ಬೆಂಗಳೂರು : ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿ ಅವಧಿಗೂ ಮುನ್ನ ಗುರಿ ಮುಟ್ಟಲಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಹೇಳಿದ್ದಾರೆ. ವಿಕಾಸಸೌಧದಲ್ಲಿ ಸ್ಮಾರ್ಟ್ ಸಿಟಿ ಅಭಿವೃದ್ಧಿ ಕುರಿತಂತೆ ಚರ್ಚೆ ನಡೆಸಿ ಬಳಿಕ ಮಾತನಾಡಿದ ಅವರು, ಅಧಿಕಾರಿಗಳ ಜೊತೆ ಪರಿಶೀಲನಾ ಸಭೆ ನಡೆಸಿದ್ದೇನೆ.
ನಾವು 2,600 ಕೋಟಿ ರೂ. ಖರ್ಚು ಮಾಡಿದ್ದೇವೆ. ಕೇಂದ್ರದಿಂದ 3,500 ಕೋಟಿ ರೂ. ನೀಡಲಾಗಿದೆ. ಅದರಲ್ಲಿ 3,050 ಕೋಟಿ ರೂ. ಖರ್ಚಾಗಿದೆ. ಮಾರ್ಚ್ ಒಳಗೆ ಎಲ್ಲಾ ಕಾಮಗಾರಿ ಪೂರ್ಣವಾಗಬೇಕು. ಏಳು ಸ್ಮಾರ್ಟ್ ಸಿಟಿಗಳ ಕಾಮಗಾರಿ ನಡೆದಿದೆ. ಬೇರೆ ರಾಜ್ಯಗಳಿಗಿಂತ ನಮ್ಮಲ್ಲಿ ಗುಣಮಟ್ಟ ಹೆಚ್ಚಿದೆ ಎಂದರು.
ಕಾಮಗಾರಿ ನಡೆಯುತ್ತಿರುವ ಸಿಟಿಗೆ 10 ಬಾರಿ ಭೇಟಿ : ನಾನು ಒಂದೊಂದು ಕಾಮಗಾರಿ ನಡೆಯುತ್ತಿರುವ ಸಿಟಿಗೆ 10 ಬಾರಿ ಭೇಟಿ ಮಾಡಿದ್ದೇನೆ. ಎಲ್ಲಾ ಕಡೆಗಳಲ್ಲೂ ಕೆಲಸ ಉತ್ತಮವಾಗಿ ನಡೆದಿದೆ. ಅವಧಿಗೂ ಮುನ್ನವೇ ಟಾರ್ಗೆಟ್ ರೀಚ್ ಆಗ್ತೇವೆ. ಕೊಟ್ಟ ಅನುದಾನ ಸದ್ಭಳಕೆ ಮಾಡಿಕೊಳ್ತೇವೆ. ಬೆಂಗಳೂರಿನಲ್ಲಿ ಕಾಮಗಾರಿ ವಿಳಂಬವಾಗಿಲ್ಲ. ಕೋವಿಡ್‌ನಿಂದ ಕಾಮಗಾರಿ ಸ್ವಲ್ಪ ವಿಳಂಬವಾಗಿದೆ. ಈಗ ಕೆಲಸ ಜೋರಾಗಿಯೇ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಜಾಲಪ್ಪ ನಿಧನದ ಬೆನ್ನಲ್ಲೇ ಬೀದಿಗೆ ಬಂದ ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಅಧಿಕಾರ ಕಲಹ.. ಪೊಲೀಸರಿಂದ ಲಾಠಿ ಚಾರ್ಜ್
ರಾಜ್ಯಕ್ಕೆ ನಾಲ್ಕು ಹೆಚ್ಚುವರಿ ಸ್ಮಾರ್ಟ್ ಸಿಟಿ ಕೇಳಿದ್ದೇನೆ. ಬಳ್ಳಾರಿ, ಮೈಸೂರು, ವಿಜಯಪುರ, ಕಲಬುರಗಿಗೆ ಕೊಡುವಂತೆ ಕೇಳಲಾಗಿದೆ. ಇವು ನಾಲ್ಕು ಮಹಾನಗರಪಾಲಿಕೆಗಳಾಗಿವೆ. ಕೇಂದ್ರಕ್ಕೆ ಪತ್ರವನ್ನೂ ಬರೆದಿದ್ದೇನೆ. ಕೇಂದ್ರದಿಂದ ಒಪ್ಪಿಗೆ ಸಿಗಬೇಕಿದೆ ಎಂದರು. ಇದೇ ವೇಳೆ ಮಾತನಾಡಿದ ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, 2019ರ ಅತಿವೃಷ್ಠಿ, ಕೊರೊನಾದಿಂದ ಸ್ವಲ್ಪ ಕೆಲಸ ವಿಳಂಬವಾಗಿದೆ.
ರಸ್ತೆ ಕಾಮಗಾರಿಗಳು ನಿಧಾನವಾಗಿತ್ತು. ಆದರೆ, ಈಗ ಕಾಮಗಾರಿಗಳು ನಡೆಯುತ್ತಿವೆ. ಬೆಂಗಳೂರಿನಲ್ಲಿ ಗುತ್ತಿಗೆದಾರನನ್ನು ಬದಲಾಯಿಸಿದ್ದೇವೆ. ಕೆಲಸ ಮಾಡುವವರಿಗೆ ಅವಕಾಶ ಕೊಟ್ಟಿದ್ದೇವೆ. ಮಾರ್ಚ್ನೊಳಗೆ ಕಾಮಗಾರಿಗಳು ಮುಗಿಯುತ್ತವೆ ಎಂದರು.
ಸಂಪುಟ ವಿಸ್ತರಣೆ ಸಂಬಂಧ ಮಾತನಾಡಿದ ಸಚಿವರು, ಅದು ಸಿಎಂಗೆ ಬಿಟ್ಟ ಪರಮಾಧಿಕಾರ. ಅವರು ಯಾವ ನಿರ್ಧಾರ ಬೇಕಾದ್ರೂ ತೆಗೆದುಕೊಳ್ಳಬಹುದು. ನನ್ನನ್ನ ಕೈಬಿಟ್ರೂ ಪಕ್ಷದ ಕೆಲಸ ಮಾಡ್ತೇನೆ. ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡ್ತೇನೆ. ನಾವು ಬಿಜೆಪಿ ಅಡಿಯಲ್ಲೇ ಕೆಲಸ ಮಾಡ್ತಿದ್ದೇವೆ. ಮುಂದಿನ ಚುನಾವಣೆ ಪಕ್ಷದಲ್ಲೇ ಮಾಡ್ತೇನೆ. ನಗರಾಭಿವೃದ್ಧಿ ಇಲಾಖೆಯಲ್ಲಿ ಉತ್ತಮ ಕೆಲಸ ಮಾಡಿದ್ದೇನೆ ಎಂದರು.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