ಬೆಂಗಳೂರು: ಸ್ಪರ್ಧಾತ್ಮಕ ಜಗತ್ತಿಗೆ ತಕ್ಕಂತೆ, ದೇಶದ ಯುವಜನರಲ್ಲಿ ಕೌಶಲ್ಯ ಅಭಿವೃದ್ಧಿ ಮಾಡುವ ಕೆಲಸ ಪ್ರತೀ ಉದ್ಯಮ, ಕೈಗಾರಿಕೆಯಲ್ಲೂ ನಡೆಯಬೇಕು. ಇದು ಕೇವಲ ಸರ್ಕಾರದ ಜವಾಬ್ದಾರಿ ಅಲ್ಲ, ಪ್ರತೀ ಉದ್ಯಮದ ಕೆಲಸ ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದರು.
ಜಿಕೆವಿಕೆ ಯೂನಿವರ್ಸಿಟಿ ಕ್ಯಾಂಪಸ್ ನಲ್ಲಿ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಪರ್ಸನಲ್ ಮ್ಯಾನೇಜ್ಮೆಂಟ್ (ಐಐಪಿಎಮ್) ಆಯೋಜಿಸಿದ್ದ ನ್ಯಾಟ್ಕಾನ್ 2019 ರ, 38 ನೇ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೌಶಲ್ಯ ಮತ್ತು ಉದ್ಯಮಶೀಲತೆ ವೃದ್ಧಿ ಕುರಿತ ಸಂವಾದದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಶೇಕಡಾ 65 ರಷ್ಟು ಯುವಜನರಿದ್ದಾರೆ. ಬಹಳಷ್ಟು ಜನರು ಉದ್ಯೋಗ ವಲಯಕ್ಕೆ ಬರಲಿದ್ದಾರೆ. ಎಲ್ಲ ಯುವಜನರಲ್ಲಿ ಕೌಶಲ್ಯ ತುಂಬಿ, ಪ್ರತಿಭಾನ್ವಿತರನ್ನಾಗಿ ಮಾಡುವ ಬಹುದೊಡ್ಡ ಜವಾಬ್ದಾರಿ ಇದ್ದು, ಇದು ಕೇವಲ ಸರ್ಕಾರದ ಜವಾಬ್ದಾರಿ ಅಲ್ಲ, ಪ್ರತೀ ಬಂಡವಾಳಗಾರರ, ಉದ್ಯಮಗಳ ಜವಾಬ್ದಾರಿ ಎಂದರು.
ಎಲ್ ಪಿಜಿ ಯುಗದಲ್ಲಿ ನಾವುಗಳಿದ್ದು, ತುಂಬಾ ತ್ವರಿತವಾಗಿ ಯುವಜನರನ್ನು ಕೌಶಲ್ಯಭರಿತರನ್ನಾಗಿ ಮಾಡಬೇಕಿದೆ. ಇಡೀ ವಿಶ್ವದಲ್ಲಿ ದೇಶದ ಜನರ ಕೌಶಲ್ಯ ಹೆಸರು ಪಡೆಯಬೇಕು. ದೇಶದ ಎಲ್ಲಾ ಭಾಗಕ್ಕೂ ಅಭಿವೃದ್ಧಿ ತಲುಪಬೇಕು. ಪ್ರಧಾನಿಗಳ ಮಾತು ನೆನಪಿಸಿಕೊಂಡ ಅವರು, ದೇಶದಲ್ಲಿ ರಿಫಾರ್ಮ್ , ಪರ್ಫಾರ್ಮ್ ,ಟ್ರಾನ್ಸ್ ಫಾರ್ಮ್ ಆಗಬೇಕು ಎಂದರು. ಅಲ್ಲದೇ ಮೇಲು-ಕೀಳು ಜಾತಿಯಲ್ಲಿ ವಿಂಗಡಿಸುವುದಲ್ಲ, ಪ್ರತಿಭೆ ಕೌಶಲ್ಯವಿರುವ ಎಲ್ಲಾ ಕೆಲಸಗಾರರನ್ನು ಗೌರವಿಸಬೇಕು ಎಂದರು.
ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿ, ಯುವ ಸಮೂಹದಲ್ಲಿ ಕೌಶಲ್ಯ ಮತ್ತು ಉದ್ಯಮಶೀಲತೆ ವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಸ್ಕೀಮ್ ಗಳನ್ನು ಜಾರಿ ಮಾಡಿವೆ. ಕೌಶಲ್ಯ ಮತ್ತು ಜ್ಞಾನ ಎರಡೂ ಆರ್ಥಿಕತೆಗೆ ಮತ್ತು ಸಾಮಾಜಿಕ ಅಭಿವೃದ್ಧಿಗೆ ಸಹಕಾರಿ. ಪದವೀಧರರಿಗೆ ಉದ್ಯಮಶೀಲತೆ ಕೌಶಲ್ಯ ನೀಡಲು ಸರ್ಕಾರ ಬದ್ಧ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ, ಕೇಂದ್ರ ಸಚಿವ ಡಿವಿ ಸದಾನಂದಗೌಡ, ಎನ್ ಐಪಿಎಂ ಅಧ್ಯಕ್ಷರಾದ ವಿಶ್ವೇಷ್ ಕುಲಕರ್ಣಿ ಭಾಗಿಯಾಗಿದ್ದರು.