ಬೆಂಗಳೂರು: ವಿಶ್ವವನ್ನೇ ನಡುಗಿಸಿರುವ ಕೊರೋನಾ ಭೀತಿ ರಾಜ್ಯದಲ್ಲಿ ವ್ಯಾಪಿಸದಂತೆ ತಡೆಗಟ್ಟಲು ಸರ್ಕಾರ ಕೈಗೊಂಡಿರುವ ಕ್ರಮಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಹಕಾರ ನೀಡಿದ್ದಾರೆ.
ವಿಧಾನಸಭೆ ಅಧಿವೇಶನ ನಡೆಯುತ್ತಿರುವ ವಿಧಾನಸೌಧ ಆವರಣದಲ್ಲಿ ಪ್ರತಿಯೊಬ್ಬರಿಗೂ ಪ್ರವೇಶದ್ವಾರದಲ್ಲಿ ಕೈ ಸ್ವಚ್ಛಗೊಳಿಸಿಕೊಳ್ಳಲು ಸ್ಯಾನಿಟೈಸರ್ ನೀಡಿ, ಥರ್ಮಲ್ ಸ್ಕ್ರೀನಿಂಗ್ ಯಂತ್ರದಿಂದ ಸ್ಕಾನ್ ಮಾಡಲಾಗುತ್ತಿದೆ. ಇಂದು ವಿಧಾನಸಭೆ ಆವರಣ ಪ್ರವೇಶಿಸುತ್ತಿದ್ದಂತೆ ಸಿದ್ದರಾಮಯ್ಯನವರು ತಮ್ಮ ಕೈಗೆ ಹಾಕಿದ ಸ್ಯಾನಿಟೈಸರ್ನಿಂದ ಕೈ ಸ್ವಚ್ಛ ಮಾಡಿಕೊಂಡು ಒಳಗೆ ತೆರಳಿದರು.
ನಿನ್ನೆ ಮಧ್ಯಾಹ್ನದಿಂದ ವಿಧಾನಸೌಧದ ಕೆಂಗಲ್ ದ್ವಾರದಲ್ಲಿ ಥರ್ಮಲ್ ಸ್ಕ್ರೀನಿಂಗ್ ಯಂತ್ರದ ಮೂಲಕ ತಪಾಸಣೆ ಮಾಡಲಾಗುತ್ತಿದೆ. ಇದಕ್ಕೂ ಕೂಡ ಸಿದ್ದರಾಮಯ್ಯ ಒಳಗಾದರು. ಸ್ವತಃ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೂಡ ಜನಪ್ರತಿನಿಧಿಗಳು ಕೈಗೊಳ್ಳುತ್ತಿರುವ ಈ ಕಾರ್ಯ ಮಾದರಿ ಎನಿಸುತ್ತಿದೆ.
ಇನ್ನೊಂದೆಡೆ ಇಂದು ಮಾಜಿ ಸಚಿವ ಹಾಗೂ ಜೆಡಿಎಸ್ ನಾಯಕ ಹೆಚ್. ಡಿ ರೇವಣ್ಣ ವಿಧಾನಸಭೆ ಆವರಣ ಪ್ರವೇಶಿಸುತ್ತಿದ್ದ ಸಂದರ್ಭ ಕೆಂಗಲ್ ಪ್ರವೇಶದ್ವಾರದಲ್ಲಿ ಥರ್ಮಲ್ ಯಂತ್ರದ ಮೂಲಕ ತಪಾಸಣೆಗೆ ಮುಂದಾದ ಸಿಬ್ಬಂದಿಗೆ ಸಹಕರಿಸದೆ ಒಳಗೆ ತೆರಳಿದರು ಎನ್ನಲಾಗ್ತಿದೆ. ಆರೋಗ್ಯ ಜಾಗೃತಿ ವಿಚಾರದಲ್ಲಿ ಕೈಗೊಂಡಿರುವ ಈ ಕಾರ್ಯಕ್ಕೆ ರೇವಣ್ಣ ಸಹಕರಿಸದಿರುವುದು ವಿಪರ್ಯಾಸ.