ಬೆಂಗಳೂರು: ಕೇಂದ್ರದ ಮಾಜಿ ಸಚಿವ ಹಾಗೂ ಕರ್ನಾಟಕ ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಸಕ್ರಿಯ ರಾಜಕಾರಣಕ್ಕೆ ಗುಡ್ ಬೈ ಹೇಳಿದ್ದಾರೆ. 'ಸಕ್ರಿಯ ರಾಜಕಾರಣದಿಂದ ನಾನು ದೂರ ಸರಿಯುತ್ತಿದ್ದೇನೆ. ನಮ್ಮ ವಯಸ್ಸಿನ ಬಗ್ಗೆ ಅರಿವಿರಬೇಕು. 90 ರಲ್ಲಿ 50 ರ ತರಹ ನಟನೆ ಮಾಡಲು ಆಗಲ್ಲ. ಸಾರ್ವಜನಿಕ ಜೀವನದಿಂದ ದೂರ ಇರಬೇಕು ಅಂತ ತೀರ್ಮಾನ ಮಾಡಿದ್ದೇನೆ. ಹಾಗಾಗಿಯೇ ನಾನು ಎಲ್ಲೂ ಈಗ ಸಾರ್ವಜನಿಕ ವಾಗಿ ಕಾಣಿಸಿಕೊಳ್ಳುತ್ತಿಲ್ಲ' ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನ ಚಿತ್ರಕಲಾ ಪರಿಷತ್ತಿಗೆ ಭೇಟಿ ನೀಡಿದ ಸಂದರ್ಭ ಮಾಧ್ಯಮಗಳ ಜೊತೆ ಎಸ್ ಎಂ ಕೃಷ್ಣ ಮಾತನಾಡಿದ್ದಾರೆ. ಮಾಧ್ಯಮದವರು ಬಿಜೆಪಿ ಹಳೆ ಮೈಸೂರು ವಿಭಾಗದ ಕಡೆ ಪಕ್ಷ ಸಂಘಟನೆ ಮುಂದಾದಾಗ ನಿಮ್ಮನ್ನು ಕರೆದಿಲ್ಲ ಎಂಬ ಕಾರಣಕ್ಕೆ ನಿಮ್ಮನ್ನು ಕಡೆಗಣಿಸಲಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ ಎಂದಿದ್ದಕ್ಕೆ, ನಾನೇ ರಿಟೈರ್ ಆಗುವಾಗ ಭಾರತೀಯ ಜನತಾ ಪಕ್ಷ ನನ್ನನ್ನು ಕಡೆಗಣಿಸಿದೆ ಎಂಬ ಪ್ರಶ್ನೆ ಬರಲ್ಲ. ನಾನು ವಯಸ್ಸಿಗೆ ಗೌರವ ಕೊಟ್ಟು ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದೇನೆ. ನನಗಿಂತ ಅಲ್ಲಿ ಸಕ್ರಿಯವಾಗಿ ರಾಜಕೀಯ ಮಾಡುತ್ತಿರುವವರು ಮತ್ತು ಪಕ್ಷ ಸಂಘಟನೆ ಮಾಡುವವರ ಅಗತ್ಯ ಎಂದು ಹೇಳಿದ್ದಾರೆ.
ಸ್ವಯಂ ಪ್ರೇರಿತ ನಿವೃತ್ತಿ: ರಾಜಕೀಯವಾಗಿ ನಿವೃತ್ತಿ ಬಗ್ಗೆ ಹೈಕಮಾಂಡ್ ನಾಯಕರ ಗಮನಕ್ಕೆ ತಂದಿದ್ದೀರಾ ಎಂಬ ಪ್ರಶ್ನೆಗೆ, ಅವರು ನನಗೆ ಪೆನ್ಶನ್ ಕೊಡಲ್ಲ. ಹೀಗಾಗಿ ಅವರ ಗಮನಕ್ಕೆ ತಂದಿಲ್ಲ. ನಾನೇ ಸ್ವಯಂ ಪ್ರೇರಿತರಾಗಿ ರಿಟೈರ್ (ನಿವೃತ್ತಿ) ಆಗುತ್ತಿರುವಾಗ ಇದರ ಬಗ್ಗೆ ಹೇಳಲ್ಲ. ವಯಸ್ಸಿಗೆ ಬೆಲೆ ಕೊಟ್ಟು ಸಾರ್ವಜನಿಕ ಜೀವನದಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ಕೃಷ್ಣ ಸ್ಪಷ್ಟಪಡಿಸಿದ್ದಾರೆ.
