ಬೆಂಗಳೂರು: ಕಳೆದ ಒಂದು ವರ್ಷದ ಅವಧಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ. ಡಿಸಿಎಂ ಗೋವಿಂದ ಕಾರಜೋಳ ಅವರ ಬಳಿ ಇದ್ದ ಈ ಖಾತೆಯನ್ನು ಈಗ ಶ್ರೀರಾಮುಲು ಅವರಿಗೆ ವರ್ಗಾಯಿಸಲಾಗಿದೆ. ಕಳೆದ ಒಂದು ವರ್ಷದಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ. ಸರ್ಕಾರ ಈ ಒಂದು ವರ್ಷದಲ್ಲಿ ಎಷ್ಟು ಅನುದಾನ ವಿನಿಯೋಗಿಸಿದೆ ಅನ್ನೋ ಮಾಹಿತಿ ಇಲ್ಲಿದೆ.
ಎಸ್‍ಸಿಪಿ ಮತ್ತು ಟಿಎಸ್‍ಪಿ ಯೋಜನೆಯಡಿ 2019-20ನೇ ಸಾಲಿನಲ್ಲಿ 27,558 ಕೋಟಿ ರೂ. ಒದಗಿಸಲಾಗಿತ್ತು. ವಿವಿಧ ಇಲಾಖೆಗಳು ವಿವಿಧ ಕಾರ್ಯಕ್ರಮಗಳಿಗೆ ಮಾರ್ಚ್ ಅಂತ್ಯದ ವೇಳೆಗೆ 25,387 ಕೋಟಿ ರೂ.ನಷ್ಟು (ಶೇ. 92 ) ವೆಚ್ಚ ಮಾಡಲಾಗಿದೆ. ಪರಿಶಿಷ್ಟ ಜಾತಿಯವರ ಅಭಿವೃದ್ಧಿಗಾಗಿ 18,228 ಕೋಟಿ ರೂ. ಹಾಗೂ ಪರಿಶಿಷ್ಟ ಪಂಗಡದವರ ಏಳಿಗೆಗಾಗಿ 7,159 ಕೋಟಿ ರೂ. ವಿನಿಯೋಗಿಸಲಾಗಿದೆ. 2020-21ನೇ ಸಾಲಿನಲ್ಲಿ 27,699 ಕೋಟಿ ರೂ. ಮೀಸಲಿಡಲಾಗಿದೆ. ಕೊರೊನಾ ಹಿನ್ನೆಲೆ 5603 ಕೋಟಿ ರೂ. (ಶೇ. 20)ರಷ್ಟು ವೆಚ್ಚ ಮಾಡಲಾಗಿದೆ. ಸಮಾಜ ಕಲ್ಯಾಣ ಇಲಾಖೆಯು 2019-20ನೇ ಸಾಲಿನಲ್ಲಿ 4139 ಕೋಟಿ (ಶೇ. 98) ರೂ. ವೆಚ್ಚ ಮಾಡಲಾಗಿದೆ. 2020-21ನೇ ಸಾಲಿನಲ್ಲಿ 3821 ಕೋಟಿ ರೂ. ಮೀಸಲಿಡಲಾಗಿದ್ದು, 722 ಕೋಟಿ ರೂ. (ಶೇ. 20) ವೆಚ್ಚ ಮಾಡಲಾಗಿದೆ. ಪರಿಶಿಷ್ಟ ಪಂಗಡದವರ ಕಲ್ಯಾಣಕ್ಕಾಗಿ 2019-20ನೇ ಸಾಲಿನಲ್ಲಿ 1281 ಕೋಟಿ ರೂ. (ಶೇ. 97) ವಿನಿಯೋಗಿಸಲಾಗಿದೆ.
2020-21 ನೇ ಸಾಲಿನಲ್ಲಿ 1461 ಕೋಟಿ ರೂ. ಹಂಚಿಕೆಯಾಗಿದ್ದು, 2019-20ನೇ ಸಾಲಿನಲ್ಲಿ 303 ಕೋಟಿ ರೂ. ವೆಚ್ಚ ಮಾಡಲಾಗಿದೆ. 1,69,374 ಪರಿಶಿಷ್ಟ ಜಾತಿ ಹಾಗೂ 36548 ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ವಸತಿ ನಿಲಯ ಪ್ರವೇಶಾವಕಾಶ ಕಲ್ಪಿಸಲಾಗಿದೆ. 9.11 ಲಕ್ಷ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ 134 ಕೋಟಿ ರೂ. ಹಾಗೂ ಪರಿಶಿಷ್ಟ ಪಂಗಡದ 3.99 ಲಕ್ಷ ವಿದ್ಯಾರ್ಥಿಗಳಿಗೆ 51.97 ಕೋಟಿ ರೂ. ವಿದ್ಯಾರ್ಥಿ ವೇತನ ನೀಡಲಾಗಿದೆ. ಇನ್ನು ಗಂಗಾ ಕಲ್ಯಾಣ ಯೋಜನೆಯಡಿ 8270 ಕೊಳವೆ ಬಾವಿಗಳನ್ನು ಕೊರೆಯಿಸಲಾಗಿದ್ದು, ಹಿಂದೆ ಕೊರೆದಿರುವ 9125 ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.
