ಬೆಂಗಳೂರು : ಈಗಾಗಲೇ ಕೆಲವರು ಶರ್ಟ್, ಪ್ಯಾಂಟ್ ಹೊಲಿಸಿಕೊಂಡಿದ್ದು ಸಿಎಂ ಆಗುವ ಕನಸು ಕಾಣುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟಾಂಗ್ ಕೊಟ್ಟರು. ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಅವರ ಕನಸು ನನಸಾಗಲ್ಲ. ಮುಂದೆ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ರಾಜ್ಯದ 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರಕ್ಕೆ ಬರಲಿದೆ. 3 ರಾಜ್ಯಗಳ ಫಲಿತಾಂಶ ಗಮನಿಸಿದರೆ ಕಾಂಗ್ರೆಸ್ ಪಕ್ಷ ಶೂನ್ಯದತ್ತ ನಡೆಯುತ್ತಿರುವುದು ಸ್ಪಷ್ಟ. ವಿರೋಧ ಪಕ್ಷವಾಗಲು ನಾಲಾಯಕ್ ಎಂಬ ಸ್ಥಿತಿಯಲ್ಲಿ ಕಾಂಗ್ರೆಸ್ ಇದೆ ಎಂದು ಟೀಕಿಸಿದರು.
ಕಾಂಗ್ರೆಸ್, ಜೆಡಿಎಸ್ ಮನೆ ಖಾಲಿ: ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸುತ್ತಿದ್ದು, ಜನರು ಡಬಲ್ ಇಂಜಿನ್ ಸರ್ಕಾರದ ಸಾಧನೆ ಒಪ್ಪಿದ್ದಾರೆ. ಮುಂದಿನ ದಿನಗಳಲ್ಲಿ ದೇಶ, ರಾಜ್ಯದ ಕಲ್ಯಾಣ ಬಿಜೆಪಿಯಿಂದ ಮಾತ್ರ ಸಾಧ್ಯ. ಯಾವುದೇ ಆಸೆ ಆಕಾಂಕ್ಷೆ ಇಲ್ಲದೆ, ವಿಚಾರ, ಸಿದ್ಧಾಂತವನ್ನು ಮನ ಗಂಡು ಮುಂದೆ ಬಿಜೆಪಿಯೇ ಭರವಸೆ ಎಂಬ ಭಾವನೆಯೊಂದಿಗೆ ಬಿಜೆಪಿ ಸೇರುತ್ತಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಮನೆ ಖಾಲಿ ಆಗುತ್ತಿದೆ. ಬೊಮ್ಮಾಯಿ ನೇತೃತ್ವ, ಯಡಿಯೂರಪ್ಪರ ಮಾರ್ಗದರ್ಶನದಲ್ಲಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನ ಗೆಲ್ಲಲಿದೆ ಎಂದು ತಿಳಿಸಿದರು.
ಲಕ್ಷ್ಮೀನಾರಾಯಣ್ ಬಿಜೆಪಿ ಸೇರ್ಪಡೆ : ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮೀನಾರಾಯಣ್ ಅವರು ಇಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು. ಇದೇ ವೇಳೆ ಸಾಮಾಜಿಕ ಕಾರ್ಯಕರ್ತ ಸೀಕಲ್ ರಾಮಚಂದ್ರಗೌಡ, ಉದ್ಯಮಿ ಎಸ್.ವಿ.ಆನಂದ ಗೌಡ, ಗ್ರಾ.ಪಂ. ಸದಸ್ಯ ಟಿ.ಪಿ. ಶ್ರೀಧರ್, ಸಿನಿಮಾ ನಿರ್ಮಾಪಕ ವಿಜಯ್‍ಕುಮಾರ್, ಸ್ಥಳೀಯ ಮುಖಂಡರುಗಳಾದ ಮಂಜುನಾಥ್ ಭಕ್ತರಹಳ್ಳಿ, ಮೂರ್ತಿ ಸೊನ್ನೆನಹಳ್ಳಿ, ರಾಜು ಬಳುವನಹಳ್ಳಿ, ಸುರೇಶ್ ಮಿಟ್ಟಿಮರಿ, ವೆಂಕಟರಾಮ್ ರೆಡ್ಡಿ, ವಿರೇಂದ್ರ, ನಾಗರಾಜ್ ಅವರು ಪಕ್ಷಕ್ಕೆ ಸೇರ್ಪಡೆಯಾದರು.
ಬಳಿಕ ಮಾತನಾಡಿದ ಲಕ್ಷ್ಮೀನಾರಾಯಣ್, ಸರ್ಕಾರದ ಕೆಲಸದಿಂದ ನಾಲ್ಕು ವರ್ಷಗಳ ಹಿಂದೆ ನಿವೃತ್ತಿ ಹೊಂದಿದ್ದೇನೆ. ಬಿಜೆಪಿ ಪಕ್ಷದ ತತ್ವ ಸಿದ್ಧಾಂತಗಳ ಬಗ್ಗೆ ತಿಳಿದುಕೊಂಡಿದ್ದೇನೆ. ಇದು ಜನಪರವಾದ ಸರ್ಕಾರವಾಗಿದ್ದು ಪ್ರಧಾನಿ ನರೇಂದ್ರ ಮೋದಿ, ಸಿಎಂ ಬೊಮ್ಮಾಯಿ, ಯಡಿಯೂರಪ್ಪ ಅವರು ಪ್ರಗತಿ ಪರ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಬಿಜೆಪಿ ಪಕ್ಷ ಸೇರ್ಪಡೆ ಆಗಿದ್ದೇನೆ. ಉತ್ತರ ಕರ್ನಾಟಕದಲ್ಲಿ ಕೆಲಸ ಮಾಡಿ ಅನುಭವ ಇದ್ದು, ಹಗರಿ ಬೊಮ್ಮನಹಳ್ಳಿ ಕ್ಷೇತ್ರದ ಆಕಾಂಕ್ಷಿ ಆಗಿದ್ದೇನೆ. ಪಕ್ಷದ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ ಎಂದರು.
ಇದನ್ನೂ ಓದಿ :ಕಾಂಗ್ರೆಸ್ ಆಡಳಿತಕ್ಕೆ ಬಂದಾಗೆಲ್ಲ ಮತೀಯ ಗಲಭೆಗಳಿಗೆ ಪ್ರಚೋದನೆ: ಕಟೀಲ್