ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತರು, ದೂರುದಾರರು ಪ್ರತ್ಯೇಕವಾಗಿ ದಾಖಲಿಸಿರುವ ಎಲ್ಲಾ ಎಫ್ಐಆರ್ಗಳಿಗೆ ಸಂಬಂಧಿಸಿದಂತೆ ನಡೆಸಿರುವ ತನಿಖಾ ವರದಿಯನ್ನು ಇಂದು ಎಸ್ಐಟಿ ಹೈಕೋರ್ಟ್ಗೆ ಸಲ್ಲಿಸಿದೆ.
ಸಿಡಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ವಕೀಲ ಉಮಾಪತಿ ಸಲ್ಲಿಸಿರುವ ಪಿಐಎಲ್, ಆರೋಪಿ ಸಚಿವರ ಕೋರಿಕೆ ಮೇರೆಗೆ ಎಸ್‌ಐಟಿ ರಚನೆ ಮಾಡಿ ನಗರ ಪೊಲೀಸ್ ಆಯುಕ್ತರು ಹೊರಡಿಸಿರುವ ಆದೇಶ ರದ್ದು ಕೋರಿ ವಕೀಲೆ ಗೀತಾ ಮಿಶ್ರಾ ಸಲ್ಲಿಸಿರುವ ಪಿಐಎಲ್ ಹಾಗೂ ಸಿಬಿಐ ತನಿಖೆ ಕೋರಿರುವ ಅರ್ಜಿಯಲ್ಲಿ, ತನ್ನ ವಾದವನ್ನೂ ಆಲಿಸುವಂತೆ ಸಿಡಿ ಪ್ರಕರಣದ ಯುವತಿ ಮಧ್ಯಂತರ ಅರ್ಜಿಗಳನ್ನು ಸಲ್ಲಿಸಿದ್ದಾರೆ.
ಈ ಅರ್ಜಿಗೆ ಸಂಬಂಧಿಸಿದಂತೆ ಎಸ್‌ಐಟಿ ಪರ ವಿಶೇಷ ಅಭಿಯೋಜಕ ಪಿ. ಪ್ರಸನ್ನಕುಮಾರ್ ಅವರು ಸಿಡಿ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಎಫ್ಐಆರ್ಗಳ ಕುರಿತು ಎಸ್‌ಐಟಿ ನಡೆಸಿರುವ ತನಿಖಾ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ರಿಜಿಸ್ಟ್ರಾರ್ ಜನರಲ್ ಅವರಿಗೆ ಸಲ್ಲಿಸಿದರು. ಈ ವರದಿಯನ್ನು ಮಂಗಳವಾರ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ಪೀಠ ಪರಿಶೀಲಿಸಲಿದ್ದು, ಇದೇ ವೇಳೆ ಅರ್ಜಿಗಳ ಕುರಿತು ವಿಚಾರಣೆ ನಡೆಸಲಿದೆ.
ಓದಿ: ನ್ಯಾಯಾಲಯದ ಆದೇಶ ಪಾಲಿಸದ ಬಿಡಿಎ ವಿರುದ್ಧ ನ್ಯಾಯಾಂಗ ನಿಂದನೆ : ಹೈಕೋರ್ಟ್ ತರಾಟೆ
ಜುಲೈ 16ರಂದು ಅರ್ಜಿಗಳ ವಿಚಾರಣೆ ನಡೆಸಿದ್ದ ಮುಖ್ಯನ್ಯಾಯಮೂರ್ತಿ ಎ ಎಸ್ ಓಕ ನೇತೃತ್ವದ ವಿಭಾಗೀಯ ಪೀಠ, ಪ್ರಕರಣದ ತನಿಖೆಗಾಗಿ ರಚಿಸಿರುವ ಎಸ್‌ಐಟಿ ಸಿಂಧುತ್ವದ ಬಗ್ಗೆ ವಿಚಾರಣೆ ನಡೆಸುವ ಮುನ್ನ ಎಸ್‌ಐಟಿ ತನಿಖೆಯನ್ನು ಯಾವ ರೀತಿ ನಡೆಸಿದೆ ಎಂಬುದನ್ನು ಪರಿಶೀಲಿಸಬೇಕಿದೆ.
ಆದ್ದರಿಂದ ಸಂಪೂರ್ಣ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಎಂದು ಸರ್ಕಾರಕ್ಕೆ ಸೂಚಿಸಿತ್ತು. ಇದಕ್ಕೆ ಸಮ್ಮತಿಸಿದ್ದ ಎಜಿ ಪ್ರಭುಲಿಂಗ ನಾವದಗಿ, ಸಂಪೂರ್ಣ ತನಿಖಾ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಜುಲೈ 19ರಂದು ಸಲ್ಲಿಸುತ್ತೇವೆಂದು ಪೀಠಕ್ಕೆ ತಿಳಿಸಿದ್ದರು. ಅದರಂತೆ ಇಂದು ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.