ಬೆಂಗಳೂರು: ಕಾಂಗ್ರೆಸ್ನಿಂದ ಹಮ್ಮಿಕೊಂಡಿರುವ ಮೇಕೆದಾಟು ಪಾದಯಾತ್ರೆ ತಡೆಯುವ ಹುನ್ನಾರದಿಂದ ಸರ್ಕಾರ ಕೋವಿಡ್ ಟಫ್ ರೂಲ್ಸ್ನ ಜಾರಿಗೊಳಿಸಿದೆ. ಆದ್ರೆ ಸೋಂಕು ಹರಡದಂತೆ ನಾವು ಪಾದಯಾತ್ರೆ ಮಾಡುತ್ತೇವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಜಂಟಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಮೇಕೆದಾಟು ಪ್ರಾಜೆಕ್ಟ್ ಈಗ ಮಾಡಿದ್ದಲ್ಲ. 2003 ರಿಂದಲೇ ಪ್ರಾಜೆಕ್ಟ್ ಇದೆ. ಈಗ ಬಿಜೆಪಿಯವರು ಅಣ್ಣಾಮಲೈಗೆ ಯಾಕೆ ಎತ್ತಿಕಟ್ಟೋದು. ಇಲ್ಲಿಯವರೆಗೆ ಇವರು ಸುಮ್ಮನಿರೋದ್ಯಾಕೆ? ಯುಪಿಯಲ್ಲಿ ಬೇರೆ ಸಿಚ್ಯುಯೇಶನ್ ಇದ್ದರೆ ಇಲ್ಲಿ ಬೇರೆಯಿದೆ. ಷಡ್ಯಂತ್ರ ಮಾಡಿದ ಮೇಲೆ ಡಿಫೆಂಡ್ ಮಾಡಿಕೊಳ್ಳಬೇಕಲ್ಲ. ಅದಕ್ಕೆ ಅವರು ನಮ್ಮನ್ನ ಹೊಣೆ ಮಾಡೋಕೆ ಹೊರಟಿದ್ದಾರೆ. ಚಾಮರಾಜನಗರ ಜಿಲ್ಲೆಯಿಂದ 36 ಜನ ಆಕ್ಸಿಜನ್ನಿಂದ ಸತ್ತಿದ್ದರು. ಇದೇ ಸುಧಾಕರ್ ಬರೀ ಮೂರೇ ಜನ ಮೃತಪಟ್ಟಿರೋದು ಎನ್ನಲಿಲ್ವಾ? ಎಂದು ವಾಗ್ದಾಳಿ ನಡೆಸಿದರು.
ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ವಿಚಾರವಾಗಿ ನಮ್ಮ ಮೇಲೆ ಕೇಸ್ ಹಾಕಿದ್ದಾರೆ. ಅವರು ಜನಾಶೀರ್ವಾದ ಯಾತ್ರೆ ಮಾಡಿದ್ರು. ಸಿಎಂ ರಾಮನಗರದಲ್ಲಿ ಸಾರ್ವಜನಿಕ ಸಭೆ ಮಾಡಿದ್ರಲ್ಲಾ? ಆಗ ಮೂರನೇ ಅಲೆ ಬಂದಿರಲಿಲ್ವೇ ಎಂದು ಸಿದ್ದರಾಮಯ್ಯ ಕಿಡಿಕಾರಿದರು.
ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಮಾತನಾಡಿ, ಕೊರೊನಾದಿಂದ ಸತ್ತವರಿಗೆ ಸರಿಯಾಗಿ ಪರಿಹಾರ ಕೊಟ್ಟಿಲ್ಲ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ಮಾಡಿದ್ದೆವು. ಆಗ ನಮ್ಮ ಮೇಲೆ ಸಮನ್ಸ್ ಇಶ್ಯೂ ಮಾಡಿದ್ದಾರೆ. ಅವರು ಯಾವುದೇ ಕಾರ್ಯಕ್ರಮ ಮಾಡಿಲ್ವಾ? ಅವರ ಮೇಲೆ ಯಾಕೆ ಕೇಸ್ ಹಾಕಿಲ್ಲ. ನಾವು ಪ್ರತಿಭಟನೆ ಅಲ್ಲ, ಪ್ರೇಯರ್ ಮಾಡ್ತಿರೋದು ಎಂದರು. ಆಗ ಮಧ್ಯಪ್ರವೇಶಿಸಿದ ಸಿದ್ದರಾಮಯ್ಯ, ಹಾಗೆಲ್ಲ ಯಾಕೆ ಹೇಳ್ತೀಯ. ನಾವು ಮಾಡ್ತಿರೋದು ಪ್ರತಿಭಟನೆಯನ್ನೇ. ಪ್ರತಿಭಟನೆ ಮಾಡ್ತಿದ್ದೇವೆ ಎಂದು ಸಮರ್ಥನೆ ನೀಡಿದರು.
