ಚಿತ್ರರಂಗ ಕುಟುಂಬದ ಸದಸ್ಯ ರಾಘು ತುಂಬಾ ಪ್ರೀತಿಯ ಮಗ. ನನ್ನ ಜೀವನದಲ್ಲಿ ತುಂಬಾ ದುಃಖದಾಯಕವಾದ ಘಟನೆ ಇದು. ದಂಪತಿಯನ್ನು ಪ್ರತಿಯೊಬ್ಬರು ಹಾಡಿ ಹೊಗಳುತ್ತಿದ್ದಾರೆ. ಡಾ. ರಾಜ್ ಕುಟುಂಬದಲ್ಲಿ ಅನ್ಯೋನ್ಯತೆಯನ್ನು ನಾವು ನೋಡಬಹುದು. ಸಂಸ್ಕಾರ ಸಂಸ್ಕೃತಿ ಇರುವಂತಹ ಕುಟುಂಬ ಅದು. ರಾಘು ಹಾಗೂ ಕುಟುಂಬಕ್ಕೆ ದೇವರು ದಃಖ ಭರಿಸುವ ಶಕ್ತಿ ನೀಡಲಿ''- ಹಿರಿಯ ನಟಿ ಉಮಾಶ್ರೀ
''ನೋವಿನ ದಿನ ಇದು. ಯಾರಿಗೆ ಆಗಲಿ ಹೊಟ್ಟೆಕಿಚ್ಚು ಮೂಡಿಸುವಂತಹ ಜೋಡಿ ಅವರದ್ದು. ರಾಘು ಮತ್ತು ಅವರ ಮಗನಿಗೆ ಬೇಗ ಚೇತರಿಸಿಕೊಳ್ಳುವ ಶಕ್ತಿಯನ್ನು ದೇವರು ನೀಡಲಿ''- ಹಿರಿಯ ನಟ ರಂಗಾಯಣ ರಘು
ಸ್ಪಂದನಾ ವಿಜಯ ರಾಘವೇಂದ್ರ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಸ್ಪಂದನಾ ತಂದೆ ಬಿ.ಕೆ.ಶಿವರಾಮ್ ನಿವಾಸದ ಬಳಿ ವ್ಯವಸ್ಥೆ ಮಾಡಲಾಗಿದೆ. ರಾಜ್ ಕುಮಾರ್ ಕುಟುಂಬಸ್ಥರು, ನಟಿ ಸುಧಾರಾಣಿ, ಗಾಯಕ ವಿಜಯ ಪ್ರಕಾಶ್, ರಾಘವೇಂದ್ರ ರಾಜ್ ಕುಮಾರ್, ನಟ ಕೋಮಲ್, ಹಿರಿಯ ನಟ ಶ್ರೀನಾಥ್, ಹಿರಿಯ ನಟಿ ಗಿರಿಜಾ ಲೋಕೇಶ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.
ಇದನ್ನೂ ಓದಿ: ಇಂದು ಸ್ಪಂದನಾ ಅಂತ್ಯಕ್ರಿಯೆ.. ಮಧ್ಯಾಹ್ನದವರೆಗೂ ಅಂತಿಮ ದರ್ಶನಕ್ಕೆ ಅವಕಾಶ