ದಶಪಥ ಹೆದ್ದಾರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ಸೂಚನೆ: ಮೈಸೂರು ರಸ್ತೆಗೆ ಹೆಸರಿಡೋ ವಿಚಾರ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ, ನಾಲ್ವಡಿ ಕೃಷ್ಣರಾಜ ಒಡೆಯರ್ ದೇಶ ಕಂಡ ಮಹಾನ್ ವ್ಯಕ್ತಿ. ಅಭಿವೃದ್ಧಿ ವಿಚಾರವಾಗಿ ಅನೇಕ ಕೆಲಸ ಮಾಡಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರನ್ನು ದಶಪಥ ಹೆದ್ದಾರಿಗೆ ಇಡಲು ಕೆಂದ್ರ ಹೆದ್ದಾರಿ ಮತ್ತು ಜಲಸಾರಿಗೆ ಸಚಿವ ನಿತಿನ್ ಗಡ್ಕರಿ ಹಾಗೂ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದೇನೆ. ಅವರು ಏನು ಮಾಡ್ತಾರೆ ಎಂಬುದನ್ನು ನೋಡಬೇಕು ಎಂದು ಹೇಳಿದರು.
ಮೀಸಲಾತಿ ವಿಚಾರವಾಗಿ ನಿಮ್ಮ ಅಭಿಪ್ರಾಯ ಏನು ಎಂದು ಮಾಧ್ಯಮದವರು ಕೇಳಿದಾಗ, ನನ್ನಲ್ಲಿ ಇದುವರೆಗೂ ಯಾರು ಈ ಬಗ್ಗೆ ಕೇಳಿಲ್ಲ. ಕೇಳಿದಾಗ ಸೂಕ್ತ ಸಲಹೆ ನೀಡ ಬಯಸುತ್ತೇನೆ. ಸಲಹೆ ಎಲ್ಲಿ ನೀಡುವುದು ಸೂಕ್ತವೋ ಅಲ್ಲಿ ಕೊಡಲು ಬಯಸುತ್ತೇನೆ. ನಾನಾಗಿಯೇ ಮೇಲೆ ಬಿದ್ದು ಸಲಹೆಯನ್ನು ಯಾರಿಗೂ ನೀಡುವುದಿಲ್ಲ. ನನ್ನ ಅಭಿಪ್ರಾಯ ಕೇಳಿದಲ್ಲಿ ನೋಡೋಣ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದಲ್ಲಿ ಎಲ್ಲಾ ವಿಧದ ರಾಜಕೀಯ ಜೀವನವನ್ನು ಅನುಭವಿಸಿರುವ ಎಸ್ಎಂ ಕೃಷ್ಣ 2004 ರಿಂದ 2008ರ ಅವಧಿಗೆ ರಾಜ್ಯದ ಮುಖ್ಯಮಂತ್ರಿ ಆಗಿ ಕಾರ್ಯನಿರ್ವಹಿಸಿದ್ದರು. ಇದಾದ ಬಳಿಕ ರಾಜ್ಯಸಭೆಗೆ ಆಯ್ಕೆಯಾದ ಅವರು ಕೇಂದ್ರ ಸಚಿವರಾಗಿ ಹಾಗೂ ನಂತರ ರಾಜ್ಯಪಾಲರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕೆಲ ವರ್ಷಗಳ ಹಿಂದೆ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದ ಎಸ್ ಎಂ ಕೃಷ್ಣ ಇದೀಗ ಸಕ್ರಿಯ ರಾಜಕಾರಣದಿಂದ ದೂರ ಸರಿಯುವ ನಿರ್ಧಾರ ಪ್ರಕಟಿಸಿದ್ದಾರೆ.
ಇದನ್ನೂ ಓದಿ: ಎಸ್ ಎಂ ಕೃಷ್ಣ, ನಾರಾಯಣಮೂರ್ತಿ, ಪಡುಕೋಣೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿ: ಸಚಿವ ಅಶ್ವತ್ಥ ನಾರಾಯಣ್