2020-12ನೇ ಸಾಲಿನಲ್ಲಿ 4501 ಕೊಳವೆ ಬಾವಿಗಳನ್ನು ಕೊರೆದಿದ್ದು, 763 ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಭೂ ಒಡೆತನ ಯೋಜನೆಯಡಿ 2391 ಫಲಾನುಭವಿಗಳಿಗೆ 3228 ಎಕರೆ ಜಮೀನನ್ನು 295 ಕೋಟಿ ರೂ. ವೆಚ್ಚದಲ್ಲಿ ಖರೀದಿಸಿಕೊಡಲಾಗಿದೆ. 2020-21ನೇ ಸಾಲಿನಲ್ಲಿ 1151 ಫಲಾನುಭವಿಗಳಿಗೆ 141 ಕೋಟಿ ರೂ. ವೆಚ್ಚದಲ್ಲಿ 1603 ಎಕರೆ ಜಮೀನನ್ನು ಖರೀದಿಸಿ ನೀಡಲಾಗಿದೆ.
ಸ್ವಯಂ ಉದ್ಯೋಗ ಯೋಜನೆಯಡಿ 24312 ಫಲಾನುಭವಿಗಳಿಗೆ 620 ಕೋಟಿ ರೂ. ವೆಚ್ಚದ ಸಾಲ ಸೌಲಭ್ಯ ಹಾಗೂ ಸಹಾಯಧನ ನೀಡಲಾಗಿದೆ. ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮವು ವಿವಿಧ ಕಾರ್ಯಕ್ರಮಗಳಿಗೆ 69 ಕೋಟಿ ರೂ. ವಿನಿಯೋಗಿಸಿ, 3379 ಕುಶಲಕರ್ಮಿಗಳಿಗೆ ವಸತಿ, ತರಬೇತಿ ಮತ್ತು ಸ್ವಾವಲಂಬಿ ಮಾರಾಟ ಮಳಿಗೆಗಳನ್ನು ಸ್ಥಾಪಿಸಲು ಸಹಾಯಧನ ನೀಡಲಾಗಿದೆ.
2020-21 ನೇ ಸಾಲಿನಲ್ಲಿ ಎಸ್ಸಿ ವೆಲ್ಫೇರ್ಗೆ ಒದಗಿಸಿದ ಅನುದಾನದ ವಿವರ ಈ ಕೆಳಗಿನಂತಿದೆ:
- ಸಮಾಜ ಕಲ್ಯಾಣ ಇಲಾಖೆಯ ಕಾರ್ಯಕ್ರಮಗಳಿಗೆ- 2237.06 ಕೋಟಿ ರೂ.
- ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ - 865.00 ಕೋಟಿ ರೂ.
- ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ- 166.74 ಕೋಟಿ ರೂ.
- ಆದಿಜಾಂಬವ ಅಭಿವೃದ್ಧಿ ನಿಗಮ- 112.75 ಕೋಟಿ ರೂ.
- ತಾಂಡಾ ಅಭಿವೃದ್ಧಿ ನಿಗಮ- 80.00 ಕೋಟಿ ರೂ.
- ಭೋವಿ ಅಭಿವೃದ್ಧಿ ನಿಗಮ- 60.00 ಕೋಟಿ ರೂ.
- ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮ- 40.00 ಕೋಟಿ ರೂ.
- ಅಲೆಮಾರಿ ಕೋಶ- 60.00 ಕೋಟಿ ರೂ.
- ಒಟ್ಟು - 3621.55 ಕೋಟಿ ರೂ.
2020-21ನೇ ಸಾಲಿನಲ್ಲಿ ಎಸ್ಟಿ ವೆಲ್ಫೇರ್ಗೆ ಒದಗಿಸಿದ ಅನುದಾನ ವಿವರ ಹೀಗಿದೆ:
- ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ- 925.97 ಕೋಟಿ ರೂ.
- ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ- 302.00 ಕೋಟಿ ರೂ.
- ವಾಲ್ಮೀಕಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮ- 156.50 ಕೋಟಿ ರೂ.
- ಅಲೆಮಾರಿ ಮತ್ತು ಅರಣ್ಯ ಆಧಾರಿತ ಬುಡಕಟ್ಟು ಜನಾಂಗಗಳ ಅಭಿವೃದ್ಧಿ- 48.40 ಕೋಟಿ ರೂ.
- ಮೂಲ ನಿವಾಸಿಗಳಾದ ಕೊರಗ ಮತ್ತು ಜೇನುಕುರುಬರ ಸಮಗ್ರ ಅಭಿವೃದ್ಧಿ- 28.83 ಕೋಟಿ ರೂ.
- ಒಟ್ಟು- 1461.70 ಕೋಟಿ ರೂ.