ಬೆಂಗಳೂರು: ಮಾದಕ ವಸ್ತು ಸೇವನೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ನಟ ಸಿದ್ದಾಂತ್ ಕಪೂರ್ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದ್ದು, ಇಂದು ಸಂಜೆಯೊಳಗೆ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಯಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಡ್ರಗ್ಸ್ ಸೇವನೆ ಸಾಬೀತಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಹಲಸೂರು ಪೊಲೀಸರು ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ.
ಹಳೆ ಮದ್ರಾಸ್ ರಸ್ತೆಯಲ್ಲಿರುವ ದಿ ಪಾರ್ಕ್‌ನ ಐ ಬಾರ್‌ನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಬಾರ್‌ನಲ್ಲಿ 14 ಜನ ಯುವತಿಯರು ಹಾಗೂ 21 ಜನ ಯುವಕರು ಭಾಗಿಯಾಗಿದ್ದರು. ಬಾರ್ ಮೂಲೆಮೂಲೆಯಲ್ಲಿ ಜಾಲಾಡಿದಾಗ 7 ಕಸದ ಡಬ್ಬಿಯಲ್ಲಿ ಎಂಡಿಎಂಎ ಟ್ಯಾನಲೇಟ್ಗಳು ಪತ್ತೆಯಾಗಿವೆ. 5 ಗ್ರಾಂ ತೂಕದ ಗಾಂಜಾ ಕೂಡ ಡಸ್ಟ್ ಬಿನ್ನಲ್ಲಿ ದೊರೆತಿದೆ.
ಈ ಬಗ್ಗೆ ಪ್ರಶ್ನಿಸಿದ ಪೊಲೀಸರಿಗೆ ಡ್ರಗ್ಸ್ ತಮ್ಮದಲ್ಲ ಎಂದು ಪಾರ್ಟಿಯಲ್ಲಿದ್ದವರು ವಾದಿಸಿದ್ದರು. ಖಚಿತಪಡಿಸಿಕೊಳ್ಳಲು ಸಂತೋಷ್ ಆಸ್ಪತ್ರೆಯಲ್ಲಿ ಎಲ್ಲರನ್ನೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಅದರಲ್ಲಿ ಐವರಿಗೆ ಪಾಸಿಟಿವ್ ರಿಪೋರ್ಟ್ ಬಂದಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಂಧಿತರ ಪೈಕಿ ಸಿದ್ದಾಂತ್ ಕಪೂರ್ ನಟನಾದರೆ ಅಕಿಲ್ ಸೋನಿ ಇಂದಿರಾನಗರದಲ್ಲಿ ವಾಸವಾಗಿದ್ದು, ಕಂಪನಿಯೊಂದರಲ್ಲಿ ಬಿಸಿನೆಸ್ ಮ್ಯಾನೇಜರ್ ಆಗಿದ್ದಾನೆ. ಪಂಜಾಬ್ ಮೂಲದ ಹರ್ಜೋತ್ ಸಿಂಗ್ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದಾನೆ. ಹನಿ ಬಿಟಿಎಂ ಲೇಔಟ್ ಹಾಗೂ ಅಕಿಲ್ ಎಂಬಾತ ಮಾಗಡಿ ರೋಡ್ ನಿವಾಸಿ.
ಪಬ್ ಮಾಲೀಕನಿಗೆ ನೊಟೀಸ್: ಘಟನೆ ಸಂಬಂಧ ನಗರ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸುಬ್ರಮಣ್ಯೇಶ್ವರ ರಾವ್ ಪ್ರತಿಕ್ರಿಯಿಸಿ, "ಡ್ರಗ್ಸ್ ಪಾರ್ಟಿ ಸಂಬಂಧ ನಮ್ಮ ಅಧಿಕಾರಿಗಳು ನಿನ್ನೆ ದಾಳಿ ನಡೆಸಿದ್ದಾರೆ. ಅದರಲ್ಲಿ ಈಗಾಗಲೆೇ 30 ಜನರನ್ನು ವಶಕ್ಕೆ ಪಡೆಯಲಾಗಿತ್ತು. ಈ ಪೈಕಿ ಐದು ಜನರನ್ನು ಬಂಧಿಸಲಾಗಿದೆ. ಬಂಧಿತರ ಪೈಕಿ ಬಾಲಿವುಡ್‌ನ ಖ್ಯಾತ ನಟ ಕೂಡ ಇದ್ದಾನೆ. ಮುಖ್ಯವಾಗಿ ಪಾರ್ಟಿಯನ್ನು ಆಯೋಜನೆ ಯಾರು ಮಾಡಿದ್ದು ಎಂದು ತಿಳಿಯಬೇಕಿದೆ. ಡ್ರಗ್ ಸೇವನೆ ಮಾಡಿರೋದು ಬ್ಲಡ್ ಸ್ಯಾಂಪಲ್‌ನಲ್ಲಿ ಗೊತ್ತಾಗಿದೆ. ಸಂಬಂಧಪಟ್ಟವರಿಗೆ ನೊಟೀಸ್ ನೀಡಲಾಗುತ್ತಿದೆ" ಎಂದರು.
ಇದನ್ನೂ ಓದಿ: ಚಾಮರಾಜನಗರದ ಎಲ್ಲ ಶಾಸಕರಿಂದ ಮತದಾನ: ಪೆನ್ ಸರಿಯಿಲ್ಲ ಎಂದು ಹರಿಹಾಯ್ದ ಪುಟ್ಟರಂಗಶೆಟ್ಟಿ