ಬೆಂಗಳೂರು: ಮೀಸಲಾತಿ ವಿಚಾರವಾಗಿ ಅತ್ಯಂತ ವಿಸ್ತೃತ, ವಾಸ್ತವಿಕ ಬರಹವನ್ನು ನ್ಯಾ. ನಾಗಮೋಹನ್ ದಾಸ್ ತಮ್ಮ ಕೃತಿ ಮೂಲಕ ನೀಡಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಇಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ನ್ಯಾಯಮೂರ್ತಿ ನಾಗಮೋಹನ ದಾಸ್ ಅವರು ಬರೆದಿರುವ ಮೀಸಲಾತಿ “ಭ್ರಮೆ ಮತ್ತು ವಾಸ್ತವ” ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿ, ಒಂದು 140-150 ಪುಟಗಳಿರುವ ಚಿಕ್ಕ ಪುಸ್ತಕ ಇದು. ಪುಸ್ತಕದಲ್ಲಿ ಚಿಕ್ಕದಾಗಿ ಚೊಕ್ಕದಾಗಿ ಮೀಸಲಾತಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ನಾಗಮೋಹನ್ ದಾಸ್ ಅವರು ನ್ಯಾಯಮೂರ್ತಿಗಳಾಗಿರುವುದರಿಂದ ಸಂವಿಧಾನದ ಬಗ್ಗೆ ಹೆಚ್ಚು ಓದಿಕೊಂಡು, ಜ್ಞಾನ ಹೊಂದಿದ್ದಾರೆ ಎಂದರು.
ಕೆಲವರು ಮೀಸಲಾತಿಯನ್ನು ವಿಕೃತವಾಗಿ ನೋಡುತ್ತಿದ್ದಾರೆ: ಇತ್ತೀಚಿನ ವರ್ಷಗಳಲ್ಲಿ ಸಂವಿಧಾನ ಓದು ಎಂಬ ಕಿರುಹೊತ್ತಿಗೆಯನ್ನು ಬರೆದಿದ್ದರು. ನಾನೂ ಅದನ್ನು ಓದಿದ್ದೇನೆ. ದೇಶದ ಪ್ರತಿಯೊಬ್ಬ ಪ್ರಜೆ ಸಂವಿಧಾನದ ಬಗ್ಗೆ ತಿಳಿದುಕೊಳ್ಳಬೇಕು. ಇದನ್ನು ಒಂದು ಪುಸ್ತಕವಾಗಿ ಮಾತ್ರವಲ್ಲ, ಒಂದು ಅಭಿಯಾನವಾಗಿ ಜನರಿಗೆ ತಲುಪಿಸುವ ಕೆಲಸ ಮಾಡಿದ್ದಾರೆ. ಆ ಸಂದರ್ಭದಲ್ಲಿ ಮೀಸಲಾತಿ ಬಗ್ಗೆ ಬಹಳಷ್ಟು ಪ್ರಶ್ನೆಗಳು ಬರುತ್ತಿದ್ದವು ಎಂಬುದನ್ನು ಅವರು ಹೇಳಿದರು. ಇದರ ಅರ್ಥ ಮೀಸಲಾತಿ ಯಾಕೆ ಹುಟ್ಟಿತು, ಅದರ ಉದ್ದೇಶ ಮತ್ತು ಅನಿವಾರ್ಯತೆ ಬಗ್ಗೆ ಜನರಿಗೆ ಮಾಹಿತಿ ಕೊರತೆ ಇದೆ ಎಂಬುದು ಸ್ಪಷ್ಟವಾಗುತ್ತದೆ. ಇದಕ್ಕೆ ನಾವು ಉತ್ತರ ನೀಡಿದರೂ ಕೆಲವರು ಮೀಸಲಾತಿಯನ್ನು ವಿಕೃತವಾಗಿ ನೋಡುತ್ತಿದ್ದಾರೆ ಎಂದರು.
