ಬೆಂಗಳೂರು : ಗ್ರಾಹಕರ ವಿದ್ಯುತ್ ಬಿಲ್ ಜನರೇಟ್, ವಿದ್ಯುತ್ ಸಂಪರ್ಕ ಕಡಿತ, ವಿದ್ಯುತ್ ಮರು ಸಂಪರ್ಕ ಎಲ್ಲವೂ ಇನ್ಮುಂದೆ ಕುಳಿತಲ್ಲಿಂದಲೇ ಆಗಲಿದೆ. ಅಂತಹ ಸ್ಮಾರ್ಟ್ ಎನರ್ಜಿ ಮೀಟರ್ ಅನ್ನು ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಅಡಿ ಬರುವ ಸಿಡಾಕ್ ಸಂಸ್ಥೆ ಆವಿಷ್ಕಾರ ಮಾಡಿದೆ. ಹಾಗಾಗಿ ವಿದ್ಯುತ್ ಸರಬರಾಜು ಕಂಪನಿಗಳು ಇನ್ಮುಂದೆ ಕಂಪ್ಲೀಟ್ ಸ್ಮಾರ್ಟ್ ಆಗಲಿವೆ.
ವಿದ್ಯುತ್ ಸರಬರಾಜು ಕಂಪನಿಗಳಿಗೆ ಅನುಕೂಲಕರವಾದ ಉಪಕರಣವನ್ನು ಸರ್ಕಾರದ ಅಧೀನ ಸಂಸ್ಥೆ ಸಿಡಾಕ್ ಆವಿಷ್ಕಾರ ಮಾಡಿದೆ. ಸ್ಮಾರ್ಟ್ ಎನರ್ಜಿ ಮೀಟರ್ ಅನ್ನು ಸಂಶೋಧಿಸಿ ಉತ್ಪಾದನೆ ಮಾಡಿದೆ. ಮನೆಗಳು, ಮಳಿಗೆಗಳು, ಕೈಗಾರಿಕೆ ಇತ್ಯಾದಿ ವಿದ್ಯುತ್ ಸಂಪರ್ಕ ಪಡೆದ ಕಡೆ ಈ ಮೀಟರ್ ಅಳವಡಿಸಿದಲ್ಲಿ ಕಚೇರಿಯಿಂದಲೇ ವಿದ್ಯುತ್ ಮೀಟರ್ಗಳನ್ನು ನಿಯಂತ್ರಿಸಬಹುದಾಗಿದೆ.
ಸಿಬ್ಬಂದಿಯ ಶ್ರಮ - ಸಮಯ ಉಳಿತಾಯ: ಪ್ರತಿ ತಿಂಗಳು ಗ್ರಾಹಕರ ಮನೆ ಬಾಗಿಲಿಗೆ ಹೋಗಿ ವಿದ್ಯುತ್ ಬಿಲ್ ನೀಡಲು ಮೀಟರ್ ರೀಡಿಂಗ್ ನೋಡುವುದು ತಪ್ಪಲಿದೆ. ಸ್ವಯಂ ಚಾಲಿತವಾಗಿ ತಿಂಗಳ ವಿದ್ಯುತ್ ಬಿಲ್ ಬಳಕೆ ಬಿಲ್ ರೂಪದಲ್ಲಿ ಜನರೇಟ್ ಆಗಲಿದ್ದು, ಅದನ್ನು ಗ್ರಾಹಕರಿಗೆ ತಲುಪಿಸಿದರೆ ಸಾಕು ಇದರಿಂದ ವಿದ್ಯುತ್ ಸರಬರಾಜು ಕಂಪನಿ ಸಿಬ್ಬಂದಿಯ ಶ್ರಮ ಹಾಗೂ ಸಮಯ ಎರಡೂ ಉಳಿತಾಯವಾಗಲಿದೆ.
