ಬೆಂಗಳೂರು: ರಾಜ್ಯ ಕೃಷಿ ಮಾರಾಟ ಮಂಡಳಿಯಲ್ಲಿ ಇಟ್ಟಿದ್ದ ಹಣದಲ್ಲಿ 48 ಕೋಟಿ ರೂ. ಠೇವಣಿಯನ್ನು ಗುಳುಂ ಮಾಡಿರುವ ಘಟನೆ ಆರೋಪ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಬ್ಯಾಂಕ್ ಮ್ಯಾನೇಜರ್ ಸೇರಿ ಕೋಟಿ ಕೋಟಿ ಹಣ ಗುಳುಂ ಮಾಡಿರುವ ಆರೋಪದ ಮೇಲೆ ಕೆಲವರನ್ನು ಬಂಧಿಸಲಾಗಿದೆ.
ಬ್ಯಾಂಕ್ ಮ್ಯಾನೇಜರ್ ಜಯರಾಮ್, ಮಹಮದ್ ಅಸ್ಲಾಂ, ಮುಸ್ತಾಫಾ, ಭರತ್, ಬಂಧಿತ ಆರೋಪಿಗಳು. ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ಉತ್ತರಹಳ್ಳಿ ಬ್ರಾಂಚ್ನ ಖಾಸಗಿ ಬ್ಯಾಂಕ್ ವೊಂದರಲ್ಲಿ 100 ಕೋಟಿ ಹಣವನ್ನ 50 ಕೋಟಿ ಹಣದಂತೆ ಎರಡು ಠೇವಣಿ ಇಟ್ಟಿದ್ದರು. ಆದರೆ, ಬ್ಯಾಂಕಿನ ಸಿಬ್ಬಂದಿ ನಕಲಿ ಬಾಂಡ್ ಸೃಷ್ಟಿಸಿ 48 ಕೋಟಿ ರೂಪಾಯಿ ಹಣವನ್ನ ಹಲವು ಅಕೌಂಟ್ಗಳಿಗೆ ವರ್ಗಾವಣೆ ಮಾಡಿದ್ದಾರೆ ಎನ್ನಲಾಗ್ತಿದೆ. ಈ ವಿಚಾರ ತಿಳಿದ ರಾಜ್ಯ ಕೃಷಿ ಮಾರಾಟ ಮಂಡಳಿಯ ಐಎಎಸ್ ಅಧಿಕಾರಿ ಕರಿಗೌಡ ಅವರು ಕಮರ್ಷಿಯಲ್ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ಗಂಭೀರತೆ ಅರಿತು ನಗರ ಪೊಲೀಸ್ ಆಯುಕ್ತರು ಈ ಪ್ರಕರಣವನ್ನ ಸಿಸಿಬಿಗೆ ವರ್ಗಾವಣೆ ಮಾಡಿದ್ದರು. ಸದ್ಯ ವಂಚನೆ ಸಂಬಂಧ ಕೆಲವರನ್ನ ಬಂಧಿಸಿದ ಸಿಸಿಬಿ, ತಲೆಮರೆಸಿಕೊಂಡಿರುವ ಇನ್ನುಳಿದ ಆರೋಪಿಗಳ ಪತ್ತೆಗೆ ಚೆನ್ನೈನಲ್ಲಿ ತನಿಖೆ ಮುಂದುವರೆಸಿದ್ದಾರೆ.
ಈ ಕುರಿತು ಮಾತನಾಡಿರುವ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಗೆ ಮಹಾ ಮೋಸವಾಗಿದೆ. ಕೃಷಿ ಮಾರಾಟ ಮಂಡಳಿ ಎಂಡಿ ಹಾಗೂ ಐಎಎಸ್ ಅಧಿಕಾರಿ ಕರಿಗೌಡರು ನೀಡಿದ್ದ ದೂರು ಆಧರಿಸಿ 6 ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.