ಬೆಂಗಳೂರು : ಎಸ್ ಪಿ ಬಾಲಸುಬ್ರಹ್ಮಣ್ಯಂ ಹಾಡಿದ್ದಾರೆಂದ್ರೇ ಸಿನಿಮಾಗಳು ಗಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿದ್ದವು ಎಂಬುದು ಕಳೆದ ಐದು ದಶಕಗಳಿಂದ ಕೇಳಿ ಬರುತ್ತಿದ್ದ ಮಾತು. ಬಹುತೇಕ ಸಿನಿಮಾದಲ್ಲಿ ಅದು ನಿಜವಾಗಿದೆ. ಅವರ ಕಂಠದಿಂದ ಹಾಡುಗಳು ಕನ್ನಡಿಗರ ನಾಲಿಗೆ ಮೇಲೆ ಈಗಲೂ ಗುನುಗುತ್ತಿವೆ.
ಚಿತ್ರದ ಪ್ರತಿಯೊಬ್ಬರಿಗೆ ಎಸ್ ಪಿ ಬಾಲಸುಬ್ರಹ್ಮಣ್ಯಂ ಗಾಯನದಿಂದ ನೇಮು, ಫೇಮ್ ದೊರೆಯುತ್ತಿತ್ತು. ಹಾಗೆಯೇ ಅದೆಷ್ಟೋ ಜನ ಸಿನಿ ಜಮಾನದಲ್ಲಿ ನೆಲೆ ಕಂಡುಕೊಂಡರು. ಅವರು ಹಾಡಿದ ಹಾಡುಗಳು ಎವರ್‌ಗ್ರೀನ್ ಎಂದು ಹೆಸರು ಮಾಡಿದ್ದವು. ರಾಜ್‌ಕುಮಾರ್, ಕಲ್ಯಾಣ್ ಕುಮಾರ್ ಅವರಿಂದ ಹಿಡಿದು ಈಗಿನ ನವ ನಟರಿಗೂ ಹಿನ್ನೆಲೆ ಧ್ವನಿ ನೀಡಿದ್ದಾರೆ.
‘ಹಾವಿನ ದ್ವೇಷ ಹನ್ನೆರಡು ವರ್ಷ’ ಹಾಡಿದ್ದಾಗ ವಿಷ್ಣು ರಾಮಚಾರಿಯಾಗಿದ್ದರು. ಅಲ್ಲಿಂದ ಆಪ್ತಮಿತ್ರದವರೆಗೂ ‘ಕರ್ನಾಟಕದ ಇತಿಹಾಸದಲ್ಲಿ ಬಂಗಾರ ಯುಗದ ಕಥೆ’...ಯಾಗಿದ್ದರು. ‘ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲ್ಲಿ’ ಪ್ರಣಯರಾಜ ಶ್ರೀನಾಥ್ ಕನ್ನಡಿಗರ ಮನೆಮಾತಾದರು. ‘ಸಂತೋಷಕ್ಕೆ..... ಹಾಡು.... ಹಾಡು.... ಸಂತೋಷಕ್ಕೆ’ ಎಂದು ಶಂಕರನಾಗರನ್ನು ಇಂದಿಗೂ ಹಾಡಿನಲ್ಲಿ ಜೀವಂತವಾಗಿಟ್ಟಿದ್ದಾರೆ. ‘ಗೆಳೆಯರೇ ನನ್ನ ಗೆಳತಿಯರೇ... ಕಳೆಯಿತು ಆ ಬೇಸಿಗೆ ಅರಳಿತು ಹೂ ಮೆಲ್ಲಗೆ...’ ಹಾಡುತ್ತಾ ಹಾಡುತ್ತಾ ಸಂಗೀತ ಪ್ರಧಾನದಿಂದಲ್ಲೇ ಚಿತ್ರ ಗೆಲ್ಲಬಹುದೆಂದು ರವಿಚಂದ್ರನ್‌ರಿಗೆ ದನಿಗೂಡಿಸಿದ್ದವರಲ್ಲಿ ಬಾಲು ಕೂಡ ಒಬ್ಬರು.
ಕಣ್ಣಿನ ನೋಟಗಳು, ಕುಚುಕು ಕುಚುಕು ನಾವು ಚಡ್ಡಿ ದೋಸ್ತಿ ಕಣೋ ಕುಚುಕು, ಈ ಭೂಮಿ ಬಣ್ಣದ ಬುಗುರಿ, ನಲಿವಾ ಗುಲಾಬಿ ಹೂವೇ, ಬಂದಳೋ ಬಂದಳೋ ಕಾಂಚನಾ, ಯಾವುದೋ ಈ ಬೊಂಬೆ ಯಾವುದೋ, ಚಾಮುಂಡಿ ತಾಯಿಯಾಣೆ ನಾನೆಂದು ನಿಮ್ಮವನೇ' ಅಂತಹ ಸಾವಿರಾರು ಹಿಟ್ ಗೀತೆಗಳನ್ನು ಕನ್ನಡ ಜನತೆಗೆ ಬಿಟ್ಟು ಹೋಗಿದ್ದಾರೆ.