ನಮ್ಮ ಸಮಾಜ ಜಾತಿ ವ್ಯವಸ್ಥೆ ಕಾರಣಕ್ಕಾಗಿ ಅಸಮಾನತೆಯಿಂದ ಕೂಡಿದೆ. ಇದು ಅವಕಾಶ ವಂಚಿತ ಜನರಿಂದ ಆದದ್ದಲ್ಲ. ಈ ಅಸಮಾನತೆ ಉಂಟಾಗಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕಾರಣ. ಇವರು ತಮ್ಮ ಸ್ವಾರ್ಥಕ್ಕಾಗಿ ಸಮಾಜದಲ್ಲಿ ಜಾತಿ ವ್ಯವಸ್ಥೆಯನ್ನು ಗಟ್ಟಿಗೊಳಿಸಿ, ರಾಜಕೀಯ, ಆರ್ಥಿಕ ಅಸಮಾನತೆ ಸೃಷ್ಟಿ ಮಾಡಿದ್ದಾರೆ. ಚತುರ್ವರ್ಣ ವ್ಯವಸ್ಥೆಯಲ್ಲಿ ಬ್ರಾಹ್ಮಣರು, ಕ್ಷತ್ರಿಯರು ಹಾಗೂ ವೈಶ್ಯರಿಗೆ ಓದಲು, ಸಂಪತ್ತನ್ನು ಅನುಭವಿಸಲು, ಅಧಿಕಾರ ನಡೆಸಲು ಅವಕಾಶ ಇತ್ತು. ಇದು ಮೀಸಲಾತಿ ಅಲ್ಲವೇ? ಬಹುಸಂಖ್ಯಾತ ಶೂದ್ರರನ್ನು ಅಕ್ಷರ ಸಂಸ್ಕೃತಿಯಿಂದ ವಂಚಿಸಿ, ಅವರೇ ಉತ್ಪಾದನೆ ಮಾಡಿದ ಸಂಪತ್ತನ್ನು ಅನುಭವಿಸಲು ಅವಕಾಶ ನೀಡದೆ ಇದ್ದದ್ದು ಅನ್ಯಾಯ ಅಲ್ಲವೇ? ಶಿಕ್ಷಣ, ಅಧಿಕಾರ ಮತ್ತು ಸಂಪತ್ತು ಯಾವುದೇ ಜನಾಂಗದ ಜಾತಿಯ ಸ್ವತ್ತಲ್ಲ. ಅಂಬೇಡ್ಕರ್ ಅವರು ಓದದೆ ಹೋಗಿದ್ದರೆ ಸಂವಿಧಾನ ರಚನೆ ಮಾಡಲು ಆಗುತ್ತಿತ್ತಾ? ಎಂದು ಪ್ರಶ್ನಿಸಿದರು.
ಅಸ್ಪೃಶ್ಯ ಜನಾಂಗದಲ್ಲಿ ಹುಟ್ಟಿದ ಅಂಬೇಡ್ಕರ್ ಅವರು ಬುದ್ಧಿವಂತಿಕೆಯಲ್ಲಿ ಯಾರಿಗಿಂತಲಾದರೂ ಕಡಿಮೆಯಿದ್ದಾರಾ? ಈ ದೇಶದ ಕೆಲವೇ ಮೇಧಾವಿ ರಾಜಕಾರಣಿ, ಬುದ್ಧಿವಂತರಲ್ಲಿ ಅಂಬೇಡ್ಕರ್ ಒಬ್ಬರು. ಇಲ್ಲದಿದ್ದರೆ ಇಂಥಾ ಸಂವಿಧಾನ ಸಿಗಲು ಸಾಧ್ಯವಾಗುತ್ತಿತ್ತಾ? ಭಾರತದಲ್ಲಿ 4635 ಜಾತಿಗಳು ಇವೆ ಎಂದು ಪುಸ್ತಕದಲ್ಲಿ ಆಧಾರ ಸಮೇತ ಹೇಳಿದ್ದಾರೆ. ಇದನ್ನು ಹುಟ್ಟುಹಾಕಿದ್ದು ಯಾರಪ್ಪ? ಅವರೇ ಇಂದು ಮೀಸಲಾತಿ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಈ ವಿಚಾರ ಹೇಳಿದ್ರೆ ನನ್ನ ಮೈಮೇಲೆ ಬೀಳುತ್ತಾರೆ. ಸತ್ಯ ಹೇಳೋದು ಕಷ್ಟವಾಗಿದೆ. ಆರ್ಯನ್ನರು ಮಧ್ಯಪ್ರಾಚ್ಯದಿಂದ ಬಂದವರು ಎಂದು ನಾನು ಹೇಳಿದ್ರೆ ಏನ್ರೀ ನಮ್ಮನ್ನೇ ಪ್ರಶ್ನೆ ಮಾಡ್ತೀರ ಎಂದು ಮೈಮೇಲೆ ಬರ್ತಾರೆ. ನಾವೆಲ್ಲ ದ್ರಾವಿಡರು, ನಮ್ಮ ಮೇಲೆ ದೌರ್ಜನ್ಯ ಮಾಡಿದ್ರು ಎಂದು ಹೇಳಿದ್ರೆ ಕೆಲವರಿಗೆ ಕೋಪ ಬರುತ್ತದೆ. ಇದಕ್ಕೆ ನಮ್ಮ ಕಡೆ ಇದ್ದದ್ದನ್ನು ಇದ್ದಂಗೆ ಹೇಳಿದ್ರೆ ಎದ್ದು ಬಂದು ಎದೆಗೆ ಒದ್ದರಂತೆ ಎಂಬ ಗಾದೆ ಮಾತು ಹೇಳುತ್ತಾರೆ ಎಂದರು.
