ಬೆಂಗಳೂರು : ಜಾತಿ ಸಮೀಕ್ಷೆ ಇನ್ನೂ ಬಿಡುಗಡೆಯೇ ಆಗಿಲ್ಲ. ಯಾರ ಪರ, ವಿರುದ್ಧ ಅಂತಾ ಹೇಗೆ ಹೇಳಲು ಸಾಧ್ಯ?. ನನ್ನ ಪ್ರಕಾರ ವರದಿ ಸೋರಿಕೆ ಆಗಿಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ. ನಗರದ ಚಿತ್ರಕಲಾ ಪರಿಷತ್ನಲ್ಲಿ ಈ ಕುರಿತು ಮಾತನಾಡಿದ ಅವರು, ಜಾತಿಗಣತಿ ವರದಿಯನ್ನು ವೀರಶೈವ ಮಹಾಸಭಾ ವಿರೋಧಿಸುತ್ತಿದೆಯಲ್ಲ? ಎಂಬ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದರು.
ವೀರಶೈವ ಒಕ್ಕಲಿಗ ಮೊದಲಾದ ಪ್ರಬಲ ಸಮುದಾಯಗಳನ್ನು ಅಲ್ಪಸಂಖ್ಯಾತ ಮಾಡುವ ಉದ್ದೇಶ ಸಿದ್ಧರಾಮಯ್ಯರಿಗಿದೆ ಎಂಬ ಆರೋಪಕ್ಕೆ ಅವರು ಪ್ರತಿಕ್ರಿಯಿಸಿದರು. ಎಲ್ಲಾ ಜಾತಿಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಪರಿಸ್ಥಿತಿ ಏನು ಎಂದು ತಿಳಿದುಕೊಳ್ಳಲು ಸಮೀಕ್ಷೆ ನಡೆಸಲಾಗಿದೆ. ದಾಖಲಾತಿಗಾಗಿ ಸಮೀಕ್ಷೆ ನಡೆಸಲಾಯಿತು. ಯಾವುದೇ ದುರುದ್ದೇಶ ಅಥವಾ ಜಾತಿ, ವರ್ಗದ ವಿರುದ್ಧವೂ ಇಲ್ಲ ಎಂದರು.
ನಮ್ಮ ಅವಧಿಯಲ್ಲಿ ವರದಿ ಇನ್ನೂ ಸಿದ್ಧವಾಗಿರಲಿಲ್ಲ. ಕುಮಾರಸ್ವಾಮಿ ಅವಧಿಯಲ್ಲಿ ಪೂರ್ಣವಾಗಿತ್ತು. ಆದರೆ, ಬಿಡುಗಡೆ ಮಾಡಲು ಹೆಚ್ಡಿಕೆ ಒಪ್ಪಲಿಲ್ಲ. ಇದೀಗ ಬಿಜೆಪಿ ಸರ್ಕಾರ ಬಿಡುಗಡೆ ಮಾಡಬೇಕು. ಲಿಂಗಾಯತರು ಮತ್ತು ಒಕ್ಕಲಿಗರನ್ನ ಅಲ್ಪಸಂಖ್ಯಾತರನ್ನಾಗಿ ಮಾಡಲು ವರದಿ ತಯಾರಿಸಿಲ್ಲ. ಪ್ರತಿ ಸಮುದಾಯಗಳಿಗೆ ಸಾಮಾಜಿಕ ಸ್ಥಾನ ನೀಡಲು ಇದೊಂದು ದಾಖಲಾತಿ.