ಸಚಿವರಾದ ಈಶ್ವರಪ್ಪ, ಸುಧಾಕರ್ ಹೇಳಿದಂತೆ ನಾವು ಕೇಳಲ್ಲ. ನಾವು ಪ್ರತಿಪಕ್ಷದಲ್ಲಿರೋದು. ಸರ್ಕಾರದ ಮೇಲೆ ಒತ್ತಡ ತರಬೇಕಲ್ಲ ಎಂದು ಹೇಳಿದರು. ಕುಮಾರಣ್ಣ ಬಹಳ ಮೇದಾವಿ. ಅವರ ಬಗ್ಗೆ ನಾನು ಈಗ ಮಾತನಾಡಲ್ಲ. ಅವರ ಸಂಪುಟದಲ್ಲಿ ನಾನು ಸಚಿವನಾಗಿದ್ದೆ. ಎಷ್ಟು ಬಾರಿ ನಾನು ಸೆಂಟ್ರಲ್ ಮಿನಿಸ್ಟರ್ ಭೇಟಿ ಮಾಡಿದ್ದೆ. ತಮಿಳುನಾಡು ಸಚಿವರ ಭೇಟಿಗೆ ಪತ್ರ ಬರೆದಿದ್ದೆ. ಇದೆಲ್ಲವೂ ಅವರಿಗೆ ಗೊತ್ತಿದೆ ಎಂದು ಕುಮಾರಸ್ವಾಮಿಗೆ ಡಿಕೆಶಿ ಇದೇ ವೇಳೆ ತಿರುಗೇಟು ನೀಡಿದ್ರು.
ಮಾಸ್ಕ್ ಹಾಕಿದ್ರೆ ಕೊರೊನಾ ಬರಲ್ಲ ತಾನೇ? ಕೈಗೆ ಗ್ಲೌಸ್ ಹಾಕಿದ್ರೆ ಬರಲ್ಲಾ ತಾನೇ? ಅಂತರ ಕಾಯ್ದುಕೊಂಡ್ರೆ ಕೊರೊನಾ ಬರಲ್ಲ ತಾನೇ? ಅದಕ್ಕೆ ನಾವು ಇವೆಲ್ಲಾ ಹಾಕ್ಕೊಂಡು ಪಾದಯಾತ್ರೆ ಮಾಡ್ತೀವಿ ಅಷ್ಟೇ ಎಂದಾಗ ಅದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನೋಡಿ ಹೊಸ ಮಾಸ್ಕ್ ಮಾಡಿಸಿದ್ದೇವೆ. ನೋಡಿ ಇಲ್ಲಿ ಇದೆ. ಮೇಕೆದಾಟು ಇದೆ ಎಂದು ಡಿಕೆಶಿ ಹಾಕಿದ್ದ ಮಾಸ್ಕ್ ಕಡೆ ಕೈ ತೋರಿಸಿದರು.
ಸರ್ಕಾರದ ರೂಲ್ಸ್ ಬಗ್ಗೆ ನಗೆಚಟಾಕಿ ಹಾರಿಸುವ ಮೂಲಕವೇ ಟಾಂಗ್ ಕೊಟ್ಟ ಸಿದ್ದರಾಮಯ್ಯ, 144 ಸೆಕ್ಷನ್ ಜಾರಿ ಇದ್ದರೇ ಐದಕ್ಕೂ ಹೆಚ್ಚು ಜನ ಸೇರುವಂತಿಲ್ಲ. ನಾವು ನಾಲ್ಕು ಜನ ನಡೆಯುತ್ತೇವೆ. ಜನರಿಗೆ ಪಾದಯಾತ್ರೆಗೆ ಬರಲು ಮನವಿ ಮಾಡಿದ್ದೇವೆ. ಬಂದವರಿಗೆ ಮಾಸ್ಕ್, ಸ್ಯಾನಿಟೈಸ್, ಗ್ಲೌಸ್ ಹಾಕಿಸುತ್ತೇವೆ. ನಿಯಮದ ಅನುಸಾರ ಮಾಡ್ತೇವೆ ಎಂದು ಸ್ಪಷ್ಟನೆ ನೀಡಿದರು.
ಸಿದ್ದರಾಮಯ್ಯ ಹಾಗು ಡಿಕೆಶಿ ಗದ್ದುಗೆಗಾಗಿ ಮೇಕೆದಾಟು ಪಾದಯಾತ್ರೆ ಮಾಡ್ತಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಗದ್ದುಗೆಗಾಗಿ ಪಾದಯಾತ್ರೆ ಅಲ್ಲ. ಮೊದಲು ಭ್ರಷ್ಟ ಬಿಜೆಪಿ ಸರ್ಕಾರ ತೊಲಗಬೇಕು. ಅದಕ್ಕಾಗಿ ಹೋರಾಟ ಅಷ್ಟೇ, ಪಕ್ಷ ಗೆದ್ದ ಮೇಲೆ ಗದ್ದುಗೆ ಎಂದು ತಿಳಿಸಿದರು.
ಓದಿ: ಕೋವಿಡ್ ಭೀತಿ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೂಜಾ ಸೇವೆಗಳು ರದ್ದು..