ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ತಡವಾಗಿರುವ ಹಿನ್ನೆಲೆ ಬಿತ್ತನೆ ಕಾರ್ಯ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಲ ಕಡಿಮೆಯಾಗಿದೆ. ರಾಜ್ಯದಲ್ಲಿ 82 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಸಾಧಿಸಬೇಕಿತ್ತು. ಆದರೆ, ಇಲ್ಲಿ ವರೆಗೆ 43 ಲಕ್ಷ ಹೆಕ್ಟೇರ್ದಲ್ಲಿ ಮಾತ್ರ ಬಿತ್ತನೆಯಾಗಿದೆ. ಈ ಬಾರಿ ರಾಜ್ಯದಲ್ಲಿ ಒಟ್ಟಾರೆ ಶೇ.53 ರಷ್ಟು ಬಿತ್ತನೆಯಾಗಿದೆ.
ರಾಜ್ಯಾದ್ಯಂತ ಉತ್ತಮ ಮಳೆಯಾಗಿದೆ. ರೈತರು ಭೂಮಿ ಹದಗೊಳಿಸಿ, ಬಿತ್ತನೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ. 63 ರಷ್ಟು ಬಿತ್ತನೆ ಮಾಡಲಾಗಿತ್ತು. ಆದರೂ ಈಗಲೂ ಸಮಯಾವಕಾಶ ಇರುವುದರಿಂದ ಬಿತ್ತನೆ ಗುರಿ ಸಾಧಿಸಲಿದ್ದು, ಮುಂದಿನ 15 ದಿನದಲ್ಲಿ ಶೇ.100ರಷ್ಟು ಬಿತ್ತನೆಯಾಗಲಿದೆ ಎಂಬ ನಿರೀಕ್ಷೆ ಇದೆ.
ಅಲ್ಪಾವಧಿ ತಳಿಗಳನ್ನು ಬಿತ್ತನೆ ಮಾಡಲು ಸಲಹೆ:ಚೆಲುವರಾಯಸ್ವಾಮಿ:- ರಾಜ್ಯದಲ್ಲಿ ಮುಂಗಾರು ಮಳೆ ವಿಳಂಬ ಹಿನ್ನೆಲೆಯಲ್ಲಿ ರೈತರಿಗೆ ಅಲ್ಪಾವಧಿ ತಳಿಗಳನ್ನು ಬಿತ್ತನೆ ಮಾಡಲು ಸಲಹೆ ಮಾಡಲಾಗುವುದು ಎಂದು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರದ ಕೊರತೆ ಇಲ್ಲ. 14 ಲಕ್ಷ ಟನ್ ರಸಗೊಬ್ಬರ ಹಾಗೂ ಒಂದು ಲಕ್ಷ ಟನ್ ಬಿತ್ತನೆ ಬೀಜ ದಾಸ್ತಾನು ಇದೆ. ಈಗಲೂ ಬಿತ್ತನೆಗೆ ಸಮಯ ಇರುವುದರಿಂದ ಆಹಾರ ಧಾನ್ಯಗಳ ಉತ್ಪಾದನೆ ಕುಂಠಿತವಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಜ್ಯಾದ್ಯಂತ ಜುಲೈ ನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಪ್ರಮುಖ ಜಲಾಶಯಗಳು ಬಹುತೇಕ ಭರ್ತಿಯಾಗುವ ಹಂತಕ್ಕೆ ತಲುಪಿವೆ. ಈಗಾಗಲೇ ಕೆಲವು ಜಲಾಶಯಗಳ ನೀರನ್ನು ನಾಲೆ, ನದಿಗಳಿಗೂ ಬಿಡಲಾಗಿದ್ದು, ಇದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಮಳೆ ಕೊರತೆ: ಪ್ರಸಕ್ತ ಜೂನ್ ಹಾಗೂ ಜುಲೈ ತಿಂಗಳ ಮಳೆಯ ವಿವರದಂತೆ ಬಾಗಲಕೋಟೆ ತಾಲೂಕಿನಲ್ಲಿ 127 ಮಿ.ಮೀ ವಾಡಿಕೆ ಮಳೆಗೆ 70.7 ಮಿ.ಮೀ ಮಳೆಯಾಗಿದೆ. ಶೇ.44.3ರಷ್ಟು ಕೊರತೆಯಾಗಿದೆ. ಹುನಗುಂದ ತಾಲೂಕಿನಲ್ಲಿ ವಾಡಿಕೆ ಮಳೆಯಾದ 131.8 ಮಿ.ಮೀ ಮಳೆಗೆ 51.3 ಮಿ.ಮೀ ಮಳೆಯಾಗಿದೆ, ಶೇ. 61.1 ರಷ್ಟು ಮಳೆ ಕೊರತೆಯಾಗಿದೆ. ಇಳಕಲ್ ತಾಲೂಕಿನ ವಾಡಿಕೆ ಮಳೆ 122.5 ಮಿ.ಮೀ ಗೆ 57.6 ಮಿ.ಮೀ. ಮಳೆಯಾಗಿದ್ದು ಶೇ.53 ರಷ್ಟುಮಳೆ ಕಡಿಮೆಯಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಆರೆಂಜ್ ಅಲರ್ಟ್ ಎಚ್ಚರಿಕೆ:ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೀದರ್ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ 11ರಿಂದ 20 ಸೆಂ.ಮೀ.ವರೆಗೆ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಈ ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಎಚ್ಚರಿಕೆ ನೀಡಿದೆ.
ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಕಡಿಮೆ:- ಉಳಿದಂತೆ ಬೆಳಗಾವಿ, ಬಾಗಲಕೋಟೆ, ರಾಯಚೂರು, ವಿಜಯಪುರ, ಯಾದಗಿರಿ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಎಚ್ಚರಿಕೆ ನೀಡಲಾಗಿದೆ. ಇನ್ನು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಇಂದಿನಿಂದ ಮಳೆ ಪ್ರಮಾಣ ಇಳಿಕೆ ಆಗಲಿದೆ. ಜುಲೈ 30ರ ನಂತರ ಕರಾವಳಿ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಕಡಿಮೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕಲ್ಯಾಣ ಕರ್ನಾಟಕದಲ್ಲಿ ಭರ್ಜರಿ ಮಳೆ: ಅನಾವೃಷ್ಟಿಯಿಂದಾಗಿ ಭೀಕರ ಬರ ಸುಳಿಯಲ್ಲಿ ಸಿಲುಕಬಹುದಾಗಿದ್ದ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಈ ಬಾರಿ ಮಳೆ ವರವಾಗಿ ಪರಿಣಮಿಸಿದೆ. ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಭರ್ಜರಿ ಮಳೆಯಾಗಿದೆ. ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದರೆ, ಬಹುತೇಕ ಕೆರೆಗಳಿಗೆ ಜೀವಕಳೆ ಬಂದಿದೆ. ಜಲಾಶಯಗಳು ಭರ್ತಿಯಾಗುತ್ತಿವೆ.
ಇದನ್ನೂಓದಿ:ಸೌಂದರ್ಯದ ರಾಶಿ ಚಿಕ್ಕಮಗಳೂರು ಚಾರ್ಮಾಡಿ ಘಾಟಿ.. ಕಾಫಿನಾಡಿನ ಕ್ಷೀರಧಾರೆಯ ವಿಡಿಯೋ ನೋಡಿ..