ಬೆಂಗಳೂರು: ರಾಜ್ಯದಲ್ಲಿನ ಕಲ್ಲಿದ್ದಲು ಕೊರತೆ ಸ್ವಲ್ಪ ಮಟ್ಟಿಗೆ ಸುಧಾರಣೆ ಕಾಣುತ್ತಿದೆ. ರಾಜ್ಯಕ್ಕೆ ಕಲ್ಲಿದ್ದಲು ಪೂರೈಕೆ ಸುಧಾರಿಸುತ್ತಿದ್ದು, ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಲ್ಲಿನ ವಿದ್ಯುತ್ ಉತ್ಪಾದನೆಯೂ ನಿಧಾನವಾಗಿ ಚೇತರಿಕೆ ಕಾಣುತ್ತಿದೆ.
ಕಲ್ಲಿದ್ದಲು ಕೊರತೆ, ಸದ್ಯ ರಾಜ್ಯವನ್ನು ಕಾಡುತ್ತಿರುವ ಸಮಸ್ಯೆ. ಕಲ್ಲಿದ್ದಲು ಕೊರತೆಯಿಂದಾಗಿ ರಾಜ್ಯವನ್ನು ಕತ್ತಲ ಕೂಪಕ್ಕೆ ತಳ್ಳುವ ಭೀತಿ ಎದುರಾಗಿದೆ. ಕೇಂದ್ರ ಸರ್ಕಾರದ ಮಧ್ಯಪ್ರವೇಶ ಹಾಗೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಪರಿಣಮವಾಗಿ ಸ್ವಲ್ಪ ಮಟ್ಟಿಗೆ ಕಲ್ಲಿದ್ದಲ ಪೂರೈಕೆಯಲ್ಲಿ ಚೇತರಿಕೆ ಕಾಣುತ್ತಿದೆ. ಇದರಿಂದಾಗಿ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದನೆಯಲ್ಲೂ ಹೆಚ್ಚಳವಾಗಿದೆ.
ಸದ್ಯದ ಕಲ್ಲಿದ್ದಲು ಪೂರೈಕೆ ಸ್ಥಿತಿಗತಿ ಹೇಗಿದೆ?:
ಕಲ್ಲಿದ್ದಲು ಪೂರೈಕೆಯಲ್ಲಿ ಸುಧಾರಣೆ ಕಾಣುತ್ತಿದೆ. ಮಹಾರಾಷ್ಟ್ರ ಹಾಗೂ ಸಿಂಗರೇಣಿಯಿಂದ ರಾಜ್ಯಕ್ಕೆ ಇದೀಗ ಕಲ್ಲಿದ್ದಲು ಸರಬರಾಜು ಸ್ವಲ್ಪಮಟ್ಟಿಗೆ ಸುಧಾರಣೆ ಕಾಣುತ್ತಿದೆ. ಕಳೆದ ಹಲವು ತಿಂಗಳಿಂದ 7-8 ರೇಕ್ ಕಲ್ಲಿದ್ದಲು ಪೂರೈಕೆಯಾಗುತ್ತಿತ್ತು. ಇದೀಗ 10-12 ರೇಕ್ ಕಲ್ಲಿದ್ದಲು ಪೂರೈಕೆಯಾಗುತ್ತಿದೆ.
ಒಂದು ರೇಖ್ ಸುಮಾರು 4,000 ಟನ್ ಕಲ್ಲಿದ್ದಲು ಹೊಂದಿರುತ್ತದೆ. ಒಂದು ಸ್ಥಾವರಕ್ಕೆ ಸುಮಾರು 25,000 ಟನ್ ಕಲ್ಲಿದ್ದಲು ಬೇಕಾಗುತ್ತದೆ. ಆದರೆ ಕಳೆದ ಕೆಲ ದಿನಗಳಿಂದ ಸುಮಾರು 8,000 ಟನ್ ಅಷ್ಟೇ ಕಲ್ಲಿದ್ದಲು ಪೂರೈಕೆಯಾಗುತ್ತಿತ್ತು. ಇದರಿಂದ ತೀವ್ರ ಕಲ್ಲಿದ್ದಲ ಕೊರತೆ ಎದುರಾಗಿತ್ತು. ಕಲ್ಲಿದ್ದಲ ಕೊರತೆಯಿಂದ ಶಾಖೋತ್ಪಾದನೆ ವಿದ್ಯುತ್ ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದನೆ ಕುಂಠಿತವಾಗಿತ್ತು. ಮೂರೂ ಸ್ಥಾವರಗಳಲ್ಲಿ ಕೇವಲ ಶೇ 50ರಷ್ಟು ವಿದ್ಯುತ್ ಉತ್ಪಾದನೆ ಆಗುತ್ತಿತ್ತು.
ಇದೀಗ ಸುಮಾರು 11-12 ರೇಖ್ ಕಲ್ಲಿದ್ದಲು ಪೂರೈಕೆಯಾಗುತ್ತಿದೆ. ಇದರಿಂದ ಸ್ವಲ್ಪ ಮಟ್ಟಿಗೆ ಕಲ್ಲಿದ್ದಲ ಕೊರತೆಯಲ್ಲಿ ಸುಧಾರಣೆ ಕಾಣುತ್ತಿದೆ. ಆ ಮೂಲಕ ಸರ್ಕಾರ ನಿಟ್ಟುಸಿರು ಬಿಡುವಂತಾಗಿದೆ.
ಸ್ಥಾವರದಲ್ಲಿನ ವಿದ್ಯುತ್ ಉತ್ಪಾದನೆ ಹೇಗಿದೆ?:
ರಾಯಚೂರಿನ ಆರ್ ಟಿಪಿಎಸ್ ಸ್ಥಾವರದಲ್ಲಿನ 8 ಘಟಕಗಳಲ್ಲಿ ಐದು ಘಟಕಗಳು ಕಾರ್ಯಾಚರಿಸುತ್ತಿವೆ. ಇಲ್ಲಿಗೆ 4 ರೇಕ್ ಕಲ್ಲಿದ್ದಲು ಬಂದಿದೆ. ಇನ್ನು ಮೂರು ಘಟಕಗಳು ಸ್ಥಗಿತವಾಗಿವೆ. ಸದ್ಯ 1720 ಮೆಗಾವ್ಯಾಟ್ ಸಾಮರ್ಥ್ಯದ ಸ್ಥಾವರದಿಂದ ಸುಮಾರು 788 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಆಗುತ್ತಿದೆ.
ಇತ್ತ ಬಳ್ಳಾರಿಯ ಬಿಟಿಪಿಎಸ್ ಶಾಖೋತ್ಪನ್ನ ಸ್ಥಾವರದಿಂದ 799 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಆಗುತ್ತಿದೆ. ಮೂರು ಘಟಕಗಳನ್ನು ಹೊಂದಿರುವ ಈ ಸ್ಥಾವರ ಒಟ್ಟು 1720 ಮೆಗಾವ್ಯಾಟ್ ಉತ್ಪಾದನೆ ಸಾಮರ್ಥ್ಯ ಹೊಂದಿದೆ. ಈ ಸ್ಥಾವರದಲ್ಲಿ ಎರಡು ಘಟಕಗಳು ಕಾರ್ಯಾಚರಿಸುತ್ತಿವೆ. ಈ ಸ್ಥಾವರಕ್ಕೆ 4 ರೇಕ್ ಕಲ್ಲಿದ್ದಲು ಸರಬರಾಜು ಆಗಿದೆ.
ಇನ್ನು ಯರಮರಸ್ ಶಾಖೋತ್ಪನ್ನ ಸ್ಥಾವರಕ್ಕೂ ಇಂದು 3 ರ್ಯಾಕ್ ಕಲ್ಲಿದ್ದಲು ಪೂರೈಕೆಯಾಗಿದೆ. ಎರಡು ಘಟಕಗಳರುವ 1600 ಮೆಗಾವ್ಯಾಟ್ ಸಾಮರ್ಥ್ಯದ ಯರಮರಸ್ ಉಷ್ಣ ವಿದ್ಯುತ್ ಸ್ಥಾವರದಿಂದ 647 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಆಗುತ್ತಿದೆ. ಎರಡು ಘಟಕಗಳಲ್ಲಿ ಒಂದು ಘಟಕ ಕಾರ್ಯನಿರ್ವಹಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಪರಿಸ್ಥಿತಿ ಸಂಪೂರ್ಣ ಸಹಜಸ್ಥಿತಿಗೆ ಬರಲು ಇನ್ನೂ ಸುಮಾರು 10 ದಿನಗಳು ಬೇಕಾಗಬಹುದು ಎಂದು ಹೇಳಲಾಗಿದೆ. ನಿಧಾನವಾಗಿ ಕಲ್ಲಿದ್ದಲು ಸರಬರಾಜಿನಲ್ಲಿ ಚೇತರಿಕೆಯಾದ ಕಾರಣ ಸರ್ಕಾರ ಸ್ಬಲ್ಪ ನಿಟ್ಟುಸಿರು ಬಿಡುವಂತಾಗಿದೆ.