ಬೆಂಗಳೂರು: ಮಾತಾ ಮಿನಿರಲ್ಸ್ ಹೆಸರಿನಲ್ಲಿ ಅಕ್ರಮ ಗಣಿಗಾರಿಕೆ ನಡೆಸಿ ಸರ್ಕಾರದ ಬೊಕ್ಕಸಕ್ಕೆ ₹ 187 ಕೋಟಿ ರೂ. ನಷ್ಟ ಉಂಟು ಮಾಡಿದ್ದಾರೆ ಎಂದು ಆರೋಪಿಸಿ ಸಚಿವ ವಿ.ಸೋಮಣ್ಣ ಸೇರಿ 8 ಮಂದಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಗೆ ದೂರು ನೀಡಿದ್ದಾರೆ.
ಎಸಿಬಿಗೆ ಕಚೇರಿಗೆ ಹಾಜರಾಗಿ ಅಧಿಕಾರಿಗಳನ್ನು ಭೇಟಿ ಮಾಡಿದ ಟಿ.ಜೆ ಅಬ್ರಹಾಂ ಕೆಲ ದಾಖಲೆಗಳ ಸಮೇತ ದೂರು ನೀಡಿದ್ದಾರೆ. ಅಕ್ರಮ ಗಣಿಗಾರಿಕೆಯಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿ ಸಚಿವ ವಿ. ಸೋಮಣ್ಣ, ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ, ಐಎಎಸ್ ಅಧಿಕಾರಿಗಳಾದ ಮಹೇಂದ್ರ ಜೈನ್, ಗಂಗಾರಾಮ್ ಬಡೇರಿಯಾ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಾಜಿ ನಿರ್ದೇಶಕ ಬಸಪ್ಪ ರೆಡ್ಡಿ, ಖಾಸಗಿ ವ್ಯಕ್ತಗಳಾದ ಬಿ.ಎಸ್ ಪುಟ್ಟರಾಜು, ಸೋಮಶೇಖರ್, ಬಿ.ಎಸ್ ನವೀನ್ ವಿರುದ್ಧ ದೂರು ನೀಡಿದ್ದಾರೆ.
ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನಲ್ಲಿ ಅಮರ್ ಸಿಂಗ್ ಎಂಬುವವರು ಮಾತ ಮಿನರಲ್ಸ್ ಮೈನಿಂಗ್ ಸಂಸ್ಥೆ ಹೊಂದಿದ್ದರು. ಮಾಲೀಕತ್ವ ಪಡೆಯದೇ ಮಾತಾ ಮಿನಿರಲ್ಸ್ ಹೆಸರಲ್ಲಿ ಸೋಮಣ್ಣ ಮತ್ತು ಇತರರು ಅಕ್ರಮ ಗಣಿಗಾರಿಕೆ ನಡೆಸಿದ್ದಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ₹ 187,89,84,000 ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗಿದೆ ಎಂದು ಟಿ.ಜೆ ಅಬ್ರಾಹಂ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಅಕ್ರಮ ಗಣಿಗಾರಿಕೆ ನಡೆಸಿದ ಹಿನ್ನೆಲೆಯಲ್ಲಿ ಮಾತಾ ಮಿನಿರಲ್ಸ್‌ಗೆ ಮೈನಿಂಗ್ ನಡೆಸಲು ಅನುಮತಿ ನೀಡದಂತೆ ನ್ಯಾಯಾಲಯದಿಂದ ಆದೇಶವಾಗಿತ್ತು. 2006ರಲ್ಲಿ ಮೈನಿಂಗ್ ನಡೆಸಲು ಅನುಮತಿ ನೀಡದಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಕಮೀಷನರ್ ಸೂಚಿಸಿದ್ದರು. ಮೈನಿಂಗ್ ನಡೆಸಲು ಅನುಮತಿ ನೀಡಬಾರದು ಎಂಬ ಆದೇಶವಿದ್ದರೂ, ಅಕ್ರಮವಾಗಿ ಮೈನಿಂಗ್ ಮಾಡಲಾಗಿದೆ. ಈ ಬಗ್ಗೆ ಲೋಕಾಯುಕ್ತ ಸಂಸ್ಥೆಯು ತನಿಖೆ ನಡೆಸಿ ವರದಿಯನ್ನೂ ತಯಾರಿಸಿದೆ. ಗುಬ್ಬಿ ಸಬ್ ರಿಜಿಸ್ಟ್ರಾರ್ ಮಾಲೀಕರ ಸಹಿ ಇಲ್ಲದೇ ವರ್ಗಾವಣೆ ಪತ್ರವನ್ನು ನೊಂದಾಯಿಸಿರುವುದು ಲೋಕಾಯುಕ್ತ ತನಿಖೆಯಲ್ಲಿ ಕಂಡು ಬಂದಿತ್ತು. ಆ ಸಂದರ್ಭದಲ್ಲಿ ಸರ್ಕಾರಕ್ಕೆ ಕೋಟ್ಯಂತರ ರೂ. ನಷ್ಟವಾಗಿದೆ.
