ಬೆಂಗಳೂರು/ಗೋವಾ: ಹಿಜಾಬ್-ಕೇಸರಿ ಶಾಲು ಸಂಘರ್ಷ ನಡೆಯುತ್ತಿರುವ ಶಾಲಾ ಕಾಲೇಜುಗಳಿಗೆ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತಕ್ಷಣ ರಜೆ ಘೋಷಿಸಿ ಆನ್ಲೈನ್ ತರಗತಿಗಳನ್ನು ಶುರು ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಗ್ರಹಪಡಿಸುತ್ತಿದ್ದೇನೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಗೋವಾ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ತೆರಳಿರುವ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ಹಿಜಾಬ್ - ಕೇಸರಿ ಶಾಲು ನಡುವಿನ ಸಂಘರ್ಷ ಅತಿರೇಕಕ್ಕೆ ತಲುಪಿ ವಿದ್ಯಾರ್ಥಿಗಳು ಪರಸ್ಪರ ಕಾದಾಟಕ್ಕೆ ಇಳಿದು ಶಾಲಾ - ಕಾಲೇಜುಗಳೇ ಕದನ ಕಣಗಳಾಗುತ್ತಿರುವುದು ಅಪಾಯಕಾರಿ ಬೆಳವಣಿಗೆ.
ವಿದ್ಯಾರ್ಥಿಗಳು ಸಂಘರ್ಷಕ್ಕೆ ಇಳಿದಿರುವ ಕಡೆಗಳಲ್ಲಿ ಪುಂಡು - ವಿದ್ಯಾರ್ಥಿಗಳ ಮೇಲೆ ಕಠಿಣ ಕ್ರಮಕೈಗೊಳ್ಳದೇ ಪೊಲೀಸರು ಮೂಕ ಪ್ರೇಕ್ಷಕರಾಗಿರುವುದು ವಿದ್ಯಾರ್ಥಿಗಳ ಹೆತ್ತವರಲ್ಲಿ ಆತಂಕ ಹುಟ್ಟಿಸಿದೆ ಎಂದಿದ್ದಾರೆ.
ಪ್ರಾರಂಭದ ಹಂತದಲ್ಲಿಯೇ ಸ್ಥಳೀಯವಾಗಿ ಸೌಹಾರ್ದಯುತವಾಗಿ ಬಗೆಹರಿಸಬಹುದಾಗಿದ್ದ ಸರಳ ಸಮಸ್ಯೆಯನ್ನು ರಾಜಕೀಯ ಕಾರಣಕ್ಕಾಗಿ ಉಲ್ಭಣಗೊಳಿಸಿರುವ ರಾಜ್ಯ ಸರ್ಕಾರ ಈಗ ನಿಯಂತ್ರಿಸಲಾಗದೇ ಕೈಚೆಲ್ಲಿ ಕುಳಿತಿದೆ. ಸಮಸ್ಯೆ ಇತ್ಯರ್ಥಗೊಳಿಸುವ ಹೊಣೆಗಾರಿಕೆ ಹೊಂದಿರುವ ರಾಜ್ಯ ಶಿಕ್ಷಣ ಸಚಿವರು ಮತ್ತು ಗೃಹಸಚಿವರು ನೀಡುತ್ತಿರುವ ಪ್ರಚೋದನಾಕಾರಿ ಹೇಳಿಕೆ ಪರಿಸ್ಥಿತಿ ಬಿಗಡಾಯಿಸಲು ಕಾರಣವಾಗಿರುವುದು ವಿಷಾದನೀಯ.
ಈ ಹಿನ್ನಲೆಯಲ್ಲಿ ಪರಿಸ್ಥಿತಿಯ ಗಂಭೀರತೆಯನ್ನು ಮುಖ್ಯಮಂತ್ರಿಗಳು ತಕ್ಷಣ ಮಧ್ಯಪ್ರವೇಶಿಸಿ ಶಾಲಾ - ಕಾಲೇಜುಗಳಿಗೆ ರಜೆ ಘೋಷಿಸಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗದಂತೆ ಆನ್ಲೈನ್ ತರಗತಿಗಳನ್ನು ತಕ್ಷಣ ಶುರು ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
ಮುಖಂಡರ ಭೇಟಿ: ಗೋವಾದಲ್ಲಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಇಂದು, ಅಖಿಲ ಗೋವಾ ಕನ್ನಡ ಸಂಘದ ಪದಾಧಿಕಾರಿಗಳು ಭೇಟಿಯಾಗಿ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿವರಿಸಿ ಸರ್ಕಾರದ ಗಮನ ಸೆಳೆಯುವಂತೆ ಮನವಿ ಮಾಡಿದರು. ಇದಾದ ಬಳಿಕ ಚಿತ್ರನಟ ಚಿಕ್ಕಣ್ಣ ಅವರು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚಿಸಿದರು.