ಬೆಂಗಳೂರು: ರಾಜ್ಯ ಸಚಿವ ಸಂಪುಟ ರಚನೆ ಬೆನ್ನಲ್ಲೇ ಅಸಮಾಧಾನ ಸ್ಫೋಟಗೊಂಡಿದ್ದು, ಬಹಿರಂಗವಾಗಿಯೇ ಶಾಸಕರು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಹೈಕಮಾಂಡ್ ವಿರುದ್ಧ ಮಾತನಾಡಲು ಸಾಧ್ಯವಾಗದೆ ಮೌನಕ್ಕೆ ಶರಣಾಗಿದ್ದಾರೆ. ಸಂಪುಟದಲ್ಲಿ ಅವಕಾಶ ಕೈತಪ್ಪಿದ ಶಾಸಕರು ಅಸಮಧಾನ ಹೊರಹಾಕಿದ್ದಾರೆ. ಪಕ್ಷ ನಡೆಸಿಕೊಂಡ ರೀತಿಗೆ ಬೇಸರಗೊಂಡು ಬೆಂಬಲಿಗರ ಮೂಲಕ ಪ್ರತಿಭಟನೆ ನಡೆಸಿ ರಾಜ್ಯ ನಾಯಕರಿಗೆ ಬಿಸಿ ಮುಟ್ಟಿಸಿದ್ದಾರೆ.
ಬಿಎಸ್ವೈ ವಿರೋಧಿ ಬಣದ ಶಾಸಕ ಅರವಿಂದ ಬೆಲ್ಲದ್ ಅವಕಾಶ ಸಿಗದ ಬಗ್ಗೆ ಪ್ರತಿಕ್ರಿಯೆ ನೀಡಲ್ಲ ಎನ್ನುತ್ತಲೇ ಅಸಮಾಧಾನ ಹೊರಹಾಕಿದ್ದಾರೆ. ಬಿಎಸ್ವೈ ಸಂಪುಟದಲ್ಲಿ ಸಚಿವರಾಗಿದ್ದ ಸಿ.ಪಿ. ಯೋಗೇಶ್ವರ್ರನ್ನು ಕೂಡ ಸಂಪುಟದಿಂದ ಕೈಬಿಟ್ಟಿದ್ದು, ಇದಕ್ಕೆ ನೋ ಕಮೆಂಟ್ಸ್, ಹೇಳುವುದಕ್ಕೆ ಏನೂ ಇಲ್ಲ ಎನ್ನುತ್ತ ಹತಾಶೆ ವ್ಯಕ್ತಪಡಿಸಿದರು.
ಯಡಿಯೂರಪ್ಪ ಪರ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದವರ ಪರಿಸ್ಥಿತಿ ಏನೂ ಭಿನ್ನವಾಗಿಲ್ಲ. ಯಡಿಯೂರಪ್ಪ ಪರ ಶಾಸಕರ ಸಹಿ ಸಂಗ್ರಹ ಮಾಡಿದ್ದ ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ಯಡಿಯೂರಪ್ಪ ನಿವಾಸಕ್ಕೆ ದೌಡಾಯಿಸಿ ನಾವು ಮಾಡಿದ ತಪ್ಪೇನು ಎಂದು ಪ್ರಶ್ನಿಸಿದ್ದಾರೆ, ಕಣ್ಣೀರು ಹಾಕಿ ಹೊರನಡೆದಿದ್ದಾರೆ. ಮತ್ತೋರ್ವ ಶಾಸಕ ರಾಜೂಗೌಡ ಕೂಡ ಇಂತಹ ಅವಮಾನ ನಮಗೇನು ಹೊಸದಲ್ಲ, ಆರು ಬಾರಿ ಈ ರೀತಿ ಆಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಶಾಸಕ ರಾಮದಾಸ್ ತೀವ್ರ ಅತೃಪ್ತಿ ಹೊರಹಾಕಿದ್ದು, ಮಂಗಳವಾರ ಸಾಕಷ್ಟು ಜನ ಅಭಿನಂದನೆ ಸಲ್ಲಿಸಿದ್ದರು. ಆದರೆ ಈಗ ಅವಕಾಶ ಕೈತಪ್ಪಿದೆ. ಕಳೆದ ಬಾರಿ ಕೂಡ ಪ್ರಮಾಣವಚನಕ್ಕೆ ಆಹ್ವಾನ ನೀಡಿ ನಂತರ ಕೈಕೊಟ್ಟಿದ್ದರು, ಈಗಲೂ ಅದೇ ನಿರಾಸೆಯಾಗಿದೆ ಎಂದರು. ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವಕಾಶ ಸಿಗಲಿದೆ ಎಂದು ಮಾಧ್ಯಮದಲ್ಲಿ ಬರುತ್ತಿತ್ತು, ಆದರೆ ಏಕೆ ಬದಲಾಯಿತು ಎಂದು ಗೊತ್ತಿಲ್ಲ, ಶಶಿಕಲಾ ಜೊಲ್ಲೆ ಬದಲು ಬೇರೆಯವರಿಗೆ ಅವಕಾಶ ಕೊಡಬೇಕಿತ್ತು ಎಂದಿದ್ದಾರೆ.
ಶಾಸಕ ಸಿದ್ದು ಸವದಿ ಮಾತ್ರ ಪಕ್ಷದ ವಿರುದ್ಧ ಕೆಂಡ ಕಾರಿದ್ದಾರೆ. ಮೋಸ ವಂಚನೆ ಮಾಡಿದವರಿಗೆ ಅವಕಾಶ ಸಿಗುತ್ತಿದೆ, ನಮ್ಮಂತವರಿಗೆ ಮಾತ್ರ ಅವಕಾಶ ಸಿಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಅಲ್ಲದೆ ಶಾಸಕ ನೆಹರೂ ಓಲೆಕಾರ್ ಕೂಡ ಇದಕ್ಕೆ ಹೊರತಲ್ಲ, ವಿಧಾನಸಭೆ ಉಪಾಧ್ಯಕ್ಷ ಆನಂದ್ ಮಾಮನಿ ಕೂಡ ಅಸಮಧಾನಗೊಂಡಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಬೆದರಿಕೆ ಒಡ್ಡಿದ್ದಾರೆ.
ಅವಕಾಶ ವಂಚಿತ ಶಾಸಕರೆಲ್ಲರೂ ಮೊದಲ ದಿನವೇ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೈಕಮಾಂಡ್ ವಿರುದ್ಧ ಯಾರೂ ದನಿ ಎತ್ತದೇ ಇದ್ದರೂ ಅಲ್ಲಲ್ಲಿ ಬೆಂಬಲಿಗರ ಮೂಲಕ ಪ್ರತಿಭಟನೆ ನಡೆಸಿ ರಾಜ್ಯ ನಾಯಕರ ವಿರುದ್ಧ ಕಿಡಿಕಾರಿದ್ದಾರೆ. ಸಂಪುಟ ರಚನೆಯಂದೇ ಶಾಸಕರ ಅಸಮಧಾನ ಸ್ಫೋಟಗೊಂಡಿದ್ದು, ಮುಂದಿನ ದಿನಗಳಲ್ಲಿ ಅದು ಯಾವ ಹಂತ ತಲುಪಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: 29 ಸಚಿವರ ಪ್ರಮಾಣ : ಬೊಮ್ಮಾಯಿ ಸಂಪುಟ ಬಹುತೇಕ ಭರ್ತಿ