ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ 10:12 ಕ್ಕೆ ಪ್ರಾರಂಭವಾಗಿದ್ದು 1:31 ಕ್ಕೆ ಗ್ರಹಣ ಅಂತ್ಯವಾಗಲಿದೆ. 11:47 ರ ವೇಳೆಗೆ ಗ್ರಹಣದ ಗರಿಷ್ಠತೆ ಇದ್ದು, ನಗರಕ್ಕೆ ಪಾರ್ಶ್ವ ಗ್ರಹಣ ಕಾಣಲಿದೆ. ಕಲಬುರ್ಗಿಯಲ್ಲಿ 1:38 ರ ವರೆಗೂ ಗ್ರಹಣ ಸಂಭವಿಸಲಿದೆ.
ಕೋವಿಡ್ ತುರ್ತುಪರಿಸ್ಥಿತಿಯಿಂದಾಗಿ ಬೆಂಗಳೂರಿನ ನೆಹರೂ ತಾರಾಲಯದಲ್ಲಿ ಸಾರ್ವಜನಿಕರಿಗೆ ಗ್ರಹಣದ ವೀಕ್ಷಣೆಗೆ ಯಾವುದೇ ವ್ಯವಸ್ಥೆ ಇಲ್ಲ. ಅಂತರ್ಜಾಲದ ಮೂಲಕ ಗ್ರಹಣದ ನೇರಪ್ರಸಾರಕ್ಕೆ ತಯಾರಿ ನಡೆಸಿದೆ. ಇದು ಕಂಕಣ ಸೂರ್ಯಗ್ರಹಣವಾಗಿದ್ದು ದೇಶದ ಹರಿಯಾಣ, ಪಂಜಾಬ್ ಮತ್ತು ಉತ್ತರಾಖಂಡದಲ್ಲಿ ಪೂರ್ಣವಾಗಿ ಕಂಕಣ ಸೂರ್ಯಗ್ರಹಣ ಗೋಚರಿಸಲಿದ್ದು, ಉಳಿದೆಡೆ ಪಾರ್ಶ್ವ ಸೂರ್ಯಗ್ರಹಣವಾಗಿ ಕಾಣಲಿದೆ.
ಸೂರ್ಯಗ್ರಹಣ:
ಚಂದ್ರನು 'ಸೂರ್ಯ ಮತ್ತು ಭೂಮಿಯ' ನಡುವೆ ಬಂದಾಗ ಚಂದ್ರನ ನೆರಳು ಭೂಮಿಯ ಕೆಲವು ಪ್ರದೇಶಗಳ ಮೇಲೆ ಬೀಳುತ್ತದೆ. ಇದನ್ನು ಸೂರ್ಯಗ್ರಹಣ ಎನ್ನಲಾಗುತ್ತದೆ. ಸೂರ್ಯ ಚಂದ್ರನಿಗಿಂತ 400 ಪಟ್ಟು ದೊಡ್ಡ ಕಾಯವಾದರೂ ಚಂದ್ರನಿಗಿಂತ ಸುಮಾರು, 400 ಪಟ್ಟು ಹೆಚ್ಚು ದೂರದಲ್ಲಿರುವುದರಿಂದ ಆಕಾಶದಲ್ಲಿ ಎರಡು ಕಾಯಗಳ ತೋರಿಕೆಯ ಗಾತ್ರ ಒಂದೇ. ಹೀಗಾಗಿ ಚಂದ್ರ ಕೆಲವೊಮ್ಮೆ ಸೂರ್ಯನನ್ನು ಸಂಪೂರ್ಣವಾಗಿ ಆವರಿಸಿಕೊಳ್ಳುವುದನ್ನು ಸೂರ್ಯಗ್ರಹಣ ಎನ್ನುತ್ತಾರೆ.
ಕಂಕಣ ಸೂರ್ಯಗ್ರಹಣ:
ಕೆಲವೊಮ್ಮೆ ಚಂದ್ರನ ತೋರಿಕೆಯ ಗಾತ್ರ ಸೂರ್ಯನ ತೋರಿಕೆಯ ಗಾತ್ರಕ್ಕಿಂತ ಕಡಿಮೆ ಇದ್ದಾಗ, ಚಂದ್ರನ ಬಿಂಬ ಸೂರ್ಯನನ್ನು ಸಂಪೂರ್ಣವಾಗಿ ಆವರಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಆಗ ಸೂರ್ಯ ಬಳೆಯ ರೂಪದಲ್ಲಿ ಕಾಣಿಸಿಕೊಳ್ಳುವುದರಿಂದ ಇಂತಹ ಸೂರ್ಯಗ್ರಹಣವನ್ನು ಕಂಕಣ ಸೂರ್ಯಗ್ರಹಣ ಎನ್ನಲಾಗುತ್ತದೆ.