ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡವು (ಎಸ್ಐಟಿ) ಸದ್ಯದಲ್ಲೇ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಲಿದೆ. ಜಾರಕಿಹೊಳಿಗೆ ಬ್ಲಾಕ್ ಮೇಲ್ ಮಾಡಿದ ಆರೋಪಿಗಳಾದ ಮಾಜಿ ಪತ್ರಕರ್ತ ನರೇಶ್ ಗೌಡ ಹಾಗೂ ಶ್ರವಣ್ ಸೇರಿ ಇನ್ನಿತರರನ್ನು ಆರೋಪಿಗಳನ್ನಾಗಿ ಮಾಡಲಾಗುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಸದ್ಯ ಪ್ರಕರಣ ಸಂಬಂಧ ನರೇಶ್ ಗೌಡ ಹಾಗೂ ಶ್ರವಣ್ಗೆ ಇತ್ತೀಚೆಗೆ ಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಇನ್ನೊಂದೆಡೆ ಸಮ್ಮತಿ ಮೇರೆಗೆ ಲೈಂಗಿಕ ಕ್ರಿಯೆ ನಡೆದಿದೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದರು. ಸಂತ್ರಸ್ತೆಯೊಂದಿಗೆ ಬಲವಂತವಾಗಿ ಸೆಕ್ಸ್ ಮಾಡಿಲ್ಲ ಎಂದು ಎಸ್ಐಟಿ ಮುಂದೆ ಹೇಳಿಕೆ ನೀಡಿದ್ದಾರೆ. ಅಲ್ಲದೆ ವೈರಲ್ ಆಗಿದ್ದ ವಿಡಿಯೊ ಇಟ್ಟುಕೊಂಡು ಹಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡಿದ್ದರು ಎಂದು ಜಾರಕಿಹೊಳಿ ಆರೋಪಿಸಿದ್ದರು. ಸಂತ್ರಸ್ತ ಯುವತಿ ಸೇರಿದಂತೆ ಇನ್ನಿತರರ ವಿರುದ್ಧ ಎಸ್ಐಟಿ ಆರೋಪ ಪಟ್ಟಿ ಸಲ್ಲಿಸುವ ಸಾಧ್ಯತೆಗಳಿವೆ.
ಮತ್ತೊಂದೆಡೆ ಎಸ್ಐಟಿ ಮುಖ್ಯಸ್ಥರಾಗಿರುವ ಸೌಮೆಂದು ಮುಖರ್ಜಿ ಗೈರಿನ ಬಗ್ಗೆ ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಎಸ್ಐಟಿ ಮುಖ್ಯಸ್ಥ ಸೌಮೆಂದು ಮುಖರ್ಜಿ ಅವರು ಈ ಹಿಂದೆಯೂ ರಜೆ ಮೇಳೆ ತೆರಳಿದ್ದರು. ಈಗಲೂ ರಜೆ ಪಡೆದುಕೊಂಡು ಹೋಗಿದ್ದಾರೆ. ಇದರಲ್ಲಿ ಯಾವುದೇ ಗೊಂದಲವಿಲ್ಲ, ಎಸ್ಐಟಿ ನಿಷ್ಪಕ್ಷಪಾತವಾಗಿ ತನಿಖೆ ಕಾರ್ಯ ಮುಂದುವರೆಸಿದೆ ಎಂದು ಸ್ಪಷ್ಟಪಡಿಸಿದ್ದಾರೆ.