ಬೆಂಗಳೂರು: ನಗರದ ಹೊರವಲಯ ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ರೌಡಿ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆ ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ. ಚನ್ನಣ್ಣನವರ್, ಆನೇಕಲ್ ಹಾಗೂ ಬನ್ನೇರುಘಟ್ಟ ಸರಹದ್ದಿಗೆ ಬರುವ ರೌಡಿ ಶೀಟರ್ಗಳನ್ನು ಕರೆಸಿ ಪರೇಡ್ ನಡೆಸಿ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಅಪರಾಧ ಪ್ರಕರಣಗಳಲ್ಲಿ ಗುರುತಿಸಿಕೊಂಡಿದ್ದ 100ಕ್ಕೂ ಅಧಿಕ ರೌಡಿಗಳನ್ನು ಆನೇಕಲ್ ಪೊಲೀಸ್ ಠಾಣೆ ಬಳಿ ಕರೆಸಿ, ನೇರವಾಗಿ ನೀವು ಸೈಲೆಂಟ್ ಆಗದಿದ್ದರೆ ನಾನು ವೈಲೆಂಟ್ ಆಗಬೇಕಾಗತ್ತೆ ಎಂದು ವಾರ್ನಿಂಗ್ ನೀಡಿದ್ದಾರೆ.
ರೌಡಿಸಂ ಮಾಡೋದು ಹೆಗ್ಗಳಿಕೆಯಲ್ಲ. ನಾವು ನಿಮ್ಮನ್ನ ಸರ್ ಅಂತ ಗೌರವದಿಂದ ಕರೆದು ಮಾತನಾಡಿಸುವ ರೀತಿ ಜೀವನ ಮಾಡಿ. ಇನ್ಮುಂದೆ ಇದೆಲ್ಲಾ ನಡೆಯೋದಿಲ್ಲ. ದೇಶದಲ್ಲಿ ಇರುವ ಕಾನೂನನ್ನು ಪಾಲಿಸಬೇಕು. ಬಾಲ ಬಿಚ್ಚಿದ್ರೆ ಕಟ್ ಮಾಡಿಬಿಡ್ತೀವಿ. ಐದಕ್ಕಿಂತ ಹೆಚ್ಚು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ರೆ ಅವರನ್ನು ಗೂಂಡಾ ಕಾಯ್ದೆ ಅಡಿಯಲ್ಲಿ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು ಎಂದು ಖಡಕ್ ವಾರ್ನಿಂಗ್ ನೀಡಿದರು.
ಬಳಿಕ ಅಪರಾಧ ಪ್ರಕರಣಗಳಿಂದ ದೂರವಾಗಿ ಒಳ್ಳೆಯ ಜೀವನ ನಡೆಸುತ್ತಿದ್ದ ಒಟ್ಟು 33 ಜನ ಹಳೇ ರೌಡಿ ಶೀಟರ್ಗಳನ್ನು ಪಟ್ಟಿಯಿಂದ ತೆಗೆದು ಮುಂದಿನ ನಿಮ್ಮ ಜೀವನ ಸುಖಕರವಾಗಿರಲಿ. ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗದಂತೆ ಒಳ್ಳೆಯ ಜೀವನ ನಡೆಸಿ ಎಂದರು.