ಬೆಂಗಳೂರು: ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಗಿಟ್ಟಿಸಲು ಅರ್ಜಿ ಸಲ್ಲಿಸಿರುವವರು ಕಾಂಗ್ರೆಸ್ ನಾಯಕರ ಭೇಟಿಯ ಅವಕಾಶಕ್ಕಾಗಿ ಕಾಯುತ್ತಿದ್ದು, ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಅಲಭ್ಯತೆ ಇವರನ್ನು ತೀವ್ರವಾಗಿ ಕಾಡುತ್ತಿದೆ
ರಾಜ್ಯದ ವಿವಿಧ ಜಿಲ್ಲೆಗೆ ಪ್ರವಾಸ ಕೈಗೊಂಡಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕಳೆದೊಂದು ವಾರದಿಂದ ಬೆಂಗಳೂರಿನಲ್ಲಿ ಇದ್ದದ್ದು ಬಹಳ ಕಡಿಮೆ. ವಿವಿಧ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿಯೂ ಅಲ್ಲಿನ ನಾಯಕರ ಜೊತೆ ಪಕ್ಷ ಸಂಘಟನೆ ಹಾಗೂ ಬಲವರ್ಧನೆ ವಿಚಾರವಾಗಿಯೇ ಹೆಚ್ಚಿನ ಚರ್ಚೆ ನಡೆಸಿದ್ದಾರೆ. ಟಿಕೆಟ್ ಆಕಾಂಕ್ಷಿಗಳ ಭೇಟಿಗೆ ಅವಕಾಶ ಸಿಕ್ಕಿಲ್ಲ. ಹೇಗಾದರೂ ಭೇಟಿ ಮಾಡಿ ಮನವಿ ಸಲ್ಲಿಸೋಣ ಎಂದು ಬಂದ ನಾಯಕರಿಗೂ ಡಿಕೆಶಿ ಮಾತನಾಡುವ ಅವಕಾಶ ನೀಡಿಲ್ಲ ಎಂಬ ಮಾತು ಕೇಳಿ ಬಂದಿದೆ.
ಇನ್ನೊಂದೆಡೆ, ಕಳೆದೊಂದು ವಾರದಿಂದ ವಿಶ್ರಾಂತಿಯಲ್ಲಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಎರಡು ದಿನದ ಹಿಂದೆ ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದು ಹಿಂದಿರುಗಿದ್ದಾರೆ. ಇವರು ಇನ್ನೊಂದು ವಾರ ವಿಶ್ರಾಂತಿ ಪಡೆಯಲಿದ್ದಾರೆ ಎಂಬ ಮಾಹಿತಿ ಇದೆ. ಒಂದು ವಾರದಿಂದ ಹೆಚ್ಚಿನ ಮುಖಂಡರನ್ನು ಇವರು ಭೇಟಿಯಾಗಿಲ್ಲ. ಮುಂದಿನ ಒಂದು ವಾರ ಸಹ ಭೇಟಿಯಾಗುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ.
ಸಿದ್ದರಾಮಯ್ಯ ಇತ್ತೀಚಿನ ದಿನಗಳಲ್ಲಿ ಡೆಂಗ್ಯೂ ಸೇರಿದಂತೆ ವಿವಿಧ ಜ್ವರಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭೇಟಿ ನೀಡುವವರ ವಿಚಾರದಲ್ಲಿ ವಿಶೇಷ ಗಮನ ಹರಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಆಕಾಂಕ್ಷಿಗಳಲ್ಲಿ ಒತ್ತಡ: ಮುಂಬರುವ ಮೇ ತಿಂಗಳಲ್ಲಿ ನಡೆಯುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಶತಾಯಗತಾಯ ಟಿಕೆಟ್ ಗಿಟ್ಟಿಸಲು ಒಂದೊಂದು ಕ್ಷೇತ್ರದಿಂದ ಕನಿಷ್ಠ 5 ರಿಂದ 20ರ ವರೆಗೂ ಅರ್ಜಿ ಸಲ್ಲಿಕೆಯಾಗಿದೆ. ಅರ್ಜಿ ಸಲ್ಲಿಸಿರುವವರಲ್ಲಿ ಬಹುತೇಕ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಬೆಂಬಲಿಗರು ಹಾಗೂ ಡಿ ಕೆ ಶಿವಕುಮಾರ್ ಬೆಂಬಲಿಗರು ಟಿಕೆಟ್ಗಾಗಿ ಪೈಪೋಟಿ ನಡೆಸಿದ್ದಾರೆ.
