ಬೆಂಗಳೂರು: ತುಮಕೂರಿನ ಸ್ಮಾರ್ಟ್‌ಸಿಟಿ ಯೋಜನೆಯಡಿ ಶ್ರೀ ಸಿದ್ದಿವಿನಾಯಕ ಮಾರುಕಟ್ಟೆ ಸ್ಥಳದಲ್ಲಿ ಮಲ್ಟಿ ಯುಟಿಲಿಟಿ ಮಾಲ್ ವಿಥ್ ಮಲ್ಟಿಲೆವೆಲ್ ಕಾರ್ ಪಾರ್ಕಿಂಗ್ ಯೋಜನೆಯನ್ನು ಪಿಪಿಪಿ ಮಾದರಿಯಲ್ಲಿ ವರ್ಷದೊಳಗೆ ನಿರ್ಮಿಸುವಂತೆ ಡಿಸಿಎಂ ಡಾ.ಜಿ.ಪರಮೇಶ್ವರ್ ಸೂಚಿಸಿದ್ದಾರೆ.
ವಿಧಾನಸೌಧ ಕಚೇರಿಯಲ್ಲಿ ಮಲ್ಟಿ ಯುಟಿಲಿಟಿ ಮಾಲ್ ನಿರ್ಮಾಣ ಸಂಬಂಧ ಗುರುವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಸೂಚಿಸಿದ್ದಾರೆ.
ಪ್ರಸ್ತುತವಾಗಿ ಎಪಿಎಂಸಿ ಉಸ್ತುವಾರಿಯಲ್ಲಿರುವ ಸಿದ್ದಿವಿನಾಯಕ ಮಾರುಕಟ್ಟೆ ತಕರಾರಿನಲ್ಲಿದೆ. ಅಗತ್ಯ ಬಿದ್ದರೆ ಸಚಿವ ಸಂಪುಟದ ಮುಂದಿಟ್ಟು ಸ್ಥಳವನ್ನು ವಶಕ್ಕೆ ಪಡೆದುಕೊಳ್ಳಲಾಗುವುದು ಎಂದು ಸಚಿವರು ಹೇಳಿದರು.
ಈ ಸ್ಥಳದಲ್ಲಿ ನಿರ್ಮಿಸಲಾಗುವ ಮಾಲ್ 3 ಅಂತಸ್ತಿನ ಕಟ್ಟಡವಾಗಿದ್ದು, ತಳಮಹಡಿಯಲ್ಲಿ 140 ಕಾರ್ ಪಾರ್ಕಿಂಗ್ಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು. ಇದೇ ವೇಳೆ, ತುಮಕೂರು ಸ್ಮಾರ್ಟ್‌ಸಿಟಿ ಅಡಿ ನಿರ್ಮಾಣವಾಗುತ್ತಿರುವ ಪ್ರಾಜೆಕ್ಟ್‌ಗಳು ಶೀಘ್ರವೇ ಪೂರ್ಣಗೊಳಿಸಿ ಎಂದು ಅಧಿಕಾರಿಗಳಿಗೆ ಡಿಸಿಎಂ ನಿರ್ದೇಶಿಸಿದರು.
2020ರ ಆಗಸ್ಟ್ 15ರೊಳಗಾಗಿ ಸ್ಮಾರ್ಟ್ ರಸ್ತೆಗಳು ಸಂಪೂರ್ಣವಾಗಿ ಸಿದ್ಧವಾಗಬೇಕು. ಸ್ಮಾರ್ಟ್ ಸಿಟಿ ಯೋಜನೆ ಘೋಷಣೆಯಾಗಿದ್ದರೂ ಯಾವ ಬದಲಾವಣೆಯೂ ಕಾಣುತ್ತಿಲ್ಲ. ಎಲ್ಲ ಯೋಜನೆಗಳು ಪೂರ್ಣಗೊಳಿಸಲು ಹೆಚ್ಚಿನ ಸಮಯ ತೆಗೆದುಕೊಳ್ಳಬೇಡಿ ಅಧಿಕಾರಿಗಳಿಗೆ ತಾಕೀತು ಮಾಡಿದರು.