ಬೆಂಗಳೂರು : ಸಮಾರಂಭದ ಮಧ್ಯೆ ಮಳೆ ಬಂದಿರುವುದು ನನ್ನ ಪಾಲಿಗೆ ಶುಭ ಸೂಚನೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ರಾಜಾಜಿನಗರದ ಸಾಣೆಗೊರವನಹಳ್ಳಿ ನೇತಾಜಿ ಸುಭಾಷ್ ಚಂದ್ರ ಬೋಸ್ ಕ್ರೀಡಾಂಗಣದಲ್ಲಿ ನಿರ್ಮಾಪಕ ಸಾ. ರಾ. ಗೋವಿಂದು ಹಮ್ಮಿಕೊಂಡಿದ್ದ ಆಹಾರ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಳೆ ಬಂದಿರುವುದು ತಮ್ಮ ಪಾಲಿಗೆ ಶುಭ ಸಂಕೇತ ಎಂದು ಆರಂಭದಲ್ಲಿ ಹೇಳಿದರು. ಆದರೆ, ನಂತರ ಈ ಮಾತು ವಿವಾದಿತವಾಗಬಹುದು ಎಂಬ ಅನುಮಾನದಿಂದ ಇದು ಸಾ ರಾ ಗೋವಿಂದು ಅವರಿಗೂ ಶುಭ ಸೂಚಕ ಹಾಗೂ ಜನರಿಗೂ ಶುಭ ಸೂಚಕ ಎಂದು ಮಾತು ತಿದ್ದುವ ಕಾರ್ಯ ಮಾಡಿದರು.
ತೆರೆದ ವೇದಿಕೆಯಲ್ಲಿ ಸಮಾರಂಭ ನಡೆಯುತ್ತಿದ್ದ ಸಂದರ್ಭ ಇದ್ದಕ್ಕಿದ್ದಂತೆ ಮಳೆ ಬಂತು. ಆ ಸಂದರ್ಭ ವೇದಿಕೆ ಮೇಲೆ ಸಿದ್ದರಾಮಯ್ಯ ಮಾತನಾಡುತ್ತಿದ್ದರು. ಜನ ಕುರ್ಚಿಗಳನ್ನು ತಲೆಯ ಮೇಲಿಟ್ಟುಕೊಂಡು ತಮ್ಮನ್ನು ಮಳೆಯಿಂದ ರಕ್ಷಿಸಿಕೊಳ್ಳಲು ಮುಂದಾದರು.
ಆಗ ಈ ಮಳೆ ಬಂದಿರುವುದು ಒಳ್ಳೆಯದಕ್ಕೆ, ಹೆಚ್ಚುಹೊತ್ತು ನಿಮ್ಮನ್ನು ಕಾಡುವುದಿಲ್ಲ ಎಂದರು. ನಿಧಾನಗತಿಯಲ್ಲಿ ಬರುತ್ತಿದ್ದ ಮಳೆ ಒಮ್ಮೆಲೆ ಹೆಚ್ಚಾದಾಗ ತಮ್ಮ ಭಾಷಣವನ್ನು ನಿಲ್ಲಿಸಿದ ಸಿದ್ದರಾಮಯ್ಯ, ವೇದಿಕೆಯಿಂದ ಕೆಳಗಿಳಿದು ಸಮಾರಂಭದಿಂದ ತೆರಳಿದರು. ಇದಾದ ಬಳಿಕ ಮಳೆ ನಿಂತು ಕಾರ್ಯಕ್ರಮ ಮುಂದುವರೆಯಿತು.
ನಮ್ಮ ಕಾಡಿನವರು ಅಂತ ಹೇಳ್ತಾಯಿದ್ರೂ
ಮಳೆಗೂ ಮುನ್ನ ಸಮಾರಂಭ ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ನಿರ್ಮಾಪಕ ಸಾ ರಾ ಗೋವಿಂದು ಅವರ ಪ್ರತಿಷ್ಠಾನ ವತಿಯಿಂದ ಉಚಿತವಾಗಿ ಕಿಟ್ ವಿತರಣೆ ಮಾಡ್ತಾ ಇದ್ದಾರೆ. ಇದೇ 13ರಂದು ಹುಟ್ಟು ಹಬ್ಬವಿತ್ತು. ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. ದೇವರು ಸಾ ರಾ ಅವರಿಗೆ ಒಳ್ಳೆಯ ಆರೋಗ್ಯ ಕೊಡ್ಲಿ, ರಾಜಕೀಯದಲ್ಲೂ ಸಾ ರಾ ಅವರಿಗೆ ಯಶಸ್ಸು ಸಿಗಲಿ ಎಂದರು.
