ಬೆಂಗಳೂರು: ರಾಜಧಾನಿಯಲ್ಲಿ ದಿನೇ ದಿನೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿದೆ. ಈ ನಡುವೆ ರೋಗಿಗಳಿಗೆ ಸೂಕ್ತ ಸಮಯಕ್ಕೆ ಆ್ಯಂಬುಲೆನ್ಸ್ ದೊರೆಯದೇ ಸಾವನ್ನಪ್ಪುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಹೀಗಿರುವಾಗ ಇಲ್ಲೊಬ್ಬ ವ್ಯಕ್ತಿ ತನ್ನ ಆಟೋವನ್ನು ಆ್ಯಂಬುಲೆನ್ಸ್ ಆಗಿ ಪರಿವರ್ತಿಸಿ, ಸಮಾಜ ಕಾರ್ಯದಲ್ಲಿ ತೊಡಗಿದ್ದಾರೆ.
ಬೆಂಗಳೂರಿನ ಆರ್ಟಿ ನಗರದ ನಿವಾಸಿ ಆಗಿರುವ ಆಟೋ ಚಾಲಕ ಅಬ್ದುಲ್ ಮಜೀದ್ ಸೌದಾಗರ್ ಎಂಬವರು ತನ್ನ ಆಟೊ ರಿಕ್ಷಾವನ್ನು ಆ್ಯಂಬುಲೆನ್ಸ್ ಆಗಿ ಪರಿವರ್ತಿಸಿ ದಿನಪೂರ್ತಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ರೋಗಿಗಳ ಬಳಿ ಹಣ ಇಲ್ಲದಿದ್ದರೂ, ಆಸ್ಪತ್ರೆಗೆ ಸಾಗಿಸುವ ಕಾಯಕದಲ್ಲಿ ನಿರತರಾಗಿದ್ದಾರೆ.
ಲಾಕ್‍ಡೌನ್ ಪ್ರಾರಂಭದಿಂದಲೂ ಬೆಂಗಳೂರಿನಲ್ಲಿ ತುರ್ತು ಆರೋಗ್ಯ ಸೇವೆಗಳಿಗಾಗಿ ಜನರು ಪರದಾಟ ನಡೆಸುತ್ತಿದ್ದು, ಮುಖ್ಯವಾಗಿ ಆ್ಯಂಬುಲೆನ್ಸ್ ವ್ಯವಸ್ಥೆ ಸರಿಯಾಗಿ ಸಿಗುತ್ತಿಲ್ಲ. ಇದನ್ನು ಮನಗಂಡು ಆಟೋ ಆ್ಯಂಬುಲೆನ್ಸ್ ಆರಂಭಿಸಿ ಅಂದಿನಿಂದ ಇಂದಿನವರೆಗೂ ನೂರಾರು ರೋಗಿಗಳ ಸಹಾಯಕ್ಕೆ ಮುಂದಾಗಿದ್ದಾರೆ. ಸದ್ಯ ಮೊಬೈಲ್ ಸಂಖ್ಯೆ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದ್ದು, ನಿತ್ಯ ರೋಗಿಗಳು ಸಂಪರ್ಕಿಸುತ್ತಾರೆ. ಇದುವರೆಗೂ ಸುಮಾರು 78ಕ್ಕೂ ಅಧಿಕ ರೋಗಿಗಳನ್ನು ಒಂದು ರೂಪಾಯಿ ಸಹ ಪಡೆಯದೇ, ಆಸ್ಪತ್ರೆಗೆ ಸಾಗಿಸಿದ್ದಾರೆ.
