ಬೆಂಗಳೂರು : ಸಂವಿಧಾನ ಯಾರಿಗೆ ಅರ್ಥವಾಗಲ್ಲವೋ ಅವರಿಗೆ ದೇಶ ಅರ್ಥ ಆಗುವಾಗುವುದೇ ಇಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟರು.
ವಿಧಾನಸಭೆಯಲ್ಲಿ ಸಂವಿಧಾನ ಮೇಲಿನ ವಿಶೇಷ ಚರ್ಚೆ ವೇಳೆ ಮಾತನಾಡಿ, ಸಂವಿಧಾನ ಬದಲಾವಣೆಯಾಗಬೇಕು ಎಂದು ಕೆಲವರು ಹೇಳುತ್ತಾರೆ. ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾವಣೆಗೆ ಎಂದು ಮಾಜಿ ಮಂತ್ರಿಯೊಬ್ಬರು ಹೇಳಿದ್ದರು. ನಮ್ಮದು ಫ್ಲೆಕ್ಸಿಬಲ್ ಸಂವಿಧಾನ. ಹಾಗಂತ ಅದನ್ನು ಮನಸ್ಸಿಗೆ ಬಂದಂತೆ ತಿದ್ದುಪಡಿ ಮಾಡಲು ಬರುವುದಿಲ್ಲ. ಸಂವಿಧಾನದ ಮೂಲ ಸ್ವರೂಪವನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ಸಂವಿಧಾನ ಯಾರಿಗೆ ಅರ್ಥವಾಗಲ್ಲವೋ ಅವರಿಗೆ ದೇಶ ಅರ್ಥ ಆಗುವಾಗುವುದೇ ಇಲ್ಲ ಎಂದರು.
ನಮ್ಮ ಮುಂದೆ ಸಾಕಷ್ಟು ಸಮಸ್ಯೆಗಳಿವೆ. ಸಮಾನತೆ ಬಂದಿಲ್ಲ, ಸಂಸತ್, ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಸಮಾನತೆ ಬಂದಿಲ್ಲ. ಅಸ್ಪೃಶ್ಯತೆ ಹೋಗಿಲ್ಲ. ಎಲ್ಲರಿಗೂ ಅವಕಾಶ ಸಿಗುತ್ತಿಲ್ಲ. ಕುಟುಂಬ ರಾಜಕೀಯ ವ್ಯವಸ್ಥೆ ಎಲ್ಲಾ ಪಕ್ಷಗಳಲ್ಲಿ ಬಂದಿದೆ. ಪ್ರಜಾಪ್ರಭುತ್ವ ಇಂದು ನಶಿಸಿ ಹೋಗುತ್ತಿದೆ. ಮಾಫಿಯಾಗಳು ವಿಜ್ರಂಭಿಸುತ್ತಿದೆ. ಮನೆ ಕಾಲಿ ಮಾಡಿಸುವುದಕ್ಕೂ ಮಾಫಿಯಾ ಇದೆ, ಸಾಲ ವಸೂಲಿ ಮಾಡುವವರ ಮಾಫಿಯಾನೂ ಇದೆ. ಈ ಬಗ್ಗೆ ಗೊತ್ತಿದ್ದೂ ಗೊತ್ತಿದ್ದೂ ಸುಮ್ಮನಿದ್ದೇವೆ. ಚುನಾವಣೆಯಲ್ಲಿ ಜಾತಿ, ಹಣ ಮತ್ತು ತೋಳ್ಬಲ ಹೆಚ್ಚಾಗಿದೆ. ಎಲ್ಲಾ ರಾಜಕೀಯ ಪಕ್ಷಗಳು ಒಟ್ಟಾಗಿ ಚುನಾವಣಾ ಸುಧಾರಣೆ ತರಲೇ ಬೇಕು. ಚುನಾವಣೆ ವ್ಯವಸ್ಥೆಯಲ್ಲೇ ಭ್ರಷ್ಟಾಚಾರ ಸೃಷ್ಟಿಯಾಗುತ್ತಿದೆ. ಈ ಚುನಾವಣಾ ವ್ಯವಸ್ಥೆ ಬದಲಾವಣೆ ಆಗಬೇಕು ಎಂದು ಒತ್ತಾಯಿಸಿದರು.
