ಬೆಂಗಳೂರು: ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸ್ಮಾರ್ಟ್ ಸಿಟಿ ಯೋಜನೆಯ ಪ್ರಗತಿ ಪರಿಶೀಲಿಸಿದ್ದು, ಯೋಜನೆಗಳ ಪ್ರಗತಿ ಕುರಿತು ಮಾಹಿತಿ ಪಡೆದರು.
ಸರ್ಕಾರದ ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್, ಯುಡಿಡಿ ಅಪರ ಮುಖ್ಯಕಾರ್ಯದರ್ಶಿ ಹಾಗೂ ನಮ್ಮ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಸಿಂಗ್, ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮಾ ಹಾಗೂ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಕಾಮಗಾರಿ ಸ್ಥಳದಲ್ಲಿ ರಸ್ತೆಯ ಮೇಲೆ ಮತ್ತು ಪಾದಚಾರಿ ಮಾರ್ಗದಲ್ಲಿ ಬಿದ್ದಿರುವ ಡೆಬ್ರಿಸ್ ಅನ್ನು ಸಂಪೂರ್ಣವಾಗಿ ತೆರವುಗೊಳಿಸಲು ಕೈಗೊಂಡ ಕ್ರಮದ ಬಗ್ಗೆ ಮಾತುಕತೆ ನಡೆಯಿತು.
ರಸ್ತೆ ಕಾಮಗಾರಿ ಜಾರಿಯಿರುವ ಭಾಗಗಳಲ್ಲಿ ಶೇಖರಣೆಗೊಂಡಿರುವ ನಿರ್ಮಾಣ ಸಾಮಗ್ರಿಗಳಲ್ಲಿ ತಕ್ಷಣಕ್ಕೆ ಅಗತ್ಯ ಇರುವುದನ್ನು ಮಾತ್ರ ರಸ್ತೆಯ ಪಕ್ಕದ ಸ್ಥಳ ಅಥವಾ ಪಾದಚಾರಿ ಮಾರ್ಗಗಳ ಮೇಲೆ ಓಡಾಟ ಮತ್ತು ವಾಹನ ಸಂಚಾರಕ್ಕೆ ಯಾವುದೇ ಅಡೆತಡೆಯಾಗದಂತೆ ಸಂಗ್ರಹಿಸಿಟ್ಟುಕೊಳ್ಳುವ ಕುರಿತು ಕೈಗೊಂಡಿರುವ ಕ್ರಮದ ಕುರಿತು ಅಧಿಕಾರಿಗಳು ಮಾಹಿತಿ ನೀಡಿದರು. ಕಾಮಗಾರಿ ನಡೆಯುತ್ತಿರುವ ಸ್ಥಳ ಮತ್ತು ರಸ್ತೆ ಅಗೆದಿರುವ ಭಾಗಗಳಲ್ಲಿ ಬ್ಯಾರಿಕೇಡಿಂಗ್ ಮಾಡಿರುವುದು, ಆರ್ಟೀರಿಯಲ್ ಮತ್ತು ಸಬ್ - ಆರ್ಟೀರಿಯಲ್ ರಸ್ತೆಗಳ ವಾರ್ಷಿಕ ನಿರ್ವಹಣೆ ಗುತ್ತಿಗೆಯನ್ನು ನೀಡಿದ್ದು, ರಸ್ತೆ ಬದಿಯ ಚರಂಡಿ, ಶೋಲ್ಡರ್ ಡ್ರೇನ್ಸ್ (Shoulder Drains) ಗಳಲ್ಲಿ ಮಣ್ಣು ಶೇಖರಣೆಯಾಗದಂತೆ ಕ್ರಮದ ಬಗ್ಗೆ ತಿಳಿಸಿದರು.
ತೆರೆದಿರುವ ಅಥವಾ ನೀರು ಸೋರಿಕೆಯಾಗುತ್ತಿರುವ ಮ್ಯಾನ್‌ಹೋಲ್/ಚರಂಡಿಗಳನ್ನು ಕೂಡಲೇ ದುರಸ್ಥಿಪಡಿಸಲು ಕ್ರಮ ಕೈಗೊಂಡಿರುವುದು ಮತ್ತು ವಾಹನ ಸಂಚಾರಕ್ಕೆ ಯಾವುದೇ ಅಡೆತಡೆ ಇಲ್ಲದಂತೆ ಕ್ರಮ ವಹಿಸುವುದಕ್ಕೆ ಕೈಗೊಂಡ ಕ್ರಮಗಳ ವಿವರವನ್ನು ಮುಖ್ಯಮಂತ್ರಿಗಳಿಗೆ ನೀಡಲಾಯಿತು.
ಒಟ್ಟು 930 ಕೋಟಿ ರೂ. ವೆಚ್ಚದಲ್ಲಿ 37 ಕಾಮಗಾರಿಗಳನ್ನು ಬೆಂಗಳೂರಿನಲ್ಲಿ ಕೈಗೆತ್ತಿಕೊಂಡಿದ್ದು, ಅದರಲ್ಲಿ 37 ರಸ್ತೆಗಳ ಅಭಿವೃದ್ಧಿ, ಕೋವಿಡ್ ಆಸ್ಪತ್ರೆಗಳಿಗೆ ನೆರವು, ಐಟಿ ಯೋಜನೆಗಳು, ಕಟ್ಟಡ ನಿರ್ಮಾಣ ಹಾಗೂ ಇತರ ಯೋಜನೆ ಸೇರಿದ್ದು ಈ ಎಲ್ಲ ಯೋಜನೆಗಳ ಪ್ರಗತಿ ಬಗ್ಗೆ ಮುಖ್ಯಮಂತ್ರಿಗಳು ಸುದೀರ್ಘವಾದ ಚರ್ಚೆ ನಡೆಸಿದರು. ಮೆಟ್ರೋ ಯೋಜನೆಗಳ ಬಗ್ಗೆಯೂ ಚರ್ಚೆ ನಡೆಸಲಾಯಿತು.
ಕಳೆದ ಸಭೆ ವೇಳೆ 4 ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ ಕಾಮಗಾರಿ ಪ್ರಗತಿಯಲ್ಲಿವೆ. 103 ಕೋಟಿ ರೂ. ಖರ್ಚು ಮಾಡಲಾಗಿತ್ತು ಎನ್ನುವ ಮಾಹಿತಿ ನೀಡಿದ್ದು, ಮೇ ಅಂತ್ಯಕ್ಕೆ ರಸ್ತೆ ಕಾಮಗಾರಿ ಮುಗಿಯಲಿದೆ ಎನ್ನುವ ಮಾಹಿತಿ ನೀಡಲಾಗಿತ್ತು.
ಆದರೆ ಇನ್ನು ಯಾಕೆ ಮುಗಿದಿಲ್ಲ ಎಂದು ಸಿಎಂ ಪ್ರಶ್ನಿಸಿದರು. ಕಾಲಮಿತಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಗಳನ್ನು ಮುಗಿಸಬೇಕು ಎಂದು ಅಧಿಕಾರಿಗಳಿಗೆ ಸಿಎಂ ಕಟ್ಟುನಿಟ್ಟಿನ ಸೂಚನೆ ನೀಡಿದರು.