ಗಣಿಗಾರಿಕೆ ನಡೆಸದಂತೆ ಕೇಂದ್ರ ಟ್ರಿಬ್ಯೂನಲ್ನಲ್ಲಿ ಆದೇಶವಾಗಿತ್ತು. ಆದರೆ, ಅದನ್ನು ಮುಚ್ಚಿ ಹಾಕಿ ರಿನಿವಲ್ ಮಾಡಲು ಅರ್ಜಿ ಸಲ್ಲಿಸಿದ್ದರು. ಮೈನಿಂಗ್ ರಿನಿವಲ್ ಮಾಡಬೇಕಾದರೆ ಪೋಟೊ ಗುರುತು ಕಡ್ಡಾಯವಾಗಿರಬೇಕು. ಆದರೆ, ಈ ಪ್ರಕರಣದಲ್ಲಿ ಪೋಟೊ ಗುರುತು ಕಂಡು ಬಂದಿಲ್ಲ. ಮಾತಾ ಮಿನಿರಲ್ಸ್ ಸಂಸ್ಥೆ ಹೆಸರಿನಲ್ಲಿ ನಡೆಸಿರುವ ಅಕ್ರಮ ಗಣಿಗಾರಿಕೆ ಬಗ್ಗೆ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಟಿ.ಜೆ ಅಬ್ರಾಹಂ ಉಲ್ಲೇಖಿಸಿದ್ದಾರೆ.
ದೂರಿನ ಬಗ್ಗೆ ಮಾತನಾಡಿದ ಟಿ.ಜೆ ಅಬ್ರಹಾಂ, ಸೋಮಣ್ಣ ಈ ಹಿಂದೆ ಶಾಸಕರಾಗಿದ್ದಾಗ ಅವರ ಪ್ರಭಾವ ಬಳಸಿ ಅಧಿಕಾರದ ದುರ್ಬಳಕೆ ಮಾಡಿಕೊಂಡು ಅಕ್ರಮ ಗಣಿಗಾರಿಕೆ ನಡೆಸಿದ್ದಾರೆ. ಎಸಿಬಿಯು ರಾಜ್ಯ ಸರ್ಕಾರದ ಕೆಳಗೆ ಕೆಲಸ ಮಾಡುತ್ತಿರುವ ಕಾರಣ ಈ ಪ್ರಕರಣದ ಬಗ್ಗೆ ಅಧಿಕಾರಿಗಳಿಗೆ ಪ್ರಾಮಾಣಿಕವಾಗಿ ತನಿಖೆ ನಡೆಸಲು ಸಾಧ್ಯವಾಗದೇ ಇರಬಹುದು. ಸೂಕ್ತ ರೀತಿಯಲ್ಲಿ ತನಿಖೆ ನಡೆಸದಿದ್ದರೆ ಸುಪ್ರೀಂಕೋರ್ಟ್ ಮೊರೆ ಹೋಗುತ್ತೇನೆ ಎಂದು ತಿಳಿಸಿದ್ದಾರೆ.