ನಾನು ಪಕ್ಷಾಂತರ ಮಾಡಿಲ್ಲ: ನಾನು ಪಕ್ಷಾಂತರ ಮಾಡಿಲ್ಲ. ನನ್ನನ್ನು ಜೆಡಿಎಸ್ನಿಂದ ಉಚ್ಛಾಟಿಸಲಾಗಿತ್ತು. ಬಳಿಕ ಅಹಿಂದಾ ಸಂಘಟನೆ ಮಾಡುತ್ತಿದ್ದೆ. ಆಗ ಕಾಂಗ್ರೆಸ್ ಪಕ್ಷಕ್ಕೆ ನನ್ನನ್ನು ಆಹ್ವಾನಿಸಿದ್ದರು. ಅದನ್ನು ಪಕ್ಷಾಂತರ ಎಂದು ಕರೆದರೆ ನಾನು ತಿದ್ದಿಕೊಳ್ಳುತ್ತೇನೆ. ಎಐಪಿಜೆಡಿ ಎಂಬ ಪಕ್ಷವನ್ನೂ ಕಟ್ಟಿದ್ದೆ. ಅದನ್ನು ಬಳಿಕ ಕಾಂಗ್ರೆಸ್ನೊಂದಿಗೆ ವಿಲೀನಗೊಳಿಸಿದೆ ಎಂದು ತಿಳಿಸಿದರು.
ಪಕ್ಷಾಂತರ ಅತ್ಯಂತ ಮಾರಕ:ಆಪರೇಷನ್ ಕಮಲ ಹೇಳುತ್ತಿರೋ, ಆಪರೇಷನ್ ಹಸ್ತ ಅಂತಿರೋ ಅದು ಅತ್ಯಂತ ಕೆಟ್ಟದಾಗಿದೆ. ರಾಜ್ಯಸಭೆ ಚುನಾವಣೆ ವೇಳೆ ಏಳು ಜನ ಜೆಡಿಎಸ್ ಶಾಸಕರು ವಿಪ್ ಉಲ್ಲಂಘನೆ ಮಾಡಿದ್ದಾರೋ ಇಲ್ಲವೋ ಎಂದು ಸಚಿವ ಮಾಧುಸ್ವಾಮಿ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅದೂ ತಪ್ಪೇ. ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. 10ನೇ ಶೆಡ್ಯೂಲ್ ಇನ್ನಷ್ಟು ಗಟ್ಟಿಯಾಗಬೇಕು. ಇಲ್ಲವಾದರೆ ಪ್ರಜಾಪ್ರಭುತ್ವ ಉಳಿಯಲ್ಲ. ಚುನಾಯಿತ ಸರ್ಕಾರ ಉಳಿಯಲ್ಲ. ಜಾತಿ ವ್ಯವಸ್ಥೆ ಕೂಡ ಭ್ರಷ್ಟಾಚಾರಕ್ಕೆ ದೊಡ್ಡ ಕೊಡುಗೆ ನೀಡುತ್ತಿದೆ. ಜಾತಿ ವ್ಯವಸ್ಥೆಯೇ ದೇಶ ದ್ರೋಹ ಆಗಿದೆ ಎಂದು ಅಂಬೇಡ್ಕರ್ ಹೇಳಿದ್ದರು. ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಬಂದರೆ ಜಾತಿ ವ್ಯವಸ್ಥೆ ನಿರ್ಮೂಲನೆ ಆಗುತ್ತದೆ ಎಂದು ಹೇಳಿದರು.
ಸಿಎಎ ಸಂವಿಧಾನ ವಿರೋಧಿ: ಇದೇ ವೇಳೆ, ಸಿಎಎ ವಿಚಾರ ಪ್ರಸ್ತಾಪಿಸಿದ ಸಿದ್ದರಾಮಯ್ಯ, ಸರ್ಕಾರಕ್ಕೆ ಎಷ್ಟೇ ಬಹುಮತ ಇದ್ದರೂ ಅದನ್ನು ವಿರೋಧಿಸುವ ಅಧಿಕಾರ ಇದೆ. ಸಿಎಎ ಕಾನೂನು ಆಗಿದೆ, ಹಾಗಂತ ಅದನ್ನು ವಿರೋಧ ಮಾಡಬಾರದು ಎಂದಿಲ್ಲ. ಭಿನ್ನಾಭಿಪ್ರಾಯ ವ್ಯಕ್ತ ಮಾಡುವುದೇ ಪ್ರಜಾಪ್ರಭುತ್ವ. ಅದು ಪ್ರಜಾಪ್ರಭುತ್ವದ ಸೌಂದರ್ಯ. ಸಿಎಎ ಸಂವಿಧಾನ ವಿರೋಧಿಯಾಗಿದೆ. ಅದನ್ನು ಪ್ರಶ್ನಿಸುವ ಹಕ್ಕು ನಮಗಿದೆ ಎಂದು ತಿಳಿಸಿದರು. ಇದಕ್ಕೆ ಸಚಿವ ಮಾಧುಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರು. ಕಾನೂನು ಆದ ಬಳಿಕ ಅದನ್ನು ಈ ಮಟ್ಟಿಗೆ ವಿರೋಧಿಸುವ ಅವಕಾಶ ಇಲ್ಲ ಆಕ್ಷೇಪ ವ್ಯಕ್ತಪಡಿಸಿದರು.