ಇನ್ನು ವಿದ್ಯುತ್ ಬಿಲ್ ಪಾವತಿ ಮಾಡದೇ ಇದ್ದರೆ ಅಂತಹ ಮನೆ, ಮಳಿಗೆ, ಕಂಪನಿ ಇತ್ಯಾದಿಗಳ ವಿದ್ಯುತ್ ಸಂಪರ್ಕವನ್ನು ಕಚೇರಿಯಲ್ಲಿ ಕುಳಿತುಕೊಂಡೇ ಸ್ಮಾರ್ಟ್ ಎನರ್ಜಿ ಮೀಟರ್ ಮೂಲಕವೇ ವಿದ್ಯುತ್ ಸಂಪರ್ಕ ಕಡಿತ ಮಾಡಬಹುದಾಗಿದೆ. ಇದಕ್ಕೆ ಬೇಕಾದ ತಂತ್ರಾಂಶವನ್ನು ಸ್ಮಾರ್ಟ್ ಮೀಟರ್ನಲ್ಲಿ ಅಳವಡಿಸಲಾಗಿದೆ. ಗ್ರಾಹಕರು ವಿದ್ಯುತ್ ಬಿಲ್ ಕಟ್ಟುತ್ತಿದ್ದಂತೆ ಅದೇ ತಂತ್ರಾಂಶ ಬಳಸಿಕೊಂಡು ಸ್ಮಾರ್ಟ್ ಎನರ್ಜಿ ಮೀಟರ್ ಮೂಲಕ ಕಡಿತಗೊಂಡಿರುವ ವಿದ್ಯುತ್ ಸಂಪರ್ಕವನ್ನು ಮರು ಸ್ಥಾಪಿಸಬಹುದಾಗಿದೆ. ಇದರಿಂದಾಗಿ ವಿದ್ಯುತ್ ಸಂಪರ್ಕ ಕಡಿತ ಮಾಡಲು ಮತ್ತು ಮರು ಸಂಪರ್ಕ ಕಲ್ಪಿಸಲು ವಿದ್ಯುತ್ ಸರಬರಾಜು ಕಂಪನಿಗಳ ಸಿಬ್ಬಂದಿ, ಗ್ರಾಹಕರ ಮನೆ ಬಾಗಿಲಿಗೆ ಬರುವುದು ತಪ್ಪಲಿದೆ. ಪ್ಯೂಸ್ ತೆಗೆಯುವ ತಾಪತ್ರಯವೂ ತಪ್ಪಲಿದೆ.
ಇನ್ನು ಒಂದು ವೇಳೆ ಮನೆಯಲ್ಲಿ ಸೌರ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದರೆ, ಅಲ್ಲಿನ ಹೆಚ್ಚುವರಿ ವಿದ್ಯುತ್ ಅನ್ನು ಗ್ರಿಡ್ಗೆ ರವಾನಿಸಿ ಆ ಹಣವನ್ನು ವಿದ್ಯುತ್ ಬಿಲ್ ಜೊತೆ ಹೊಂದಾಣಿಕೆ ಮಾಡುವ ವ್ಯವಸ್ಥೆ ಕೂಡ ಇದೆ. ಇದೆಲ್ಲವೂ ಸಂಪೂರ್ಣವಾಗಿ ಸ್ವಯಂ ಚಾಲಿತವಾಗಿ ನಡೆಯುವ ರೀತಿ ಸ್ಮಾರ್ಟ್ ಎನರ್ಜಿ ಮೀಟರ್ ಅನ್ನು ವಿನ್ಯಾಸಗೊಳಿಸಲಾಗಿದೆ.
