ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಇತ್ತೀಚಿನ ದಿನಗಳಲ್ಲಿ ಅದೇಕೋ ವಿಮಾನ ಪ್ರಯಾಣ ಮತ್ತು ಕೆಲ ಪ್ರಯಾಣಿಕರು ಸುದ್ದಿಯಾಗುತ್ತಲೇ ಇದ್ದಾರೆ. ಭಾರತ ಸೇರಿದಂತೆ ಪ್ರಪಂಚದ ಕೆಲವೆಡೆ ಕೆಲ ಪ್ರಕರಣಗಳು ಸದ್ದು ಮಾಡಿವೆ. ಹಾಗಂತ ಇವೆಲ್ಲ ವಿಮಾನ ಅಪಘಾತಗಳ ವಿಚಾರಗಳಲ್ಲ. ಆದ್ರೆ ಕೆಲ ಪ್ರಯಾಣಿಕರ ದುರ್ವರ್ತನೆಗಳು. ಬಹುತೇಕ ಸುಶಿಕ್ಷಿತರೇ ಆಗಿರುವ ಪ್ರಯಾಣಿಕರಲ್ಲಿ ಕೆಲವರು ಪ್ರಯಾಣದ ವೇಳೆ ಅನುಚಿತವಾಗಿ ವರ್ತಿಸಿರುವುದಕ್ಕೆ ಸಂಬಂಧಿಸಿದಂತೆ ಪ್ರಕರಣಗಳು ಸಹ ದಾಖಲಾಗಿವೆ. ಮಹಿಳಾ ಪ್ರಯಾಣಿಕರ ಮೇಲೆ ಮೂತ್ರ ಮಾಡಿರುವುದು, ವಿಮಾನದ ಶೌಚಾಲಯದಲ್ಲಿ ಅಪಾಯಕ್ಕೆ ಆಹ್ವಾನ ನೀಡುವ ಧೂಮಪಾನ ನಿಷೇಧವಿದ್ದರೂ ನಿರ್ಲಕ್ಷ್ಯದ ಮನಸ್ಥಿತಿ ಹೊಂದಿದವರು ಸಿಗರೇಟ್ ಸೇದಿರುವ ಪ್ರಕರಣಗಳು ವರದಿಯಾಗಿವೆ.
ಇಂಡಿಗೋ ವಿಮಾನದಲ್ಲಿ ಅಶಿಸ್ತಿನ ವರ್ತನೆ.. ಇಂಡಿಗೋ ವಿಮಾನದ ಶೌಚಾಲಯದಲ್ಲಿ ಧೂಮಪಾನ ಮಾಡಿ ಅಶಿಸ್ತಿನ ವರ್ತನೆ ತೋರಿದ ಪ್ರಯಾಣಿಕನ ವಿರುದ್ಧ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶುಕ್ರವಾರ ಬೆಳಗಿನ ಜಾವ 1.45 ಗಂಟೆ ಸಮಯದಲ್ಲಿ ಅಸ್ಸೋಂನಿಂದ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ನಂ 6ಇ-716 ಇಂಡಿಗೋ ವಿಮಾನದಲ್ಲಿ ಘಟನೆ ನಡೆದಿದೆ.
ಶೌಚಾಲಯದಿಂದ ಹೊಗೆ ಮತ್ತು ವಾಸನೆ ಬಂದಾಗ ಪರಿಶೀಲಿಸಿದ ಸಿಬ್ಬಂದಿ.. ಪ್ರಯಾಣಿಕ ಶೇಹರಿ ಚೌಧರಿ ಎಂಬಾತ ವಿಮಾನದಲ್ಲಿನ ಶೌಚಾಲಯದ ಒಳ ಹೋಗಿ ಬಂದಿದ್ದು, ಅನಂತರ ಶೌಚಾಲಯದಿಂದ ಹೊಗೆ ಮತ್ತು ವಾಸನೆ ಬಂದಿದೆ. ಅನುಮಾನಗೊಂಡ ವಿಮಾನದ ಸಿಬ್ಬಂದಿ ಶೌಚಾಲಯ ಪರಿಶೀಲನೆ ಮಾಡಿದಾಗ ಶೇಹರಿ ಚೌಧರಿ ಧೂಮಪಾನ ಮಾಡಿರುವುದು ಕಂಡು ಬಂದಿದೆ. ವಿಮಾನದ ಕ್ಯಾಪ್ಟನ್ ವಿಮಾನದಲ್ಲಿ ಧೂಮಪಾನ ಮಾಡಿದ ಪ್ರಯಾಣಿಕನನ್ನು ಅಶಿಸ್ತಿನ ಪ್ರಯಾಣಿಕನೆಂದು ಘೋಷಿಸಿದ್ದಾರೆ. ಆತನ ವಿರುದ್ಧ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ವಿಮಾನ ಶೌಚಾಲಯದಲ್ಲಿ ಸಿಗರೇಟ್ ಸೇದಿದ್ದ ಯುವತಿ: ಹತ್ತು ದಿನಗಳ ಹಿಂದೆ ಇದೇ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನದ ಶೌಚಾಲಯದಲ್ಲಿ ಯುವತಿಯೊಬ್ಬಳು ಸಿಗರೇಟ್ ಸೇದಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಕೊಲ್ಕಾತ್ತಾದಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನದಲ್ಲಿ ಈ ಘಟನೆ ನಡೆದಿದ್ದು, ಪಶ್ಚಿಮ ಬಂಗಾಳ ಮೂಲದ ಯುವತಿಯನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದರು. ಯುವತಿ ಇಂಡಿಗೋ ವಿಮಾನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತಲುಪುವ ಅರ್ಧ ಗಂಟೆ ಮೊದಲು ವಿಮಾನದ ಶೌಚಾಲಯಕ್ಕೆ ಹೋಗಿ ಸಿಗರೇಟ್ ಸೇದಿದ್ದಾರೆ. ವಿಮಾನದ ಸಿಬ್ಬಂದಿ ಶೌಚಾಲಯದ ಬಾಗಿಲು ತೆಗೆದು ನೋಡಿದಾಗ ಡಸ್ಟ್ ಬಿನ್ನಲ್ಲಿ ಸಿಗರೇಟ್ ತುಂಡುಗಳು ಕಂಡು ಬಂದಿದೆ. ಸಿಗರೇಟ್ ಕಂಡ ತಕ್ಷಣ ಹೊಗೆಯಾಡುತ್ತಿದ್ದ ಸಿಗರೇಟ್ಗೆ ಸಿಬ್ಬಂದಿ ನೀರು ಸುರಿದಿದ್ದಾರೆ. ವಿಮಾನ ಬೆಂಗಳೂರು ನಿಲ್ದಾಣದಲ್ಲಿ ಲ್ಯಾಂಡ್ ಆದ ಕೂಡಲೇ ಸಿಬ್ಬಂದಿ ವಿಷಯ ತಿಳಿಸಿದ್ದು, ಆರೋಪಿ ಯುವತಿಯನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ವಿಮಾನದಲ್ಲಿ ಮಹಿಳೆಯರೊಂದಿಗೆ ಅನುಚಿತ ವರ್ತನೆ.. ಡಿಜಿಸಿಎಗೆ ಸ್ವಾತಿ ಮಲಿವಾಲ್ ನೋಟಿಸ್