ಇದನ್ನೂ ಓದಿ: ಮೂಡಿಗೆರೆಗೆ ಆಗಮಿಸಿದ ಡಿಕೆಶಿ... ಸೇಬಿನ ಹಾರ ಹಾಕಿ ಅದ್ದೂರಿ ಸ್ವಾಗತ
ಆದರೆ ತಮ್ಮ ನಾಯಕರನ್ನು ಭೇಟಿಯಾಗುವ ಅವಕಾಶವಾಗಲಿ ಅಥವಾ ಮಹಾನಗರಕ್ಕೆ ಬಂದು ತಮ್ಮ ಶಕ್ತಿ ಪ್ರದರ್ಶನ ಮಾಡುವುದಕ್ಕಾಗಲಿ ಇವರಿಗೆ ಅವಕಾಶ ಸಿಗುತ್ತಿಲ್ಲ. ರಾಜ್ಯ ಕಾಂಗ್ರೆಸ್ ನಾಯಕರು ಸಹ ತಮ್ಮದೇ ಆದ ಶಕ್ತಿ ಪ್ರದರ್ಶಿಸುವ ಆಸಕ್ತಿಯನ್ನು ಹೊಂದಿದ್ದರು. ಆದರೆ ಅನಾರೋಗ್ಯ ಹಾಗೂ ಪ್ರವಾಸ ಇದಕ್ಕೆ ತಡೆಯಾಗಿದೆ. ಡಿ ಕೆ ಶಿವಕುಮಾರ್ ದಿಲ್ಲಿಯಲ್ಲಿ ಈಡಿ ವಿಚಾರಣೆ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲು ತೆರಳಿದ ಸಂದರ್ಭ ಇತ್ತ ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಬೆಂಬಲಿಗರು ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದರು.
ಸಿದ್ದರಾಮಯ್ಯ ನಿವಾಸಕ್ಕೆ ನೂರಾರು ಬೆಂಬಲಿಗರ ಜೊತೆ ಆಗಮಿಸಿ ತಮಗೆ ಟಿಕೆಟ್ ನೀಡುವಂತೆ ಒತ್ತಡ ಹೇರಿದ್ದರು. ಆದರೆ ಇದಾದ ಬಳಿಕ ಸಿದ್ದರಾಮಯ್ಯ ಅನಾರೋಗ್ಯದ ಕಾರಣ ನೀಡಿ ಮುಖಂಡರ ಭೇಟಿಗೆ ಅವಕಾಶ ಕೊಟ್ಟಿಲ್ಲ. ಮತ್ತೊಂದೆಡೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸಹ ತಮ್ಮ ಬೆಂಬಲಿಗರನ್ನು ಭೇಟಿಯಾಗುತ್ತಿಲ್ಲ. ರಾಜ್ಯ ಪ್ರವಾಸ ಹಿನ್ನೆಲೆ ಅವರಿಗೂ ತಮ್ಮ ಬೆಂಬಲಿಗರ ಜೊತೆ ಸಮಾಲೋಚಿಸಲು ಕಾಲ ಕೂಡಿ ಬರುತ್ತಿಲ್ಲ. ಕಳೆದ ಶುಕ್ರವಾರ ಬೆಂಗಳೂರಿನಲ್ಲಿಯೇ ಇದ್ದರು ಸಹ ಕೆಪಿಸಿಸಿ ಅಧ್ಯಕ್ಷರು ತಮ್ಮ ಬೆಂಬಲಿಗರ ಅಥವಾ ಟಿಕೆಟ್ ಆಕಾಂಕ್ಷಿಗಳ ಭೇಟಿಗೆ ಅವಕಾಶ ನೀಡಿಲ್ಲ.
ನಿನ್ನೆ ಕೂಡ ದಿನವಿಡೀ ಯಾರನ್ನೂ ಅವರು ಭೇಟಿಯಾಗಿಲ್ಲ ಮತ್ತು ಇಂದು ಸಹ ಇದುವರೆಗೂ ಯಾವುದೇ ಮುಖಂಡರು ಅವರನ್ನು ಭೇಟಿ ಮಾಡಿಲ್ಲ. ಒಟ್ಟಾರೆ ಕೆಪಿಸಿಸಿ ಅಧ್ಯಕ್ಷರ ಕಾರ್ಯದ ಒತ್ತಡ ಹಾಗೂ ಪ್ರತಿಪಕ್ಷ ನಾಯಕರ ಅನಾರೋಗ್ಯದಿಂದಾಗಿ ಟಿಕೆಟ್ ಆಕಾಂಕ್ಷಿಗಳಿಗೆ ತಮ್ಮ ಶಕ್ತಿ ಪ್ರದರ್ಶನ ಮಾಡಲು ಸಮಯಾವಕಾಶ ಕೂಡಿ ಬರುತ್ತಿಲ್ಲ. ಸೋಮವಾರದ ನಂತರವಾದರೂ ಕೆಪಿಸಿಸಿ ಅಧ್ಯಕ್ಷರು ಬೆಂಗಳೂರಿನಲ್ಲಿ ತಮ್ಮ ಬೆಂಬಲಿಗರಿಗೆ ಲಭಿಸುತ್ತಾರಾ ಅನ್ನೋದನ್ನು ಕಾದುನೋಡಬೇಕಿದೆ.
ಇದನ್ನೂ ಓದಿ: ಸಣ್ಣ ಶಸ್ತ್ರಚಿಕಿತ್ಸೆಗಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಆಸ್ಪತ್ರೆಗೆ ದಾಖಲು