ಇದನ್ನು ಅನುಸರಿಸಿ ಸಾಮಾಜಿಕ ನ್ಯಾಯ ನೀಡಲು ಸಾಧ್ಯ. ಬಿಹಾರದ ನಿತೀಶ್ ಕುಮಾರ್ ಈಗ ಜಾತಿ ಸಮೀಕ್ಷೆಗೆ ಆದೇಶ ನೀಡಿದ್ದಾರೆ. ಸರ್ಕಾರ ಜಾತಿ ಸಮೀಕ್ಷೆ ವರದಿ ಮೊದಲು ಬಿಡುಗಡೆ ಮಾಡಲಿ ಎಂದು ಒತ್ತಾಯಿಸಿದರು. ಜಾತಿ ಸಮೀಕ್ಷೆ ಬಗ್ಗೆ ಸದನದಲ್ಲಿ ಪ್ರಶ್ನೆ ಮಾಡ್ತೀರಾ? ಎನ್ನುವ ಪ್ರಶ್ನೆಗೆ, ಮುಂದೆ ನೋಡೋಣ ಎಂದರು.
ಜಾತಿಗಣತಿ ಸಮೀಕ್ಷೆ ಆಧರಿಸಿದಂತೆ ಹೈಕಮಾಂಡ್ ಒಂದು ಸಮಿತಿ ಮಾಡಿದ್ದಾರೆ. ವೀರಪ್ಪ ಮೊಯ್ಲಿ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಆಗಿದೆ. ಅವರು ಅಧ್ಯಯನ ಮಾಡಿ ವರದಿ ಕೊಡಲಿದ್ದಾರೆ. ಇಡೀ ದೇಶದಲ್ಲಿ ಕರ್ನಾಟಕ ಜಾತಿ ಸಮೀಕ್ಷೆ ಮಾಡಿದೆ ಎಂದು ತಿಳಿಸಿದರು.
ಬಿ ಸಿ ಪಾಟೀಲ್ ಹಗರಣ ಆರೋಪ : ರಿಯಾಯ್ತಿ ದರದಲ್ಲಿ ರೈತರಿಗೆ ಕೊಡುವ ಯಂತ್ರೋಪಕರಣಗಳ ಖರೀದಿಯಲ್ಲಿ ಕೃಷಿ ಸಚಿವ ಬಿ ಸಿ ಪಾಟೀಲ್ ವಿರುದ್ಧ ಕೇಳಿ ಬಂದಿರುವ 219 ಕೋಟಿ ಮೊತ್ತದ ಅವ್ಯವಹಾರದ ಬಗ್ಗೆ ಆಂಟಿ ಕರಪ್ಷನ್ ಫೋರ್ಸ್ ಎಸಿಬಿಗೆ ದೂರು ನೀಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ. ದೂರು ದಾಖಲಾಗಿದ್ರೆ ಅವರ ವಿರುದ್ಧವೂ ತನಿಖೆಯಾಗಬೇಕು ಎಂದರು.
ದೇವೇಗೌಡರ ಜತೆ ಖರ್ಗೆ ಮಾತುಕತೆ ಕುರಿತು ಗೊತ್ತಿಲ್ಲ : ಕಲಬುರ್ಗಿ ಮಹಾನಗರ ಪಾಲಿಕೆ ಮೈತ್ರಿ ವಿಚಾರವಾಗಿ ಮಲ್ಲಿಕಾರ್ಜನ ಖರ್ಗೆ, ದೇವೇಗೌಡರ ಜೊತೆ ಮಾತನಾಡಿರೋ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದರು. ನನಗೆ ಈ ಬಗ್ಗೆ ಮಾಹಿತಿ ಇಲ್ಲ. ನಾನು ಈ ಬಗ್ಗೆ ಪಕ್ಷದ ಮುಖಂಡರ ಜೊತೆ ಚರ್ಚೆ ಮಾಡುತ್ತೇನೆ. ಏನು ಮಾಡಬೇಕು ಎಂದು ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇವೆ ಎಂದರು.
ಓದಿ: ಕೇಂದ್ರ ಸಚಿವರನ್ನು ಭೇಟಿಯಾದ ಸಿಎಂ ಬೊಮ್ಮಾಯಿ.. ರಾಜ್ಯದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ..