ಬೆಂಗಳೂರು: ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರ ಆಗಮನದಿಂದಾಗಿ ದ.ಆಫ್ರಿಕಾದ ಪ್ರವಾಸೋದ್ಯಮ ಬೆಳವಣಿಗೆಯಾಗುತ್ತಿದೆ. ಪ್ರವಾಸೋದ್ಯಮದಿಂದಾಗಿ ದೇಶವು ಕಳೆದ ವರ್ಷ ಶೇ.53ರಷ್ಟು ಪ್ರಗತಿ ಸಾಧಿಸಿದೆ. ಈ ವರ್ಷ ಶೇ.64ರಷ್ಟು ಬೆಳವಣಿಗೆ ಹೊಂದುವ ನಿರೀಕ್ಷೆಯಿದೆ ಎಂದು ದ. ಆಫ್ರಿಕಾದ ಪ್ರವಾಸೋದ್ಯಮ ಇಲಾಖೆ ಮುಖ್ಯಸ್ಥೆ ನೆಲಿಸ್ಚಾ ನ್ಕಾನಿ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವನ್ಯಜೀವಿ, ಸಾಹಸ, ಚಲನಚಿತ್ರ ಪ್ರವಾಸೋದ್ಯಮ, ಸಾಂಸ್ಕೃತಿಕ ನೆಲೆ ಸೇರಿದಂತೆ ವೈವಿಧ್ಯಮಯ ಸ್ಥಳಗಳಿರುವ ದ.ಆಫ್ರಿಕಾ ಭಾರತೀಯ ಪ್ರವಾಸಿಗರಿಗೆ ಹೇಳಿ ಮಾಡಿಸಿದ ತಾಣವಾಗಿದೆ. ಅಲ್ಲದೆ ವ್ಯಾಪಾರ-ವಹಿವಾಟು ಹೂಡಿಕೆಗೆ ಸೂಕ್ತ ದೇಶವಾಗಿದೆ. ಕೊರೊನಾ ಸಾಂಕ್ರಾಮಿಕದ ನಡುವೆಯೂ ವರ್ಷದಿಂದ ವರ್ಷಕ್ಕೆ ಪ್ರವಾಸಿಗರ ಸಂಖ್ಯೆಯಲ್ಲಿ ದ್ವಿಗುಣವಾಗುತ್ತಿದೆ ಎಂದರು.
ಬೆಂಗಳೂರು, ಮುಂಬೈ, ಚೆನ್ನೈ ಹಾಗೂ ಪುಣೆ ನಗರಗಳು ಪ್ರವಾಸೋದ್ಯಮ ಮಾರುಕಟ್ಟೆಗೆ ಪ್ರಮುಖ ಕೇಂದ್ರಗಳಾಗಿವೆ. ಮುಂಬರುವ ದಿನಗಳಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಭಾರತದಲ್ಲಿ ಇ-ವೀಸಾ ವ್ಯವಸ್ಥೆ ಪ್ರಾರಂಭಿಸಲಿದ್ದೇವೆ. ವಿಮಾನಯಾನ ಸಂಸ್ಥೆಗಳಲ್ಲಿ ತೊಡಗಿಸಿಕೊಂಡು ಪ್ರಯಾಣ ವೆಚ್ಚವನ್ನು ಗಮನಾರ್ಹವಾಗಿ ಕಡಿಮೆ ಮಾಡಲು ನೋಡುತ್ತಿದ್ದೇವೆ ಎಂದು ವಿವರಿಸಿದರು.
ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಭಾರತ ಅಗ್ರ ಮೂರು ದೇಶಗಳ ಪೈಕಿ ಸ್ಥಾನ ಪಡೆದಿದೆ. ಕೊರೊನಾ ಮುನ್ನ ಭಾರತ ಏಳನೇ ಅಂತಾರಾಷ್ಟ್ರೀಯ ಮಾರುಕಟ್ಟೆಯಾಗಿತ್ತು. ದಕ್ಷಿಣ ಆಫ್ರಿಕಾಗೆ ಭೇಟಿ ನೀಡುವವರ ಪೈಕಿ ದೇಶದ ಮೂರು ನಗರಗಳಲ್ಲಿ ಬೆಂಗಳೂರು ಒಂದಾಗಿದ್ದು ಶೇ.47ರಷ್ಟು ಜನರು ವ್ಯಾಪಾರ ಹಾಗೂ ಇನ್ನಿತರ ಉದ್ದೇಶಕ್ಕಾಗಿ ಆಗಮಿಸುತ್ತಾರೆ ಎಂದರು.