ಮೀಸಲಾತಿ ಬಂದು ಕರ್ನಾಟಕದಲ್ಲಿ ನೂರು ವರ್ಷ ಆಗಿದೆ. ಮಹಾರಾಷ್ಟ್ರದಲ್ಲಿ ಸಾಹೋ ಮಹಾರಾಜ್, ತಮಿಳುನಾಡಿನಲ್ಲಿ ಜಸ್ಟೀಸ್ ಪಾಂಡ್ಯನ್ ಅವರು ಹೋರಾಟ ಮಾಡಿ ಮಾಡಿದ್ರು. ದಕ್ಷಿಣ ಭಾರತದಲ್ಲಿ ಮೀಸಲಾತಿ ಜಾರಿಯಾದ್ರೂ ಉತ್ತರ ಭಾರತದಲ್ಲಿ ಆಗಿರಲಿಲ್ಲ. 1955 ರಲ್ಲಿ ಕಾಕಾ ಕಾಲೇಟ್ಕರ್ ಅವರ ವರದಿ ತಿರಸ್ಕಾರ ಆದಮೇಲೆ ಇನ್ನೊಂದು ಸಮಿತಿ ರಚನೆ ಮಾಡಿ ಎಂದು ದೇಶದಲ್ಲಿ ಹೋರಾಟವೇ ನಡೆದಿಲ್ಲ. 22 ವರ್ಷಗಳವರೆಗೆ ಈ ದೇಶದಲ್ಲಿ ಇನ್ನೊಂದು ಸಮಿತಿ ರಚನೆಯ ಕೂಗು ಕೇಳಲೇ ಇಲ್ಲ. ಅಷ್ಟರ ಮಟ್ಟಿಗೆ ನಾವು ಮೌನಿಗಳಾಗಿದ್ದೇವೆ, ಅನ್ಯಾಯವನ್ನು ಸಹಿಸಿಕೊಂಡಿದ್ದೇವೆ ಎಂದರು.
ಪುಸ್ತಕ ರೂಪದಲ್ಲಿ ಬರೆದಿದ್ದಾರೆ: 1977 ರಲ್ಲಿ ಅಂದಿನ ಜನತಾ ಸರ್ಕಾರ ಮಂಡಲ್ ಅವರ ನೇತೃತ್ವದಲ್ಲಿ ಆಯೋಗ ರಚನೆ ಮಾಡುವುದಾಗಿ ಘೋಷಿಸಿ, 1980 ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಕೆಯಾಯಿತು. 1990 ರಲ್ಲಿ ವಿ. ಪಿ ಸಿಂಗ್ ಬರುವವರೆಗೆ ಅದು ಜಾರಿಯಾಗಿರಲಿಲ್ಲ. ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಸಂವಿಧಾನದಲ್ಲಿ ಅಂಬೇಡ್ಕರ್ ಮೀಸಲಾತಿ ನೀಡಿದ್ರು. ಆದರೆ, ಹಿಂದುಳಿದ ಜಾತಿಗಳಿಗೆ ಸಂವಿಧಾನ ಬಂದು 40 ವರ್ಷಗಳಾಗುವರೆಗೆ ಮೀಸಲಾತಿ ಸಿಕ್ಕಿರಲಿಲ್ಲ. ವಿಪಿ ಸಿಂಗ್ ಅವರು ಉದ್ಯೋಗದಲ್ಲಿ 27% ಮೀಸಲಾತಿ ನೀಡಿದ್ರು. ಇದನ್ನು ವಿರೋಧ ಮಾಡಿದ್ದು ಯಾರು? ರಥಯಾತ್ರೆ ಮಾಡಿದ್ದು ಯಾರು? ಅವರನ್ನು ಬಂಧಿಸಿದ್ದು ಯಾರು? ಮೀಸಲಾತಿ ಬಗೆಗಿನ ಸಂಪೂರ್ಣ ಮಾಹಿತಿ ತಿಳಿಸಲು ನಾಗಮೋಹನ್ ದಾಸ್ ಅವರು ಪುಸ್ತಕ ರೂಪದಲ್ಲಿ ಬರೆದಿದ್ದಾರೆ ಎಂದು ಸಿದ್ದರಾಮಯ್ಯ ಹೊಗಳಿದರು.
ಎಲ್ಲಿಯವರೆಗೆ ಜಾತಿ ವ್ಯವಸ್ಥೆ ಮತ್ತು ಸಾಮಾಜಿಕ ಅಸಮಾನತೆ ಇರುತ್ತದೆಯೋ ಅಲ್ಲಿಯವರೆಗೆ ಮೀಸಲಾತಿ ಇರಲೇಬೇಕು ಎಂದು ಬಾಬಾ ಸಾಹೇಬರು ಹೇಳಿದ್ದರು. ವಿರೋಧ ಮಾಡುವವರು ಬಿಡಿ, ಅವರು ತಿಳಿದುಕೊಂಡೇ ವಿರೋಧ ಮಾಡುತ್ತಾರೆ. ಆದರೆ ಮೀಸಲಾತಿ ಸೌಲಭ್ಯ ಯಾರಿಗೆ ಸಿಕ್ಕಿದೆ, ಅವರಿಗೇ ತಮಗೆ ಈ ಸೌಲಭ್ಯ ಯಾಕೆ ಸಿಕ್ಕಿದ್ದು ಎಂದು ಗೊತ್ತಿಲ್ಲ. ಮಂಡಲ್ ಕಮಿಷನ್ ವರದಿ ಬಂದಾಗ ಹಿಂದುಳಿದವರು ಸಂಭ್ರಮಾಚರಣೆ ಮಾಡುವ ಬದಲು ವಿರೋಧ ಮಾಡುತ್ತಿದ್ದ ಜನರ ಜೊತೆಗೆ ಸೇರಿಕೊಂಡರು.
ನಾನು ಆಗ ಜನತಾ ಪಕ್ಷದಲ್ಲಿದ್ದೆ. ಮಂಡಲ್ ಕಮಿಷನ್ ವರದಿ ವಿರುದ್ಧ ಮೆರವಣಿಗೆ ಹೋಗುತ್ತಾ ಇತ್ತು. ಅದರಲ್ಲಿ ನೋಡಿದ್ರೆ ನಮ್ಮವರೇ ಇದ್ರು. ನಾನು ಅವರನ್ನು ಕರೆದು ಯಾಕಪ್ಪ ನೀನು ಪ್ರತಿಭಟನೆಗೆ ಹೋಗಿದಿಯಾ? ಎಂದು ಕೇಳಿದೆ. ಅದಕ್ಕವನು ವರದಿ ಜಾರಿಯಾದ್ರೆ ನಮಗೆಲ್ಲ ಕೆಲಸ ಸಿಗಲ್ವಂತಲ್ಲ ಸಾರ್ ಎಂದ. ಪರಿಸ್ಥಿತಿ ಇಂದೂ ಹಾಗೆಯೇ ಇದೆ. ಆದ್ದರಿಂದ, ಇಂದು ನಾಗಮೋಹನ್ ದಾಸ್ ಅವರು ಹೊರತಂದಿರುವ ಪುಸ್ತಕದ ಅಗತ್ಯ ಸಾಕಷ್ಟು ಇದೆ. ಬಹಳ ಶ್ರಮ ಪಟ್ಟು ಅಂಕಿ- ಅಂಶಗಳನ್ನು ಸಂಗ್ರಹಿಸಿದ್ದಾರೆ. ಇದು ಅತ್ಯಂತ ಉಪಯುಕ್ತ ಪುಸ್ತಕ. ಇಂಥ ಅನೇಕ ವಿಚಾರಗಳು ತಮ್ಮಿಂದ ಜನರಿಗೆ ಮುಂದೆಯೂ ತಲುಪಲಿ ಎಂದು ಹಾರೈಸುತ್ತೇನೆ ಎಂದರು.
ಒಂದು ಒಪ್ಪಂದದ ಮೇರೆಗೆ ಉದ್ಯೋಗಕ್ಕೆ ತೆಗೆದುಕೊಳ್ಳುವುದು, ಇನ್ನೊಂದು ಖಾಸಗಿಯವರಿಗೆ ಹೊರ ಗುತ್ತಿಗೆಯನ್ನು ನೀಡೋದು. ಹೀಗಾದ್ರೆ ಅಲ್ಲಿ ಮೀಸಲಾತಿ ಕೇಳುವ ಹಾಗಿರಲ್ಲ. ಇರುವ 2% ಮೀಸಲಾತಿಗಾಗಿ ಚರ್ಚೆ, ಗುದ್ದಾಟ ಆಗುತ್ತಿದೆ. ಕೇಂದ್ರ ಸರ್ಕಾರದ 60 ಲಕ್ಷ ಹುದ್ದೆಗಳ ಖಾಲಿ ಇವೆ, ಕರ್ನಾಟಕ ಒಂದರಲ್ಲೇ 2 ಲಕ್ಷದ 59 ಸಾವಿರ ಹುದ್ದೆಗಳು ಖಾಲಿ ಇವೆ. 72 ವರ್ಷ ಆದರೂ ಈ ಮೀಸಲಾತಿ ಜನಸಂಖ್ಯೆಗೆ ಅನುಗುಣವಾಗಿ ಸಿಗುತ್ತಿಲ್ಲ. ರಾಜ್ಯದಲ್ಲಿ ಪರಿಶಿಷ್ಟ ಜಾತಿಯವರು 17.1% ಇದ್ದಾರೆ, ಪರಿಶಿಷ್ಟ ವರ್ಗದವರು 7% ಇದ್ದಾರೆ ಎಂದು ವಿವರಿಸಿದರು.
ಸಮಾನತೆಯ ಸಮಾಜ ನಿರ್ಮಾಣ ಆಗಲ್ಲ: ಮೀಸಲಾತಿ ಪ್ರಮಾಣ 24.1% ಆಗಬೇಕಲ್ವಾ? ಅಷ್ಟು ಆಗಿದೆಯಾ ಈಗ? ನಮಗಿನ್ನೂ ಗುಲಾಮಗಿರಿ ಮನಸ್ಥಿತಿಯೇ ಹೋಗಿಲ್ಲ. ಅಡುಗೆ ಮಾಡುವ ಒಬ್ಬ ಮೇಲ್ವರ್ಗದವರಿಗೆ ನೀಡುವ ಗೌರವವನ್ನು ವಿದ್ಯಾವಂತ, ಶ್ರೀಮಂತ ದಲಿತನಿಗೆ ನೀಡಲ್ಲ. ಒಬ್ಬರಿಗೆ ನಮಸ್ಕಾರ ಸ್ವಾಮಿ ಎನ್ನುತ್ತೇವೆ, ಇನ್ನೊಬ್ಬರಿಗೆ ಏಕ ವಚನದಲ್ಲಿ ಮಾತನಾಡಿಸುತ್ತೇವೆ. ಮೊದಲು ಇದನ್ನು ಕಿತ್ತೆಸೆದು ಸ್ವಾಭಿಮಾನ ಬರಬೇಕು. ಆಗ ಮಾತ್ರ ಗೌರವದಿಂದ ಬದುಕಲು ಸಾಧ್ಯವಾಗುತ್ತದೆ. ಮೀಸಲಾತಿ ಭಿಕ್ಷೆಯಲ್ಲ, ಇದು ಸಂವಿಧಾನಾತ್ಮಕ ಹಕ್ಕು. ನಮ್ಮಿಂದ ಕಿತ್ತುಕೊಂಡದ್ದನ್ನೇ ನಮಗೆ ಸ್ವಲ್ಪ ಸ್ವಲ್ಪ ವಾಪಾಸು ಕೊಡಿ ಎಂದು ಕೇಳುವುದು ಮೀಸಲಾತಿ. ಇದನ್ನು ಗಟ್ಟಿಯಾಗಿ ಕೇಳೋಕೆ ಯಾಕೆ ಭಯ. ನಾವು ಇಷ್ಟು ವರ್ಷ ಸುಮ್ಮನಿದ್ದಿದ್ದು ಸಾಕು, ಇನ್ನೂ ನಾವು ಸುಮ್ಮನೆ ಕೂತರೆ ಸಮಾನತೆಯ ಸಮಾಜ ನಿರ್ಮಾಣ ಆಗಲ್ಲ. ನಮ್ಮ ಜೊತೆ ಸುತ್ತಲಿನ ಸಮಾಜವನ್ನು ಬೆಳೆಸುವ ಕೆಲಸವನ್ನು ನಾವು ಮಾಡಬೇಕು. ಇದು ನಮ್ಮ ಕರ್ತವ್ಯ ಕೂಡ ಎಂದು ಸಿದ್ದರಾಮಯ್ಯ ಹೇಳಿದರು.