ಬೆಂಗಳೂರು/ಮೈಸೂರು: ಮೈಸೂರಿನಲ್ಲಿ ಬಹಿರಂಗವಾಗಿ ಪರಸ್ಪರ ಜಟಾಪಟಿಗೆ ಇಳಿದಿದ್ದ ಇಬ್ಬರು ಮಹಿಳಾ ಐಎಎಸ್ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಇಬ್ಬರು ಐಎಎಸ್ ಅಧಿಕಾರಿಗಳಾದ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಮೈಸೂರು ನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ನಡುವಿನ ಕಿತ್ತಾಟ ಭಾರೀ ಸುದ್ದಿಗೆ ಗ್ರಾಸವಾಗಿತ್ತು. ಇಬ್ಬರು ಅಧಿಕಾರಿಗಳು ಮಾಧ್ಯಮಗಳ ಮೂಲಕ ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ತೊಡಗುವ ಮೂಲಕ ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಇದೀಗ ಸರ್ಕಾರ ಮಧ್ಯ ಪ್ರವೇಶಿಸಿದ್ದು, ಇಬ್ಬರು ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.
ಧಾರ್ಮಿಕ ಹಾಗೂ ದತ್ತಿ ಇಲಾಖೆ ಸಿಂಧೂರಿ ವರ್ಗಾವಣೆ:
ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರನ್ನು ಬೆಂಗಳೂರಿನ ಹಿಂದು ಧಾರ್ಮಿಕ ಹಾಗೂ ದತ್ತಿ ಇಲಾಖೆ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದೆ.
ನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಅವರನ್ನು ಆರ್ಡಿಪಿಆರ್ ಇ-ಆಡಳಿತದ ನಿರ್ದೇಶಕರ ಹುದ್ದೆಗೆ ವರ್ಗಾಯಿಸಲಾಗಿದೆ. ಆ ಮೂಲಕ ಇಬ್ಬರ ನಡುವೆ ಏರ್ಪಟ್ಟಿದ್ದ ಬೀದಿ ಜಗಳಕ್ಕೆ ರಾಜ್ಯ ಸರ್ಕಾರ ಇತಿಶ್ರೀ ಹಾಡಿದೆ.
ಜಿಲ್ಲಾಧಿಕಾರಿಯಾಗಿ ಬಗಡಿ ಗೌತಮ್ ನೇಮಕ
ಮೈಸೂರು ಜಿಲ್ಲಾಧಿಕಾರಿಯನ್ನಾಗಿ ವಾಣಿಜ್ಯ ತೆರಿಗೆ (ಜಾರಿ) ಹೆಚ್ಚುವರಿ ಆಯುಕ್ತರಾಗಿದ್ದ ಡಾ. ಬಗಡಿ ಗೌತಮ್ರನ್ನು ವರ್ಗಾವಣೆ ಮಾಡಲಾಗಿದೆ. ಇತ್ತ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮದ ಎಂ.ಡಿ. ಆಗಿದ್ದ ಲಕ್ಷ್ಮೀಕಾಂತ್ ರೆಡ್ಡಿರನ್ನು ಮೈಸೂರು ನಗರ ಪಾಲಿಕೆ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದೆ.