ಬೆಂಗಳೂರು: ಗ್ರಾಮವಾಸ್ತವ್ಯದ ಸಂದರ್ಭದಲ್ಲಿ ನನ್ನ ವಾಸ್ತವ್ಯಕ್ಕೆ ಪ್ರಾಮುಖ್ಯತೆ ನೀಡಬೇಕಿಲ್ಲ. ಸರಳ ಸಿದ್ಧತೆಗಳಾದರೆ ಸಾಕು. ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದು ನನ್ನ ಮೊದಲ ಗುರಿ ಎಂದು ಸಿಎಂ ಕುಮಾರಸ್ವಾಮಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಗ್ರಾಮವಾಸ್ತವ್ಯದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮ ವಾಸ್ತವ್ಯದ ವೇಳೆ ರಸ್ತೆ, ಕುಡಿಯುವ ನೀರು, ಶಾಲಾ ಕಾಲೇಜುಗಳ ಸುಧಾರಣೆಯ ಬಗ್ಗೆ ನನ್ನ ಆದ್ಯತೆ ಇರುತ್ತದೆ. ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಿಕೊಡುವುದು ತಮ್ಮ ಧ್ಯೇಯವೆಂದು ಸಿಎಂ ಅಧಿಕಾರಿಗಳಿಗೆ ಸ್ಪಷ್ಟಪಡಿಸಿದ್ದಾರೆ.
ಗ್ರಾಮ ವಾಸ್ತವ್ಯ ಸಾಂಕೇತಿಕ. ಅದು ಜನಪ್ರಿಯತೆಗಾಗಿ ಮಾಡಿದ ಕಾರ್ಯಕ್ರಮವಲ್ಲ. ಗ್ರಾಮವಾಸ್ತವ್ಯದ ನೈಜ ಉದ್ದೇಶ ಸರ್ಕಾರ ಮತ್ತು ಜನರ ನಡುವೆ ನಿಕಟ ಸಂಪರ್ಕ ಸಾಧಿಸುವುದು. ಸ್ಥಳೀಯ ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಿಕೊಡುವುದು ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ. ಜೂನ್ 21 ರಂದು ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಚಂದರಕಿ ಗ್ರಾಮ, ಜೂನ್ 22 ರಂದು ಅಫ್ಜಲ್‍ಪುರ ತಾಲೂಕಿನ ಹೆರೂರು-ಬಿ ಗ್ರಾಮಗಳಲ್ಲಿ ಮತ್ತು ಜೂನ್ 26ರಂದು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕರಿಗುಡ್ಡ ಗ್ರಾಮ, ಜೂನ್ 27ರಂದು ಬೀದರ್ ಜಿಲ್ಲೆಯ ಉಜಳಂಬ ಗ್ರಾಮದಲ್ಲಿ ಆಯೋಜಿಸಿರುವ ಗ್ರಾಮ ವಾಸ್ತವ್ಯ ಕಾರ್ಯಕ್ರಮಗಳ ಬಗ್ಗೆ ಪೂರ್ವಭಾವಿ ತಯಾರಿ ಬಗ್ಗೆ ಚರ್ಚೆ ನಡೆಸಲಾಯಿತು.
ಕಲಬುರಗಿ, ಬೀದರ್ ಮತ್ತು ಯಾದಗಿರಿ ಜಿಲ್ಲೆಗಳ ಉಸ್ತುವಾರಿ ಸಚಿವರುಗಳಾದ ಪ್ರಿಯಾಂಕ್ ಖರ್ಗೆ, ಬಂಡೆಪ್ಪ ಕಾಶೆಂಪೂರ, ರಾಜಶೇಖರ್ ಪಾಟೀಲ್, ಹೆಚ್.ಡಿ. ರೇವಣ್ಣ, ಸಾ.ರಾ ಮಹೇಶ್ ಸಭೆಯಲ್ಲಿ ಭಾಗವಹಿಸಿದ್ದರು. ಸಂಬಂಧಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಪ್ರಮುಖ ಇಲಾಖೆಗಳ ಕಾರ್ಯದರ್ಶಿಗಳು ಹಾಗೂ ಮುಖ್ಯಮಂತ್ರಿಯವರ ಅಪರ ಮುಖ್ಯಕಾರ್ಯದರ್ಶಿ ರಮಣರೆಡ್ಡಿ ಸಭೆಯಲ್ಲಿ ಉಪಸ್ಥಿತರಿದ್ದರು.