ಬೆಂಗಳೂರು: ಸೈಬರ್ ಕ್ರೈಂ ಪೊಲೀಸರು ಎಷ್ಟೇ ಅಲರ್ಟ್ ಆಗಿದ್ದರೂ ಕೂಡ ನಗರದಲ್ಲಿ ಹ್ಯಾಕರ್ಗಳ ಖತರ್ನಾಕ್ ಕೆಲಸವನ್ನು ಸಂಪೂರ್ಣವಾಗಿ ಮಟ್ಟ ಹಾಕಲು ಆಗುತ್ತಿಲ್ಲ. ನಗರದಲ್ಲಿ ಈಗ ಎಟಿಂಗಳಲ್ಲಿ ನೇರವಾಗಿಯೇ ಹಣ ದೋಚುವ ಯತ್ನಕ್ಕೆ ಖದೀಮರು ಕೈ ಹಾಕಿದ್ದಾರೆ.
ಎಂಇಎಸ್ ರಸ್ತೆ ಬದಿ ಇರುವ ಎಸ್ಬಿಐ ಎಟಿಎಂಗೆ ಥಾಮಸ್ ಎಂಬುವವರು ಎಟಿಎಂ ಪಾಸ್ವರ್ಡ್ ಪಿನ್ ಬದಲಾಯಿಸಲು ತೆರಳಿದ್ದಾರೆ. ಆ ವೇಳೆ ಎಟಿಎಂ ಕಾರ್ಡ್ ಸ್ವೈಪ್ ಮಾಡುವಾಗ ಕಾರ್ಡ್ ಸಿಲುಕಿಕೊಂಡಿದೆ. ಅನುಮಾನಗೊಂಡು ಸ್ವೈಪ್ ಮಾಡುವ ಗ್ರೀನ್ ಕ್ಯಾಪ್ ಹೊರ ತೆಗೆದಾಗ ಅದರ ಕೆಳಗೆ ಸ್ಕಿಮ್ಮರ್ ಡಿವೈಸ್ ಅಳವಡಿಕೆ ನೋಡಿ ಥಾಮಸ್ ಬೆಚ್ಚಿ ಬಿದಿದ್ದಾರೆ.
ಪಾಸ್ವರ್ಡ್ ಪಿನ್ ಎಂಟ್ರಿ ಮಾಡುವ ಜಾಗದ ಸೂಕ್ಷ್ಮ ರಂಧ್ರದಲ್ಲಿ ಕ್ಯಾಮೆರಾ ಅಳವಡಿಕೆ ಮಾಡಿದ್ದಾರೆ. ಇದನ್ನ ಪತ್ತೆಹಚ್ಚಿದ ಥಾಮಸ್, ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಹಾಗೂ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ಸೈಬರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬ್ಯಾಂಕ್ ಅಧಿಕಾರಿಗಳು ಎಟಿಎಂಗಳ ಬಳಿ ಸೆಕ್ಯೂರಿಟಿಗಳನ್ನ ನಿಯೋಜನೆ ಮಾಡಬೇಕು. ಆದರೆ, ಬಹಳಷ್ಟು ಕಡೆ ಸೆಕ್ಯೂರಿಟಿಗಳಿಲ್ಲದ ಕಾರಣ ಎಟಿಎಂ ಗಳನ್ನೇ ಟಾರ್ಗೆಟ್ ಮಾಡುತ್ತಿರುವ ಹ್ಯಾಕರ್ಸ್ ಗ್ರಾಹಕರ ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಿದ್ದಾರೆ.