ಸಾ ರಾ ನಮ್ಮ ಕಡೆಯವರು. ಕೆ ಆರ್ ನಗರದ ಸಾಲಿ ಗ್ರಾಮದವರು. ಅವರ ಮಗ ಬಂದು ಕಾರ್ಯಕ್ರಮಕ್ಕೆ ಕರೆದ ತಕ್ಷಣವೇ ಬರ್ತಿನಿ ಅಂತಾ ಹೇಳಿ. ನಮ್ಮ ಕಡೆಯವರು ಬಡವರಿಗೆ ಕಿಟ್ ಕೊಡ್ತಾರೆ ಅಂದ್ರೆ ಹೋಗಬೇಕು. ಮೈಸೂರು, ಚಾಮರಾಜನಗರ ಕಡೆ ಆ ಭಾಗದವರು ಸಿಕ್ಕಿದ್ರೆ ನಮ್ಮ ಕಾಡಿನವರು ಅಂತಾ ಕರೆಯುತ್ತೇವೆ. ವರನಟ ಡಾ. ರಾಜಕುಮಾರ್ ಅವರು ನನ್ನ ಎಲ್ಲಿ ನೋಡಿದ್ರೂ, ನಮ್ಮ ಕಾಡಿನವರು ಅಂತಾ ಹೇಳ್ತಾಯಿದ್ರು, ಅದು ಪ್ರೀತಿಯಿಂದ ಎಂದರು.
ಸೂಕ್ತ ಸ್ಥಾನಮಾನ
ರಾಜ್ಯ ಪ್ರವಾಸ ಮುಗಿಸಿ ಇಂದು ಆಗಮಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಕಾರ್ಯಕ್ರಮಕ್ಕೆ ಕೊಂಚ ವಿಳಂಬವಾಗಿ ಆಗಮಿಸಿದರು. ಸಿದ್ದರಾಮಯ್ಯ ತೆರಳಿದ ನಂತರ ಬಂದು ಭಾಷಣ ಮಾಡಿದ ಅವರು, ಸಾ. ರಾ. ಗೋವಿಂದು ಅವರು ಇಂದಿನ ಈ ವೇದಿಕೆಯಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗಿದ್ದಾರೆ. ಮುಂಬರುವ ದಿನಗಳಲ್ಲಿ ಪಕ್ಷದ ವೇದಿಕೆಯಲ್ಲಿ ಅವರಿಗೆ ಸೂಕ್ತ ಸ್ಥಾನಮಾನ ನೀಡುವ ಕಾರ್ಯ ಮಾಡುತ್ತೇವೆ. ಜನರ ಅನುಕೂಲಕ್ಕಾಗಿ ದಿನಸಿ ಕಿಟ್ ವಿತರಿಸುವ ಉತ್ತಮ ಕಾರ್ಯ ಮಾಡಿದ್ದಾರೆ. ಇದನ್ನು ಅಭಿನಂದಿಸುತ್ತೇನೆ ಎಂದರು.
ಸಾ ರಾ ಗೋವಿಂದು ಅವರನ್ನು ಹತ್ತಿರದಿಂದ ಬಲ್ಲವನಾಗಿದ್ದೇನೆ. ಅವರು ಬಹುದೊಡ್ಡ ಸೇವಾಕಾರ್ಯವನ್ನು ಹಿಂದಿನಿಂದಲೂ ಮಾಡಿಕೊಂಡು ಬಂದಿದ್ದಾರೆ. ಯಾವುದೇ ಉದ್ದೇಶ ಹಾಗೂ ಅಧಿಕಾರದ ಆಸೆ ಇಲ್ಲದೆ ಈ ಕಾರ್ಯ ಮಾಡುತ್ತಾ ಬಂದಿದ್ದಾರೆ.
ನೆಲ-ಜಲ-ಭಾಷೆಯ ವಿಚಾರದಲ್ಲಿ ಎಲ್ಲಾ ಸರ್ಕಾರಗಳಿಗೆ ನಿರಂತರವಾಗಿ ಸಹಕಾರ ನೀಡುತ್ತಾ ಬಂದಿದ್ದಾರೆ. ಹೋರಾಟ ಮಾಡುವ ಸಂದರ್ಭ ಬಂದಾಗ ಹೋರಾಟ ಮಾಡುವ ಮೂಲಕ ಸರ್ಕಾರಗಳಿಗೂ ಬಿಸಿ ತಟ್ಟಿಸುವ ಕಾರ್ಯ ಮಾಡಿದ್ದಾರೆ ಎಂದರು.
ಓದಿ: ಸಾಮಾನ್ಯರದ್ದಲ್ಲ, ಈ ಆಡಿಯೋ ನಳಿನ್ ಕುಮಾರ್ ಕಟೀಲ್ ಅವರದ್ದೇ.. : ಡಿಕೆಶಿ