ಈ ಕುರಿತು ಈಟಿವಿ ಭಾರತದ ಜೊತೆ ಮಾತನಾಡಿದ ಬೆಂಗಳೂರು ಸಿಡಾಕ್ ಸಂಸ್ಥೆ ಜಂಟಿ ನಿರ್ದೇಶಕ ಶ್ರೀಕೃಷ್ಣ,
ಗ್ರಾಹಕರ ಮನೆಗೆ ಬಂದು ವಿದ್ಯುತ್ ಮೀಟರ್ ಮ್ಯಾನ್ಯುವಲ್ ರೀಡಿಂಗ್ ನೋಡಿದ ನಂತರ ಬಿಲ್ ಜನರೇಟ್ ಆಗುತ್ತಿತ್ತು. ಈಗ ಹೊಸದಾಗಿ ಆಟೋಮೆಟಿಕ್ ಮೀಟರಿಂಗ್ ಇನ್ ಫ್ರಾಸ್ಟ್ರಕ್ಚರ್(ಎಎಂಐ) ಉತ್ಪಾದಿಸಿದ್ದೇವೆ. ಇದರಲ್ಲಿ ಆಟೋಮೆಟಿಕ್ ಮೀಟರಿಂಗ್ ವ್ಯವಸ್ಥೆ ಇದೆ. ಇದರಲ್ಲಿ ನೆಟ್ ಟು ಮೀಟರಿಂಗ್ ಎನ್ನುವ ಮುಖ್ಯವಾದ ಫೀಚರ್ ಅಳವಡಿಸಲಾಗಿದೆ. ಮನೆಯ ಛಾವಣಿ ಮೇಲೆ ಸೌರ ವಿದ್ಯುತ್ ಉತ್ಪಾದನೆ ಮಾಡಿದರೆ, ಅಲ್ಲಿನ ಹೆಚ್ಚುವರಿ ವಿದ್ಯುತ್ ಅನ್ನು ಗ್ರಿಡ್ಗೆ ರವಾನಿಸಲಿದೆ. ಅದನ್ನು ಮೀಟರ್ನಲ್ಲಿ ಬಿಲ್ ಹೊಂದಾಣಿಕೆ ಮಾಡುವ ಮೆಕ್ಯಾನಿಸಮ್ ಇದೆ. ರಿಮೋಟ್ ಆನ್ ಅಂಡ್ ಆಫ್ ಮಾಡುವ ವ್ಯವಸ್ಥೆ ಇದೆ.
ಸಿಂಗಲ್ ಫೇಸ್ ಸ್ಮಾರ್ಟ್ ಎನರ್ಜಿ ಮೀಟರ್: ವಿದ್ಯುತ್ ಸಂಪರ್ಕ ಕಲ್ಪಿಸುವ ಕಂಪನಿಗಳ ಪ್ರತಿನಿಧಿಗಳು ತಾವು ಕುಳಿತ ಸ್ಥಳದಿಂದಲೇ ಬಿಲ್ ಪಾವತಿಸದವರ ವಿದ್ಯುತ್ ಸಂಪರ್ಕ ಕಡಿತ ಮತ್ತು ಮರು ಸಂಪರ್ಕ ಕಲ್ಪಿಸುವ ವ್ಯವಸ್ಥೆ ಇದೆ. ಇದೆಲ್ಲಾ ಆಟೋಮಷಿನ್ ಆಗಿದೆ. ಸಿಂಗಲ್ ಫೇಸ್ ಸ್ಮಾರ್ಟ್ ಎನರ್ಜಿ ಮೀಟರ್ ಇದು. ಬಿಇಎಲ್ ಸಹಯೋಗದಲ್ಲಿ ಈ ಸ್ಮಾರ್ಟ್ ಎನರ್ಜಿ ಮೀಟರ್ ಉತ್ಪಾದನಾ ಹಂತದಲ್ಲಿದೆ. ಇನ್ನು ಲಾಂಚ್ ಆಗಿಲ್ಲ. ಬಿಇಎಲ್ಗೆ ನಾವು ತಂತ್ರಜ್ಞಾನ ಹಸ್ತಾಂತರ ಮಾಡಿದ್ದೇವೆ. ಬಿಇಎಲ್ ಇದರ ಉತ್ಪಾದನಾ ನಿರ್ವಹಣೆ ಮಾಡಲಿದೆ. ವಿದ್ಯುತ್ ಸರಬರಾಜು ಕಂಪನಿಗಳ ಬೇಡಿಕೆಗೆ ತಕ್ಕಂತೆ ಸ್ಮಾರ್ಟ್ ಎನರ್ಜಿ ಮೀಟರ್ ಉತ್ಪಾದನೆ ಮಾಡಲಿದ್ದು, ಸರ್ಕಾರ ಅನುಮತಿ ನೀಡುತ್ತಿದ್ದಂತೆ ಈ ಉತ್ಪನ್ನವನ್ನು ಲಾಂಚ್ ಮಾಡುವುದಾಗಿ ತಿಳಿಸಿದರು.
ಇದನ್ನೂ ಓದಿ: ವಿದ್ಯುತ್ ಅಪಘಾತ ತಡೆಯುವ ಕ್ರಮಗಳ ಕುರಿತು ಸುತ್ತೋಲೆ ಹೊರಡಿಸಿದ ರಾಜ್ಯ ಸರ್ಕಾರ