ಅಷ್ಟೇ ಅಲ್ಲದೆ, ಕೋವಿಡ್ -19 ಸಂಬಂಧ ಆಸ್ಪತ್ರೆಗೆ ದಾಖಲಾಗಿ ಗುಣಮುಖರಾದ 25 ಮಂದಿಗೂ ಹೆಚ್ಚು ಜನರನ್ನು ಮನೆಗೆ ತಲುಪಿಸಿದ್ದೇನೆ ಅಂತಾರೆ ಅಬ್ದುಲ್ ಮಜೀದ್. ಇನ್ನೂ ಕೊರೊನಾ ಆರಂಭದ ದಿನದಿಂದಲೂ ಪಿಪಿಇ ಕಿಟ್ ಹಾಗೂ ಎನ್-95 ಮಾಸ್ಕ್ ಅನ್ನು ಧರಿಸಿ, ಆಟೋ ಚಾಲನೆ ಮಾಡುವ ಮೂಲಕ ಅಬ್ದುಲ್ ಮಜೀದ್ ಗಮನ ಸೆಳೆದಿದ್ದರು. ಜತೆಗೆ, ನಿತ್ಯ ತಮ್ಮ ಆಟೋ ರಿಕ್ಷಾವನ್ನು ಸ್ಯಾನಿಟೈಸ್ ಮಾಡುತ್ತಿದ್ದು, ಆಟೋದಲ್ಲಿ ಪ್ರಯಾಣ ಬೆಳೆಸುವ ರೋಗಿಗಳಿಗೆ ಕೊರೊನಾ ಸೋಂಕು ಅಂಟಿಕೊಳ್ಳದಂತೆ ಎಚ್ಚರಿಕೆ ವಹಿಸುತ್ತಾರೆ. ಜನರು ಆರೋಗ್ಯ ಸೇವೆಗಳನ್ನು ಪಡೆಯಲು ಹರಸಾಹಸ ಪಡಬೇಕಾದ ಪರಿಸ್ಥಿತಿಯ ನಡುವೆ ಉಚಿತ ಆಟೋ ಆ್ಯಂಬುಲೆನ್ಸ್ ಆರಂಭಿಸಿದ 40 ವರ್ಷದ ಅಬ್ದುಲ್ ಮಜೀದ್ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರು ಡಿಪ್ಲೋಮಾ ಕೋರ್ಸ್ ವ್ಯಾಸಂಗ ಮಾಡಿದ್ದು, ಹಲವು ಐಟಿ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.
ಇನ್ನು, ಇವರ ಸಮಾಜ ಸೇವೆಗೆ ಸಂಚಾರಿ ಪೊಲೀಸರಿಂದ ಅನುಮತಿ ದೊರೆತಿದ್ದು, ಇದಕ್ಕೆ ನಿರ್ಗಮಿತ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸಹಾಯ ಮಾಡಿದ್ದರು. ಆರಂಭದಲ್ಲಿ ಅಬ್ದುಲ್ ಮಜೀದ್ ಅವರಿಗೆ ಕೆಲವರು ಆಟೋ ಗ್ಯಾಸ್ ಹಾಗೂ ಸ್ಯಾನಿಟೈಸ್ ಮಾಡಲು ಸಹಾಯ ಮಾಡಿದ್ದರು. ಆದರೆ, ಇದೀಗ ಕಷ್ಟಕರ ಪರಿಸ್ಥಿತಿ ನಿರ್ಮಾಣವಾಗಿದ್ದು, ರೋಗಿಗಳೇ ಸ್ವ ಇಚ್ಛೆಯಿಂದ ನೀಡುವ ಹಣದಿಂದ ಆಟೋಗೆ ಇಂಧನ ತುಂಬಿಸುತ್ತಾರೆ. ಇನ್ನು ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದಾಗ ಅಲ್ಲಿನ ಪೊಲೀಸ್ ಸಿಬ್ಬಂದಿ ಅಬ್ದುಲ್ ಮಜೀದ್ ಅವರಿಗೆ ಕರೆ ಮಾಡಿ, ರೋಗಿಗಳ ವಿಳಾಸ ತಿಳಿಸುತ್ತಾರೆ. ಇನ್ನು, ತುರ್ತು ಆರೋಗ್ಯ ಸೇವೆ ಅಥವಾ ಆಸ್ಪತ್ರೆಗೆ ತೆರಳುವ ರೋಗಿಗಳು ಅಬ್ದುಲ್ ಮಜೀದ್ ಅವರ ಮೊಬೈಲ್ ಸಂಖ್ಯೆ 99869 03424 ಸಂಪರ್ಕಿಸಬಹುದಾಗಿದೆ.